ದೇಶ ಮಾರಿದ್ದರೆ ನೀವು ಪ್ರಧಾನಿಯಾಗುತ್ತಿರಲಿಲ್ಲ, ರಾಕೆಟ್ ಹಾರುತ್ತಿರಲಿಲ್ಲ: ಮೋದಿಗೆ ಖರ್ಗೆ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

Modi-and-Kharge

ಕಲಬುರಗಿ, ನ.29- ಯಾರಾದರೂ ದೇಶವನ್ನು ಮಾರಾಟ ಮಾಡಿದ್ದರೆ ಇಂದು ನರೇಂದ್ರ ಮೋದಿ ಪ್ರಧಾನಿಯಾಗುತ್ತಿರಲಿಲ್ಲ ಮತ್ತು ರಾಕೆಟ್ ಹಾರುತ್ತಿರಲಿಲ್ಲ ಎಂದು ಹೇಳುವ ಮೂಲಕ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿರುಗೇಟು ನೀಡಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ವಿಪಕ್ಷ ನಾಯಕ ಖರ್ಗೆ ಅವರು, ಚುನಾವಣೆ ವೇಳೆ ಜನರ ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಸಲಹೆ ಮಾಡಿದರು.

ನೀವು ಚಹಾ ಮಾರಿದ್ದನ್ನೇ ಎಷ್ಟು ದಿನ ಹೇಳಿಕೊಂಡು ತಿರುಗಾಡುತ್ತೀರಿ. ಯಾರಾದರೂ ದೇಶವನ್ನು ಮಾರಾಟ ಮಾಡಿದ್ದರೆ ದೇಶದಲ್ಲಿ ಅಭಿವೃದ್ಧಿಯಾಗುತ್ತಿರಲಿಲ್ಲ. ಹಸಿರು ಕ್ರಾಂತಿ ಮೂಲಕ ಜನರ ಹಸಿವನ್ನು ನೀಗಿಸಿದ್ದು ಕಾಂಗ್ರೆಸ್ ಸರ್ಕಾರ. ದೇಶದಲ್ಲಿ ತಿನ್ನಲು ಅನ್ನವಿಲ್ಲದಿದ್ದಾಗ ದೇಶ ಕಟ್ಟಿದವರು ನಾವು. ನಿಮ್ಮ ಆಡಳಿತದಲ್ಲಿ ನೀವು ಕೈಗೊಳ್ಳುತ್ತಿರುವ ನಿರ್ಣಯಗಳು ಸರಿಯಾಗಿವೆಯೇ..? ಜನಪರವಾಗಿವೆಯೇ ಎಂಬುದನ್ನು ನೋಡಿಕೊಳ್ಳಿ ಎಂದು ಅವರು ತೀಕ್ಷ್ಣವಾಗಿ ಮೋದಿಯವರಿಗೆ ಸೂಚಿಸಿದ್ದಾರೆ.

ಚುನಾವಣೆಗಳು ಬಂದಾಗ ಜನರನ್ನು ಹಾದಿ ತಪ್ಪಿಸುವ ಉದ್ದೇಶದಿಂದಲೇ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತ ತಿರುಗಾಡುವುದು ಸರಿಯಲ್ಲ ಮತ್ತು ಸಮಂಜಸವೂ ಅಲ್ಲ. ಚುನಾವಣೆಯಲ್ಲಿ ಮುಂದೆ ಏನಾಗುತ್ತದೆಯೋ ಎಂಬುದನ್ನು ಈಗಲೇ ಹೇಳಲಾಗುವುದಿಲ್ಲ. ಚುನಾವಣೆಗಳಲ್ಲಿ ಸೋಲುವ ಹತಾಶೆಯಿದ್ದರೂ ಅನಗತ್ಯವಾಗಿ ಗೊಂದಲ ಉಂಟುಮಾಡುವ ಮತ್ತು ಜನರ ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ನೀಡಬಾರದು ಎಂದು ಖರ್ಗೆ ಪ್ರಧಾನಿಗೆ ತಿರುಗೇಟು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರದ ವೇಳೆ ಗುಜರಾತ್‍ನಲ್ಲಿ ನಾನು ಟೀ ಮಾರಿದ್ದೇನೆ. ಆದರೆ, ದೇಶ ಮಾರಿಲ್ಲ ಎಂದು ಹೇಳಿದ್ದರು. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಉತ್ತರ ನೀಡಿದ್ದಾರೆ.

Facebook Comments

Sri Raghav

Admin