ಮಾಶಾಸನ ಏರಿಕೆಗೆ ಆಗ್ರಹಿಸಿ ವಿಕಲಚೇತನರ ಬೃಹತ್ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Protest--02

ಬೆಂಗಳೂರು, ನ.29-ವಿಕಲಚೇತರ ಮಾಶಾಸನ(ಮಾಸಿಕ ಭತ್ಯೆ) ಮೊತ್ತ ಏರಿಸಬೇಕು ಹಾಗೂ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ-2016 ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ವಿಕಲಚೇತನರು ನಗರದ ಟೌನ್‍ಹಾಲ್ ಮುಂದೆ ಇಂದು ಪ್ರತಿಭಟನೆ ನಡೆಸಿದರು.ಶೇ.40ರಿಂದ ಶೇ.74ರಷ್ಟು ಅಂಗವೈಕಲ್ಯ ಹೊಂದಿರುವವರಿಗೆ ಮಾಸಿಕ 3,000 ರೂ.ಗಳು ಹಾಗೂ ಶೇ.75ಕ್ಕಿಂತ ಮೇಲ್ಪಟ್ಟ ವಿಕಲಚೇತನರಿಗೆ ಮಾಸಿಕ 5,000 ರೂ.ಗಳ ಮಾಶಾಸನ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರಸ್ತುತ ಸರ್ಕಾರ ಶೇ.40ರಿಂದ ಶೇ.74ರಷ್ಟು ಅಂಗವೈಕಲ್ಯ ಹೊಂದಿರುವವರಿಗೆ ಮಾಸಿಕ 500 ರೂ.ಗಳು ಹಾಗೂ ಶೇ.75ಕ್ಕಿಂತ ಮೇಲ್ಪಟ್ಟ ವಿಕಲಚೇತನರಿಗೆ ಮಾಸಿಕ 1,200 ರೂ.ಗಳ ಭತ್ಯೆ ನೀಡುತ್ತಿದೆ. ಇದು ಇಂದಿನ ಬೆಲೆ ಏರಿಕೆ ಪರಿಸ್ಥಿತಿಯಲ್ಲಿ ತುಂಬಾ ಕಡಿಮೆ ಮೊತ್ತದ ಮಾಸಿಕ ಭತ್ಯೆಯಾಗಿದೆ ಎಂದು ವಿಕಲಚೇತನರು ಆರೋಪಿಸಿದರು. ಅಧಿಕಾರಕ್ಕೆ ಬರುವುದಕ್ಕೆ ಮುನ್ನ ಸಿದ್ದರಾಮಯ್ಯನವರು ಚುನಾವಣಾ ಪ್ರಣಾಳಿಕೆಯಲ್ಲಿ ವಿಕಲಚೇತನರ ಮಾಸಿಕ ಭತ್ಯೆಯನ್ನು 3,000 ರೂ.ಗಳಿಗೆ ಹೆಚ್ಚಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕುವರೆ ವರ್ಷಗಳಾದರೂ ಆ ಭರವಸೆ ಈಡೇರಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.  ರಾಜ್ಯದ ವಿವಿಧ ಜಿಲ್ಲೆಗಳ ವಿಕಲಚೇತನರು ಹಾಗೂ ವಿವಿಧ ವಿಕಲಚೇತನ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Facebook Comments

Sri Raghav

Admin