ಹೈಕಮಾಂಡ್ ಟಿಕೆಟ್ ಕೊಟ್ಟರೆ ನಾನೇ ಸ್ಪರ್ಧಿಸುತ್ತೇನೆ, ನನ್ನ ಪತ್ನಿ-ಮಗ ಸ್ಪರ್ಧಿಸಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Ambarish--001

ಬೆಂಗಳೂರು, ನ.28- ಹೈಕಮಾಂಡ್ ಟಿಕೆಟ್ ಕೊಟ್ಟರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನೇ ಸ್ಪರ್ಧಿಸುತ್ತೇನೆ. ನನ್ನ ಹೊರತುಪಡಿಸಿ ನನ್ನ ಪತ್ನಿಯಾಗಲಿ, ಮಗನಾಗಲಿ ಸ್ಪರ್ಧಿಸುವುದಿಲ್ಲ ಎಂದು ಶಾಸಕ ಹಾಗೂ ಹಿರಿಯ ನಟ ಅಂಬರೀಶ್ ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಗೃಹ ಕಚೇರಿಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕೋ, ಬೇಡವೋ ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ. ಟಿಕೆಟ್ ಕೊಟ್ಟು ಸ್ಪರ್ಧೆ ಮಾಡಲು ಸೂಚಿಸಿದರೆ ಸ್ಪರ್ಧಿಸುತ್ತೇನೆ. ಇಲ್ಲವಾದರೆ ಗೊತ್ತಿಲ್ಲ ಎಂದರು.

ಜನ ಬಯಸಿದರೆ ರಾಜಕೀಯದಲ್ಲಿ ಇರಲು ಸಾಧ್ಯ. ನಾನೇ ಎಲ್ಲರಿಗಿಂತ ದೊಡ್ಡವನು ಎನ್ನಲು ಸಾಧ್ಯವಿಲ್ಲ. ನಾನು ಎಂದಿಗೂ ದೊಡ್ಡವನು ಎಂದುಕೊಂಡಿಲ್ಲ. ಪಕ್ಷ, ಜನ ಬಯಸಿದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ ಎಂದು ಹೇಳಿದರು. ಜೆಡಿಎಸ್, ಬಿಜೆಪಿಯವರು ನನ್ನ ಜತೆ ದಿನಾಲೂ ಮಾತನಾಡುತ್ತಾರೆ. ಒಟ್ಟಿಗೆ ಊಟ ಮಾಡುತ್ತೇವೆ. ಪ್ರತಿ ದಿನ ಅವರು ನನ್ನನ್ನು ಕರೆಯುತ್ತಲೇ ಇದ್ದಾರೆ ಎಂದರು. ಪಕ್ಷಕ್ಕೆ ಆಹ್ವಾನ ಇದೆಯೇ ಎಂಬ ಪ್ರಶ್ನೆಗೆ, ದಿನಾ ಒಟ್ಟಾಗಿ ಬೆರೆತು ಮಾತುಕತೆ ಮಾಡುತ್ತೇವೆ. ರಾಜಕಾರಣ ಪ್ರಮುಖ ಅಲ್ಲ. ನಾನು ಜೆಡಿಎಸ್‍ನಿಂದ ಸಂಸದನಾಗಿದ್ದವನು. ದೇವೇಗೌಡರು ಸೇರಿದಂತೆ ಎಲ್ಲರ ಜತೆ ಉತ್ತಮ ಬಾಂಧವ್ಯ ಇದೆ ಎಂದು ಹೇಳಿದರು.

ನಟಿ ರಮ್ಯಾ ಮಂಡ್ಯದಲ್ಲಿ ಬಂದು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಸ್ವಾಗತಿಸುತ್ತೇನೆ. ಈಗ ಆಕೆ ಸ್ಟಾರ್ ಕ್ಯಾಂಪೇನರ್, ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್‍ನ ಸೋಷಿಯಲ್ ಮೀಡಿಯವನ್ನು ನಿರ್ವಹಿಸುತ್ತಿದ್ದಾರೆ. ಅವರಿಗೆ ಪಕ್ಷ ಟಿಕೆಟ್ ಕೊಟ್ಟರೆ ಅವರ ಪರವಾಗಿ ಕೆಲಸ ಮಾಡಲೇಬೇಕು ಎಂದು ತಿಳಿಸಿದರು. ಕಳೆದ ಚುನಾವಣೆಯಲ್ಲಿ ಪಕ್ಷದ ವಿರುದ್ಧವಾಗಿ ಕೆಲಸ ಮಾಡಿದವರೆಗೆ ಟಿಕೆಟ್ ಕೊಡಬೇಡಿ ಎಂದು ಒತ್ತಡ ಹಾಕಿದ್ದು ನಿಜ. ಅದನ್ನು ಬಿಟ್ಟು ನನ್ನ ಬೆಂಬಲಿಗರಿಗೆ ಟಿಕೆಟ್ ಕೊಡಿ ಎಂದು ನಾನು ಕೇಳಿಲ್ಲ. ಯಾರೂ ತಪ್ಪಾಗಿ ಅರ್ಥೈಯಿಸಬಾರದು ಎಂದು ಹೇಳಿದರು.

Facebook Comments

Sri Raghav

Admin