‘ಬಿಜೆಪಿಯವರ ತರ ತಮಟೆ ಬಾರಿಸ್ಕೊಂಡು ಹೋಗಲ್ಲ, ಜನಾಶೀರ್ವಾದ ರ‍್ಯಾಲಿ ಮಾಡ್ತೀವಿ’ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

cm-1

ಬೆಂಗಳೂರು, ನ.28- ಮುಂದಿನ ವಿಧಾನಸಭೆ ಚುನಾವಣೆಯ ತಯಾರಿಗಾಗಿ ಪಕ್ಷದ ಜತೆಯಲ್ಲಿ ಜನಾಶೀರ್ವಾದ ರ‍್ಯಾಲಿ ಆಯೋಜಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈಗಾಗಲೇ ಜಿಲ್ಲಾ ಮಟ್ಟದ ಪ್ರವಾಸವನ್ನು ಹಮ್ಮಿಕೊಂಡಿದ್ದೇನೆ. ಪ್ರತಿ ದಿನ ಒಂದೆರಡು ಜಿಲ್ಲೆಗೆ ಭೇಟಿ ನೀಡುತ್ತಲೇ ಇದ್ದೇನೆ. ಆದರೆ ಎಲ್ಲಿಯೂ ತಮಟೆ ಹೊಡೆದುಕೊಂಡು ಓಡಾಡುವುದಿಲ್ಲ. ಬಿಜೆಪಿಯವರಿಗೆ ಕೆಲಸ ಇಲ್ಲದೆ ಖಾಲಿ ಕೂತಿದ್ದಾರೆ. ಹಾಗಾಗಿ ಪರಿವರ್ತನಾ ರ್ಯಾಲಿ ಮಾಡುತ್ತಿದ್ದಾರೆ. ನಮಗೆ ಮಾಡಲು ತುಂಬಾ ಕೆಲಸಗಳಿವೆ. ಒಂದೆಡೆ ಪಕ್ಷ ಸಂಘಟನೆ ಮಾಡಿಕೊಳ್ಳಬೇಕು. ಜನಪರ ಯೋಜನೆಗಳನ್ನು ಜಾರಿಗೋಳಿಸಬೇಕು. ಕಡತಗಳನ್ನು ವಿಲೇವಾರಿ ಮಾಡಬೇಕು. ಹೀಗಾಗಿ ಸದ್ಯಕ್ಕೆ ಬಿಡುವಿಲ್ಲ. ಮಾರ್ಚ್‍ನಲ್ಲಿ ಜನಾಶೀರ್ವಾದ ರ‍್ಯಾಲಿ ಮಾಡುತ್ತೇವೆ ಎಂದರು.

ಅದು ಪಕ್ಷದ ವತಿಯಿಂದಲೇ ನಡೆಯಲಿದೆ. ಸದ್ಯಕ್ಕೆ ನಾನು ಜಿಲ್ಲಾ ಪ್ರವಾಸ ಮಾಡುತ್ತಿರುವುದು ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯ ಸರ್ಕಾರಿ ಕಾರ್ಯಕ್ರಮಗಳಿಗಾಗಿ. ಸಾಮಾನ್ಯವಾಗಿ ಸರ್ಕಾರಿ ಕಾರ್ಯಕ್ರಮದಲ್ಲಿ ಪಕ್ಷದ ಅಧ್ಯಕ್ಷರು ಭಾಗವಹಿಸುವುದಿಲ್ಲ. ಅವರಿಗೆ ಇಷ್ಟವಿದ್ದರೆ ಬರಬಹುದು. ಇಲ್ಲವಾದರೆ ಇಲ್ಲ ಎಂದು ಸಿಎಂ ಹೇಳಿದರು. ಡಿ.6,7ಕ್ಕೆ ಉತ್ತರ ಕರ್ನಾಟಕ ಪ್ರವಾಸ ಮಾಡಲಾಗುವುದು. ನಾಳೆ ಶೃಂಗೇರಿಗೆ ತೆರಳಲಿದ್ದೇನೆ ಎಂದು ತಿಳಿಸಿದರು. ನಾನು ಕರ್ನಾಟಕ್ಕೆ ಮಾತ್ರ ಸೀಮಿತವಾಗಿದ್ದೇನೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲು ಹೋಗುವುದಿಲ್ಲ. ಇಲ್ಲಿನ ಜನ ನನ್ನನ್ನು ಗುರುತಿಸಿದ್ದಾರೆ. ನಾನು ಇಲ್ಲೇ ರಾಜಕಾರಣ ಮಾಡುತ್ತೇನೆ ಎಂದು ಹೇಳಿದ ಮುಖ್ಯಮಂತ್ರಿ ಅವರು, ಸೋಸಿಯಲ್ ಮೀಡಿಯಾದಲ್ಲಿ ಸಿದ್ದರಾಮಯ್ಯ ಅವರು ಮುಂದಿನ ಪ್ರಧಾನಿ ಎಂದು ಬಿಂಬಿಸುತ್ತಿರುವುದಕ್ಕೆ ಜನ ತಮ್ಮಷ್ಟಕ್ಕೆ ತಾವು ಆ ರೀತಿ ಹೇಳುತ್ತಾರೆ. ಅದಕ್ಕೆಲ್ಲಾ ಏನೂ ಮಾಡಲು ಆಗುವುದಿಲ್ಲ. ಚಂದ್ರ ಲೋಕಕ್ಕೆ ಕಳುಹಿಸುತ್ತೇವೆ ಎಂದಾಕ್ಷಣ, ನಾವು ಅಲ್ಲಿಗೆ ಹೋಗಲು ಸಾಧ್ಯವೇ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಿಜೆಪಿ ನಾಯಕರಿಗೆ ಸಚಿವರಾದ ವಿನಯ್‍ಕುಲಕರ್ಣಿ, ಕೆ.ಜೆ.ಜಾರ್ಜ್ ಅವರ ರಾಜೀನಾಮೆ ಕೇಳುವ ನೈತಿಕ ಹಕ್ಕಿಲ್ಲ. ಯಡಿಯೂರಪ್ಪ ಅವರ ವಿರುದ್ಧ 20 ಕ್ರಿಮಿನಲ್ ಮೊಕದ್ದಮೆಗಳಿವೆ. ಉತ್ತರ ಪ್ರದೇಶದ ಸಿಎಂ ವಿರುದ್ಧ ಐಪಿಸಿ 307 ಪ್ರಕರಣ ಇದೆ. ಕೇಂದ್ರ ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ. ಮೊದಲು ಅವರು ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು. ಬಿಜೆಪಿಯ ಜಿಪಂ ಸದಸ್ಯ ಯೋಗೀಶ್‍ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ನ್ಯಾಯಾಲಯದಲ್ಲಿ ಈಗಾಗಲೇ ಸಾಕ್ಷ್ಯಗಳ ವಿಚಾರಣೆ ಆರಂಭವಾಗಿದೆ. ವಿನಯ್‍ಕುಲಕರ್ಣಿ ಅವರ ವರ್ಚಸ್ಸಿಗೆ ಮಸಿ ಬಳಿಯುವ ಸಲುವಾಗಿ ಅವರ ವಿರುದ್ಧ ಆರೋಪ ಮಾಡಲಾಗುತ್ತಿದೆ. ವಿನಯ್ ಕುಲಕರ್ಣಿ ಯಾವ ತಪ್ಪೂ ಮಾಡಿಲ್ಲ. ಇನ್ನು ಜಾರ್ಜ್ ಮೇಲಿನ ಆರೋಪ ಸಂಪೂರ್ಣ ರಾಜಕೀಯ ಪ್ರೇರಿತ ಎಂದು ತಳ್ಳಿ ಹಾಕಿದರು. ಇದೇ ಸಂದರ್ಭದಲ್ಲಿ ನ.30ರಂದು ನಿವೃತ್ತರಾಗುತ್ತಿರುವ ಸರ್ಕಾರದ ಮುಖ್ಯಕಾರ್ಯದರ್ಶಿ ಸುಭಾಷ್‍ಚಂದ್ರ ಕುಂಟಿಯಾ ಅವರನ್ನು ಸನ್ಮಾನಿದರು. ರಾಜ್ಯದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಸುಭಾಷ್ ಚಂದ್ರ ಕುಂಟಿಯಾ ಅವರು ಕೈ, ಬಾಯಿ ಸ್ವಚ್ಛವಾಗಿಟ್ಟುಕೊಂಡು ಉತ್ತಮ ಆಡಳಿತ ನೀಡಿದ್ದಾರೆ. ಮುಂದಿನ ದಿನಗಳಲ್ಲೂ ಅವರ ಸಹಕಾರ ರಾಜ್ಯ ಸರ್ಕಾರಕ್ಕೆ ಅಗತ್ಯವಿದೆ ಎಂದು ಹೇಳಿದರು. ಸಚಿವರಾದ ಡಿ.ಕೆ.ಶಿವಕುಮಾರ್, ಪ್ರಿಯಾಂಕ್‍ಖರ್ಗೆ, ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಸರ್ಕಾರದ ವಿವಿಧ ಹಂತದ ಐಎಎಸ್ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಹಾಜರಿದ್ದರು.

Facebook Comments