‘ಮೋದಿ ನೀತಿಯಿಂದಾಗಿ ಎಚ್‍ಎಎಲ್‍ಗೆ ಯುದ್ಧ ವಿಮಾನ ಉತ್ಪಾದಿಸುವ ಅವಕಾಶ ಕೈತಪ್ಪಿದೆ’

ಈ ಸುದ್ದಿಯನ್ನು ಶೇರ್ ಮಾಡಿ

Dinesh-Gundu-Roa

ಬೆಂಗಳೂರು, ನ.29- ಹಿಂದೆ ಯುಪಿಎ ಸರ್ಕಾರ ಮಾಡಿಕೊಂಡಿದ್ದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ಬದಲಿಸಿ ಈಗ ಹೊಸದಾಗಿ ಈ ಒಪ್ಪಂದ ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರ ನೀತಿಯಿಂದಾಗಿ ಪ್ರತಿಷ್ಠಿತ ಎಚ್‍ಎಎಲ್‍ಗೆ ಅವುಗಳನ್ನು ಉತ್ಪಾದಿಸುವ ಜವಾಬ್ದಾರಿ ಕೈ ತಪ್ಪಿದಂತಾಗಿದೆ ಎಂದು ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಸರ್ಕಾರ ಒಟ್ಟು 126 ರಫೇಲ್ ಯುದ್ಧ ವಿಮಾನಗಳ ಒಪ್ಪಂದ ಮಾಡಿಕೊಂಡಿತ್ತು. ಆ ಪೈಕಿ 18 ರಫೇಲ್‍ಗಳನ್ನು ನೇರವಾಗಿ ಖರೀದಿಸುವುದು ಮತ್ತು ಉಳಿದ 108 ಏರ್‍ಕ್ರಾಫ್ಟ್‍ಗಳನ್ನು ವಿದೇಶಿ ತಂತ್ರಜ್ಞಾನ ವರ್ಗಾವಣೆ ಮಾಡಿಕೊಂಡು ಎಚ್‍ಎಎಲ್‍ನಲ್ಲಿ ಉತ್ಪಾದನೆ ಮಾಡುವುದು ಎಂಬ ವ್ಯವಹಾರವನ್ನು ಕುದುರಿಸಿತ್ತು. ಇದು ಒಟ್ಟು 56 ಸಾವಿರ ಕೋಟಿ ರೂ.ಗಳ ವ್ಯವಹಾರವಾಗಿತ್ತು ಎಂದರು.
ಆದರೆ, ಪ್ರಧಾನಿ ಮೋದಿಯವರು ಈ ಒಪ್ಪಂದದ ವ್ಯವಹಾರವನ್ನು ಅನಿಲ್ ಅಂಬಾನಿ ಅವರಿಗೆ ನೀಡುವ ಉದ್ದೇಶದಿಂದ ಒಟ್ಟು 36 ಏರ್‍ಕ್ರಾಫ್ಟ್‍ಗಳನ್ನು ನೇರವಾಗಿ ಖರೀದಿಸುವುದು ಮತ್ತು ಉಳಿದ ಏರ್‍ಕ್ರಾಫ್ಟ್‍ಗಳನ್ನು ತಂತ್ರಜ್ಞಾನ ವರ್ಗಾವಣೆ ಮೂಲಕ ಉತ್ಪಾದಿಸಲು ಅನಿಲ್ ಅಂಬಾನಿ ಅವರಿಗೆ ವಹಿಸಿದ್ದಾರೆ.
ಈ ಮೂಲಕ 12,600 ಕೋಟಿ ಉಳಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ತಂತ್ರಜ್ಞಾನ ವರ್ಗಾವಣೆ ಕೈ ಬಿಡಲಾಗಿದೆ. ಅದರಿಂದಾಗಿ ಉತ್ಪಾದನೆ ಕಾರ್ಯ ಎಚ್‍ಎಎಲ್‍ಗೆ ಕೈ ತಪ್ಪಿದೆ. ಆರ್ಥಿಕ ಅಭಿವೃದ್ಧಿ ಕುಂಠಿತವಾಗಿದೆ ಎಂದು ಗುಂಡೂರಾವ್ ಹೇಳಿದರು.

ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಟ್ಟಿರುವುದು ಅನುಮಾನಾಸ್ಪದವಾಗಿದೆ. ಈ ವ್ಯವಹಾರದಲ್ಲಿ ಪಾರದರ್ಶಕತೆ ಇಲ್ಲ. ಮಾಹಿತಿ ಕೇಳಿದರೆ ಸ್ಪಂದಿಸುತ್ತಿಲ್ಲ. ನಾವು ಪ್ರತಿಯೊಂದು ಮಾಹಿತಿಯನ್ನೂ ನ್ಯಾಯಾಲಯದಿಂದಲೇ ಪಡೆಯಬೇಕೆ ಎಂದು ಅವರು ಪ್ರಶ್ನಿಸಿದರು. ಸಂವಿಧಾನ ದಿನ ಆಚರಣೆಯಂದು ಡಾ.ಅಂಬೇಡ್ಕರ್ ಅವರ ಭಾವಚಿತ್ರ ಹಾಕದೆ ಅವಮಾನ ಮಾಡಲಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ನಾಯಕರಿಗೆ ಸಂವಿಧಾನದ ಬಗ್ಗೆಯೇ ಗೌರವವಿಲ್ಲ. ತಮ್ಮ ಅಧಿಕಾರದಲ್ಲಿ ತ್ಯಾಜ್ಯ ಸಂಗ್ರಹಿಸುವ ಸ್ಥಳದಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕಿ ಅವಮಾನಿಸಿದ್ದಾರೆ. ಮೊದಲು ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.

ಬಿಜೆಪಿಯವರ ಮನಸ್ಸುಗಳೇ ಕಸದ ತೊಟ್ಟಿಗಳಾಗಿವೆ. ಅನಂತ್‍ಕುಮಾರ್ ಹೆಗಡೆ ಮುಂದಿನ ಮುಖ್ಯಮಂತ್ರಿ ಎಂದು ಹೇಳಲಾಗುತ್ತಿದೆ. ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಎಂದು ಈ ಮುಂಚೆ ಹೇಳಿದ್ದರಾದರೂ ಈಗ ಅದನ್ನು ಬದಲಾವಣೆ ಮಾಡಲಾಗಿದೆ. ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಅನಂತಕುಮಾರ್ ಹೆಗಡೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅದೇ ರೀತಿ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಸಿ.ಟಿ.ರವಿ ಮುಂತಾದವರು ಕೂಡ ನಾಲಿಗೆ ಮೇಲೆ ಹಿಡಿತವಿಲ್ಲದೆ ಮಾತನಾಡುತ್ತಿದ್ದಾರೆ. ಇವರಿಗೆಲ್ಲ ಸುಸಂಸ್ಕøತಿ ಬಗ್ಗೆ ತರಬೇತಿ ಕೊಡಬೇಕಾಗಿದೆ. ಅವರ ಕೊಳಕು ಮನಸ್ಸುಗಳನ್ನು ಸ್ವಚ್ಛ ಮಾಡಬೇಕಿದೆ ಎಂದು ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದರು.

Facebook Comments

Sri Raghav

Admin