ಡಾ. ಕಾಮಿನಿ ರಾವ್ ಸೇರಿ ಘಟಾನುಘಟಿ ಬಿಲ್ಡರ್‍ಗಳಿಗೆ ಐಟಿ ಶಾಕ್

ಈ ಸುದ್ದಿಯನ್ನು ಶೇರ್ ಮಾಡಿ

Kamini-Roa--01

ಬೆಂಗಳೂರು,ನ.29- ಹೆಸರಾಂತ ಸ್ತ್ರೀ ರೋಗ-ಬಂಜೆತನ ನಿವಾರಣೆ ತಜ್ಞೆ ಡಾ.ಕಾಮಿನಿ ಎ.ರಾವ್ ಸೇರಿದಂತೆ ಕೆಲವು ಬಿಲ್ಡರ್ಸ್‍ಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು(ಐಟಿ) ಇಂದು ದಿಢೀರನೆ ದಾಳಿ ನಡೆಸಿ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ. ಶಿವಾನಂದ ವೃತ್ತದಲ್ಲಿರುವ ಡಾ.ಕಾಮಿನಿ ಎ.ರಾವ್ ಒಡೆತನದ ಮಿಲನ್ ಆಸ್ಪತ್ರೆ ಹಾಗೂ ಅವರ ಮಾಲೀಕತ್ವದಲ್ಲಿರುವ ಚಿಕ್ಕಪೇಟೆ, ಕಾಟನ್‍ಪೇಟೆ ಸೇರಿದಂತೆ ಔಷಧಿ ವಿತರಣೆ ಮಾಡುವ ಏಳು ಮಳಿಗೆಗಳ ಮೇಲೆಯೂ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಬೆಳಗ್ಗೆ 7 ಗಂಟೆಯಿಂದಲೇ ನೂರಾರು ಅಧಿಕಾರಿಗಳ ತಂಡ ಕಾಮಿನಿ ರಾವ್ ಅವರ ಆಸ್ಪತ್ರೆ, ನಿವಾಸ ಹಾಗೂ ಔಷಧಿ ವಿತರಣಾ ಮಳಿಗೆಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಡಾ.ಕಾಮಿನಿ ಎ.ರಾವ್, ಕಳೆದ ನ.8ರಂದು 500 ಹಾಗೂ 1000 ರೂ. ಮುಖಬೆಲೆಯ ನೋಟು ಅಮಾನೀಕರಣವಾದ ನಂತರ ಭಾರೀ ಪ್ರಮಾಣದ ವಹಿವಾಟು ನಡೆಸಿದ್ದರೆಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಐಟಿ ತಂಡ ಅತ್ಯಂತ ಗೌಪ್ಯವಾಗಿ ದಾಳಿ ನಡೆಸಿ ಕಳೆದ ಒಂದು ವರ್ಷದಲ್ಲಿ ನಡೆಸಿರುವ ಬ್ಯಾಂಕ್ ವಹಿವಾಟು, ಚಾಲ್ತಿ ಖಾತೆಯಲ್ಲಿರುವ ನಗದು, ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಆಸ್ತಿಪಾಸ್ತಿ, ಚಿರ-ಚರಾಸ್ತಿಗಳನ್ನು ಸಹ ಪರಿಶೀಲನೆ ನಡೆಸಿದೆ.

ಚೆನ್ನೈ ಹಾಗೂ ಗೋವಾದಿಂದ ಆಗಮಿಸಿದ ಐಟಿ ತಂಡ ಕಳೆದ 15 ದಿನಗಳಿಂದ ನಗರದಲ್ಲಿ ಬೀಡುಬಿಟ್ಟು ಅವರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಮೂಲಗಳ ಪ್ರಕಾರ ಡಾ.ಕಾಮಿನಿ.ಎ ರಾವ್ ಅವರ ಆದಾಯವನ್ನು ಪತ್ತೆ ಹಚ್ಚಲೆಂದೇ ಈ ದಾಳಿ ನಡೆದಿದೆ. ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕಾಮಿನಿರಾವ್ ಭಾರತೀಯ ವೈದ್ಯಕೀಯ ಸಂಘ ಸೇರಿದಂತೆ ಅನೇಕ ಸಂಘಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ದಾಖಲೆಗಳ ಪರಿಶೀಲನೆ ನಂತರ ಐಟಿ ಅಧಿಕಾರಿಗಳ ತಂಡ ಡಾ.ಕಾಮಿನಿ ಎ.ರಾವ್ ಅವರ ಪುತ್ರನನ್ನು ತಮ್ಮ ಜೊತೆ ಕರೆದೊಯ್ದಿದ್ದಾರೆ.

ಬಿಲ್ಡರ್ಸ್‍ಗಳಿಗೂ ಶಾಕ್:

ಇನ್ನು ಐಟಿ ಅಧಿಕಾರಿಗಳು ಕೆಲವು ಪ್ರತಿಷ್ಠಿತ ಖಾಸಗಿ ಬಿಲ್ಡರ್ಸ್‍ಗಳ ಮೇಲೂ ಇಂದು ದಿಢೀರನೆ ದಾಳಿ ನಡೆಸಿ ಅಪಾರ ಪ್ರಮಾಣದ ನಗದು ಮತ್ತು ದಾಖಲೆಗಳನ್ನು ಪತ್ತೆಹಚ್ಚಿದ್ದಾರೆ. ನಗರದ ವಿವಿಧ ಕಡೆ ಬಿಲ್ಡರ್ಸ್‍ಗಳ ಕಚೇರಿ, ಮನೆ, ಆಪ್ತರು, ಕುಟುಂಬದ ಸದಸ್ಯರು ಸೇರಿದಂತೆ 21 ಕಡೆ ದಾಳಿ ನಡೆಸಲಾಗಿದೆ. ಈ ಬಿಲ್ಡರ್ಸ್‍ಗಳು ಕಾನೂನು ಬಾಹಿರವಾಗಿ ಕೋಟ್ಯಂತರ ರೂ. ಹಣದ ವಹಿವಾಟು ನಡೆಸಿದ್ದಾರೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ದಾಳಿ ಸಂದರ್ಭದಲ್ಲಿ ಅಧಿಕಾರಿಗಳಿಗೆ ತೆರಿಗೆ ವಂಚನೆ ಮಾಡಿರುವ ದಾಖಲೆಗಳು ಹಾಗೂ ಭಾರೀ ಪ್ರಮಾಣದ ಬ್ಯಾಂಕ್ ವಹಿವಾಟು ನಡೆಸಿರುವುದನ್ನು ಪತ್ತೆಹಚ್ಚಲಾಗಿದೆ.

ನೋಟು ಅಮಾನೀಕರಣ ಸಂದರ್ಭದಲ್ಲಿ ಈ ಬಿಲ್ಡರ್ಸ್‍ಗಳು 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ವ್ಯಾಪಕ ಪ್ರಮಾಣದಲ್ಲಿ ಬದಲಾಯಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಮಧ್ಯವರ್ತಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳ ಜೊತೆ ಶಾಮೀಲಾಗಿ ಹೊಸ ನೋಟುಗಳನ್ನು ಪಡೆದುಕೊಂಡಿದ್ದರು.
ಇದಕ್ಕಾಗಿ ಮಧ್ಯವರ್ತಿಗಳಿಗೆ ಹೆಚ್ಚಿನ ಪ್ರಮಾಣದ ಕಮೀಷನ್ ನೀಡಿದ್ದರು ಎನ್ನಲಾಗಿದೆ. ಈ ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ ಐಟಿ ತಂಡ ದಾಳಿ ನಡೆಸಿದೆ. ಕೆಲ ತಿಂಗಳ ಹಿಂದಷ್ಟೆ ಸಚಿವರಾದ ರಮೇಶ್ ಜಾರಕಿ ಹೊಳಿ, ಡಿ.ಕೆ.ಶಿವಕುಮಾರ್, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬಾಳ್ಕರ್ ಸೇರಿದಂತೆ ಮತ್ತಿತರ ಮೇಲೆ ಐಟಿ ದಾಳಿ ನಡೆದಿತ್ತು.

Facebook Comments

Sri Raghav

Admin