ಮುತ್ತಿನ ನಗರಿಯಲ್ಲಿ ಜಿಇಎಸ್ ಶೃಂಗಸಭೆಗೆ ಪ್ರಧಾನಿ ಮೋದಿ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Modi--01

ಹೈದರಾಬಾದ್, ನ.27-ಇಡೀ ವಿಶ್ವದ ಗಮನ ಸೆಳೆದಿರುವ ಜಾಗತಿಕ ಉದ್ಯಮಶೀಲತೆ ಶೃಂಗಸಭೆಗೆ(ಜಿಇಎಸ್) ಮುತ್ತಿನ ನಗರಿ ಹೈದರಾಬಾದ್‍ನಲ್ಲಿ ಇಂದು ವಿದ್ಯುಕ್ತ ಚಾಲನೆ ದೊರೆತಿದೆ. ಮಹಿಳೆಗೆ ಪ್ರಥಮಾದ್ಯತೆ ಸರ್ವರಿಗೂ ಸಮೃದ್ಧಿ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುತ್ತಿರುವ ಈ ಶೃಂಗಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ದೇವೇಂದ್ರನ ಇಂದ್ರಪ್ರಸ್ಥದಂತೆ ಕಂಗೊಳಿಸುತ್ತಿರುವ ಹೈದರಾಬಾದ್‍ನ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ(ಎಚ್‍ಐಸಿಸಿ) ನಡೆದ ಈ ಭವ್ಯ ಸಮಾವೇಶದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಮತ್ತು ಸಲಹೆಗಾರ್ತಿ ಇವಾಂಕಾ ಟ್ರಂಪ್, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೇರಿದಂತೆ ಅನೇಕ ಮಂತ್ರಿ ಮಹೋದಯರು, ವಿಶ್ವದ ವಿವಿಧ ದೇಶಗಳ ಉದ್ಯಮಿಗಳು, ಖಾತ್ಯ ವಾಣಿಜೋದ್ಯಮಿಗಳು ಹಾಗೂ ವಿವಿಧ ಕ್ಷೇತ್ರಗಳ ಖ್ಯಾತನಾಮರು ಭಾಗವಹಿಸಿದ್ದರು.

ಇಂದು ಬೆಳಗ್ಗೆಯೇ ಹೈದರಾಬಾದ್‍ಗೆ ಆಗಮಿಸುವುದಕ್ಕೆ ಮುನ್ನ ಜಿಇಎಸ್ ಕುರಿತು ಟ್ವೀಟ್ ಮಾಡಿರುವ ಮೋದಿ, ಮಹಿಳೆಗೆ ಪ್ರಥಮಾದ್ಯತೆ, ಸರ್ವರಿಗೂ ಸಮೃದ್ಧಿ ಎಂಬುದು ಈ ಶೃಂಗಸಭೆಯ ಧ್ಯೇಯವಾಕ್ಯವಾಗಿದೆ. ಇದೆ ಮೊದಲ ಬಾರಿಗೆ 1,200ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳಿಗೆ ಈ ಸಮಾವೇಶದಲ್ಲಿ ದೊಡ್ಡ ಮಟ್ಟದ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

ಇಂದು ಬೆಳಗ್ಗೆ ಹೈದರಾಬಾದ್‍ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಆಗಮಿಸಿದ ಇವಾಂಕಾರನ್ನು ಭಾರತದ ನೂತನ ರಾಯಭಾರಿ ಕೆನ್ನೆತ್ ಜಸ್ಟರ್, ವಾಷಿಂಗ್ಟನ್‍ನಲ್ಲಿ ನವದೆಹಲಿಯ ರಾಜಭಾರಿಯಾಗಿರುವ ನವ್‍ತೇಜ್ ಸರ್ನಾ ಮೊದಲಾದವರು ಸ್ವಾಗತಿಸಿದರು. ಸಮಾವೇಶದ ಬಗ್ಗೆ ಟ್ವೀಟ್ ಮಾಡಿರುವ ಅಮೆರಿಕ ವಿದೇಶಾಂಗ ಸಚಿವ ರೆಕ್ಸ್ ಟಿಲ್ಲರ್‍ಸನ್, ಅನ್ವೇಷಣೆಗಳು ಮತ್ತು ಉದ್ಯೋಗ ಸೃಷ್ಟಿ ವಿಸ್ತರಣೆಯಲ್ಲಿ ಟ್ರಂಪ್ ಮತ್ತು ಮೋದಿ ಅವರ ದಿಟ್ಟ ಹೆಜ್ಜೆಗೆ ಇದು ನಿದರ್ಶನವಾಗಿದೆ ಎಂದು ಹೇಳಿದ್ದಾರೆ.

170ಕ್ಕೂ ಹೆಚ್ಚು ದೇಶಗಳ 1500ಕ್ಕೂ ಅಧಿಕ ಅತಿಗಣ್ಯ ವ್ಯಕ್ತಿಗಳು, ಪ್ರಭಾವಿ ಉದ್ಯಮಿಗಳು ಪ್ರತಿನಿಧಿಗಳು ಈ ಸಮಾವೇಶದ ಲ್ಲಿ ಭಾಗವಹಿಸಿರುವ ಹಿನ್ನೆಲೆಯಲ್ಲಿ ಮುತ್ತಿನ ನಗರಾದ್ಯಂತ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. 10,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಶೃಂಗಸಭೆ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಕಾರಣ ಇಂದು ಹೈದರಾಬಾದ್‍ನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.  ಇವಾಂಕಾ ಟ್ರಂಪ್ ವಾಸ್ತವ್ಯ ಹೂಡಲಿರುವ ಹೈಟೆಕ್ ಸಿಟಿಯ ಟ್ರಿಡೆಂಟ್ ಹೋಟೆಲ್‍ಗೆ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಇವಾಂಕಾ ಗೌರವಾರ್ಥ ಪ್ರಧಾನಿ ಮೋದಿ ಹೈದರಾಬಾದ್‍ನ ಫಲಕುಮಾ ಪ್ಯಾಲೆಸ್‍ನಲ್ಲಿ ಬೃಹತ್ ಔತಣಕೂಟದ ವ್ಯವಸ್ಥೆ ಮಾಡಿದ್ದಾರೆ.

ಇಂಧನ, ಮೂಲಸೌಕರ್ಯಾಭಿವೃದ್ದಿ, ಆರೋಗ್ಯ ಆರೈಕೆ, ಜೀವ ವಿಜ್ಞಾನ, ಆರ್ಥಿಕ ತಂತ್ರಜ್ಞಾನ, ಡಿಜಿಟಲ್ ಆರ್ಥಿಕತೆ ಹಾಗೂ ಮಾಧ್ಯಮ ಮತ್ತು ಮನರಂಜನೆ ವಲಯಗಳ ಮೇಲೆ ಕೇಂದ್ರೀಕೃತವಾಗಿರುವ ಈ ಸಮಾವೇಶದಲ್ಲಿ ಹಲವು ಮಹತ್ವದ ಒಡಂಬಡಿಕೆಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ.

Facebook Comments

Sri Raghav

Admin