ದತ್ತ ಜಯಂತಿ-ಈದ್ ಮಿಲಾದ್ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿಷೇಧಾಜ್ಞೆ

ಈ ಸುದ್ದಿಯನ್ನು ಶೇರ್ ಮಾಡಿ

Chikkamagaluru--01

ಚಿಕ್ಕಮಗಳೂರು,ನ.29- ದತ್ತ ಜಯಂತಿ ಮತ್ತು ಈದ್‍ಮಿಲಾದ್ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಾಲ್ಕು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಹಾಗೂ ಜಿಲ್ಲಾಧಿಕಾರಿ ಶ್ರೀರಂಗಯ್ಯ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.  ದತ್ತ ಜಯಂತಿ ಮತ್ತು ಈದ್ ಮಿಲಾದ್ ಯಾವುದೇ ಅಡತಡೆಯಿಲ್ಲದೆ ನಿರ್ವಿಘ್ನ ನಡೆಯುವಂತೆ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಗಾಗಿ ಸಕಲ ಭದ್ರತೆ ಒದಗಿಸಲಾಗಿದೆ ಎಂದರು.

ಇದೇ 30 ಮಧ್ಯರಾತ್ರಿಯಿಂದ ಡಿ.3ರ ಮಧ್ಯ ರಾತ್ರಿವರೆಗೆ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿರುತ್ತದೆ. ಮದ್ಯ ಮಾರಾಟ ನಿಷೇಧಿಸಲಾಗಿದ್ದು, ಅಕ್ಕಪಕ್ಕದ ಜಿಲ್ಲೆಗಳಾದ ಹಾಸನ, ಶಿವಮೊಗ್ಗದಲ್ಲೂ ಕೂಡ ಮದ್ಯ ನಿಷೇಧ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಡಿ.1ರಂದು ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‍ನವರು ನಗರದಲ್ಲಿ ಅನುಸೂಯ ಜಯಂತಿ ಅಂಗವಾಗಿ ಮಹಿಳೆಯರ ಸಂಕಿರಣ ಯಾತ್ರೆ ನಡೆಸುವರು ಅದಕ್ಕೆ ಅವಕಾಶ ಕಲ್ಪಿಸಲಾಗಿದೆ. ಡಿ.2ರಂದು ಒಂದೇ ದಿನ ದತ್ತ ಜಯಂತಿ ಶೋಭಯಾತ್ರೆ ಮತ್ತು ಈದ್ ಮಿಲಾದ್ ಬಂದಿದ್ದು , ಅಂದು ಮುಸ್ಲಿಮರಿಗೆ ಬೆಳಗ್ಗೆ 8ರಿಂದ 12ವರೆಗೆ ಮೆರವಣಿಗೆಗೆ ಹಾಗೂ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6ರವರೆಗೆ ಹಿಂದುಗಳ ಶೋಭಯಾತ್ರೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಕಾಮಧೇನು ಗಣಪತಿ ದೇವಾಲಯದಲ್ಲಿ ಬಸವನಹಳ್ಳಿ ಮುಖ್ಯರಸ್ತೆ , ಎಂ.ಜಿ.ರಸ್ತೆ ಮಾರ್ಗವಾಗಿ ಅಜಾದ್ ಪಾರ್ಕ್‍ನಲ್ಲಿ ಶೋಭಯಾತ್ರೆ ಕೊನೆಗೊಳ್ಳಲಿದ್ದು, ರಾತ್ರಿ 8.30ರವರೆಗೆ ವೇದಿಕೆ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಲಾಗಿದೆ. ಡಿ.3ರಂದು ಬಾಬಾಬುಡನಗಿರಿ ಇನಾಂ ದತ್ತ ಪೀಠದಲ್ಲಿ ದತ್ತ ಜಯಂತಿ ನಡೆಸಲಾಗುವುದು. ಜಿಲ್ಲಾಡಳಿತದಿಂದ ನಡೆಯುವ ದತ್ತ ಜಯಂತಿ ಕಾರ್ಯಕ್ರಮದಲ್ಲಿ ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ದತ್ತ ಗುಹೆಯೊಳಗೆ ತೆರಳಿ ಪಾದುಕೆಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

ಕುಡಿಯುವ ನೀರಿನ ವ್ಯವಸ್ಥೆ, ತುರ್ತು ವೈದ್ಯಕೀಯ ಚಿಕಿತ್ಸೆ ವ್ಯವಸ್ಥೆ , ಹೋಮಹವನ ಮಾಡಿಕೊಳ್ಳಲು ವಿವಾದಿತ ಸ್ಥಳದಿಂದ 100 ಮೀ ಹೊರಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳಲು ಅವಕಾಶ ನೀಡಲಾಗಿದೆ. ನಗರದಲ್ಲಿ ಭಿತ್ತಿಚಿತ್ರ, ಕಟೌಟ್‍ಗಳು, ಬಂಟಿಂಗ್ಸ್‍ಗಳನ್ನು ಹಾಕುವಂತಿಲ್ಲ. ಪ್ರಚೋದನಕಾರಿ ಘೋಷಣೆ ಕೂಗುವಂತಿಲ್ಲ. ಕೂಗಿದವರ ಬಳಿ ಬಾಂಡ್‍ಗಳನ್ನು ಬರೆಸಿಕೊಳ್ಳಲಾಗಿದೆ. ಅಲ್ಲದೆ ಚಿತ್ರದುರ್ಗ, ಶಿವಮೊಗ್ಗ, ಉಡುಪಿ, ತುಮಕೂರು ಜಿಲ್ಲೆಗಳ 67 ಮಂದಿಗಳಿಂದ ಬಾಂಡ್ ಬರೆಸಿಕೊಳ್ಳಲಾಗಿದೆ. ಒಟ್ಟು 14 ಚಕ್ ಪೋಸ್ಟ್ ನಿರ್ಮಿಸಿದ್ದು ದತ್ತ ಪೀಠದಲ್ಲಿ 21 ಸಿಸಿಟಿವಿ, ಚಿಕ್ಕಮಗಳೂರು ನಗರದಲ್ಲಿ 10 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ದತ್ತ ಪೀಠಕ್ಕೆ ತೆರಳಲು ಬಸ್‍ಗಳನ್ನು ನಿಷೇಧಿಸಲಾಗಿದೆ, ಮಿನಿ ಬಸ್‍ಗಳಲ್ಲಿ ಮಾತ್ರ ತೆರಳಲು ಅವಕಾಶವಿದೆ. ಪ್ರವಾಸಿಗರಿಗೆ ಮೂರು ದಿನಗಳ ಕಾಲ ನಿರ್ಬಂಧ ಹೇರಲಾಗಿದೆ ಎಂದು ವಿವರಿಸಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಚ್.ಜಗದೀಶ್ ಇದ್ದರು

Facebook Comments

Sri Raghav

Admin