ಬಿಬಿಎಂಪಿ ಸಭೆಯಲ್ಲಿ ಮಹಿಳೆಯರು ಮಾತನಾಡಲು ‘ಪಿಂಕ್ ಅವರ್’ ಮೀಸಲು

ಈ ಸುದ್ದಿಯನ್ನು ಶೇರ್ ಮಾಡಿ

Pink-Hour--02

ಬೆಂಗಳೂರು, ನ.29- ಬಿಬಿಎಂಪಿ ಸಭೆಯಲ್ಲಿ ಮಹಿಳೆಯರಿಗೆ ಮಾತನಾಡಲು ಅವಕಾಶವನ್ನು ನೀಡುವುದಿಲ್ಲ ಎಂಬ ಅಪವಾದಕ್ಕೆ ಇದೀಗ ಮೇಯರ್ ಸಂಪತ್ ರಾಜ್ ತೆರೆ ಎಳೆದಿದ್ದು , ಅವರಿಗಾಗಿಯೇ ಪಿಂಕ್ ಅವರ್ ಮೀಸಲಿಟ್ಟಿದ್ದಾರೆ. ವಾಹನ ನಿಲುಗಡೆಯಲ್ಲೂ ಮಹಿಳೆಯರಿಗೆ ಶೇ.20ರಷ್ಟು ಮೀಸಲಿಡುವುದು, ಪಿಂಕ್ ಶೌಚಾಲಯ ಮಾಡಲು ತೀರ್ಮಾನಿಸಿದ್ದ ಸಂಪತ್‍ರಾಜ್ ಇದೀಗ ಪಾಲಿಕೆ ಸಭೆಯಲ್ಲಿ ಪಿಂಕ್ ಅವರ್ ಜಾರಿಗೆ ತಂದಿದ್ದಾರೆ.ಬಿಬಿಎಂಪಿಯಲ್ಲಿ ಶೇ.100ರಷ್ಟು ಮಹಿಳಾ ಸದಸ್ಯರಿದ್ದಾರೆ. ಆದರೆ ಇದುವರೆಗೆ ಅವರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಸರಿಯಾಗಿ ಅವಕಾಶವೇ ಸಿಗುತ್ತಿರಲಿಲ್ಲ. ಕೇವಲ ಹಿರಿಯ ಸದಸ್ಯರು, ಪ್ರಮುಖರು ಮಾತನಾಡುತ್ತಿದ್ದರು.

ತಮ್ಮ ಸಮಸ್ಯೆ ಹೇಳಿಕೊಳ್ಳಲು ಅವಕಾಶವೇ ಕೊಡುವುದಿಲ್ಲ ಎಂಬ ಅಳಲು ಮಹಿಳಾ ಸದಸ್ಯರಿಂದ ಪದೇ ಪದೇ ಕೇಳಿಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಭೆಯಲ್ಲಿ ಮೇಯರ್ ಅರ್ಧ ಗಂಟೆ ಪಿಂಕ್ ಅವರ್ ಜಾರಿಗೊಳಿಸಿದರು.  ಈ ಸಮಯದಲ್ಲಿ ಕೇವಲ ಮಹಿಳೆಯರು ಮಾತ್ರ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಇದುವರೆಗೂ ಯಾವುದೇ ಮೇಯರ್ ಇಂತಹ ತೀರ್ಮಾನ ತೆಗೆದುಕೊಂಡಿರಲಿಲ್ಲ. ನಿನ್ನೆ ಕೂಡಾ ಸಭೆಯಲ್ಲಿ ಮಹಿಳೆಯರಿಗೆ ಸಂಪತ್‍ರಾಜ್ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದರು. ಇದರಿಂದ ಖುಷಿಯಾದ ಮಹಿಳಾ ಸದಸ್ಯರು ಸಂಪತ್‍ರಾಜ್ ಅವರನ್ನು ಶ್ಲಾಘಿಸಿದ್ದರು. ಇಂದು ಅರ್ಧ ಗಂಟೆ ಪಿಂಕ್ ಅವರ್ ಮೀಸಲಿಟ್ಟು ಸಂಪತ್‍ರಾಜ್ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಜಾರಿಯಾಗದ ಕಲ್ಯಾಣ ಯೋಜನೆ, ಸದಸ್ಯರ ಅಸಮಾಧಾನ:

ಬಿಬಿಎಂಪಿಯಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರ, ಕಡು ಬಡವರಿಗೆ ಒಂಟಿ ಮನೆ ಕಟ್ಟಿಕೊಡುವುದು, ಕಂಪ್ಯೂಟರ್ ತರಬೇತಿ ನೀಡುವುದು ಸೇರಿದಂತೆ ಹಲವು ಕಲ್ಯಾಣ ಯೋಜನೆ ಜಾರಿಯಲ್ಲಿವೆ. ಆದರೆ ಇವು ಸಮಪರ್ಕವಾಗಿ ಅನುಷ್ಠಾನವಾಗದಿರುವುದು ಎಲ್ಲಾ 198 ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ.
ಕಲ್ಯಾಣ ಯೋಜನೆ ಜಾರಿಯಾಗದ ಬಗ್ಗೆ ಆಡಳಿತ ಪಕ್ಷದ ನಾಯಕ ರಿಜ್ವಾನ್ ಸಭೆಯಲ್ಲಿಂದು ಗಮನ ಸೆಳೆದರು. ಇದಕ್ಕೆ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ದ್ವನಿಗೂಡಿಸಿ, ಬಜೆಟ್ ಮಂಡನೆಯಾಗಿ ವರ್ಷವಾಗುತ್ತಾ ಬಂದಿದೆ. ಇನ್ನೂ ಪಿಒಡಬ್ಲ್ಯೂ ಕಾಮಗಾರಿಗಳ ಪಟ್ಟಿಗೆ ಸ್ಥಾಯಿ ಸಮಿತಿಗಳ ಅನುಮೋದನೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ವಜ್ಞನಗರ ವಾರ್ಡ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೊಡ್ಡ ಸಮಾರಂಭ ಮಾಡಿ ನಾಗರಿಕರಿಗೆ ಹಲವಾರು ಕಲ್ಯಾಣ ಯೋಜನೆ ತಂದಿದ್ದೇವೆ ಎಂದು ಹೇಳಿಕೊಂಡರು. ಆದರೆ ಇದುವರೆಗೆ ಈ ಯೋಜನೆಗಳು ಜಾರಿಯಾಗಿಲ್ಲ. ಇದಕ್ಕೆ ಕಾರಣ ಏನು ಎಂದು ಅಧಿಕಾರಿಗಳಿಂದ ಸ್ಪಷ್ಟನೆ ಕೊಡಿಸಿ ಎಂದು ಆಗ್ರಹಿಸಿದರು.
ಇದಕ್ಕೆ ಜೆಡಿಎಸ್ ಗುಂಪಿನ ನಾಯಕಿ ನೇತ್ರಾ ನಾರಾಯಣ ಕೂಡ ದ್ವನಿಗೂಡಿಸಿದರು. ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಮೇಯರ್ ಸಂಪತ್‍ರಾಜ್ ಕಲ್ಯಾಣ ಯೋಜನೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಉತ್ತರ ಕೊಡಿಸುವುದಾಗಿ ಭರವಸೆ ನೀಡಿದರು.

Facebook Comments

Sri Raghav

Admin