ಉಡುಪಿಯ ಧರ್ಮ ಸಂಸತ್‍ನಲ್ಲಿ ಭಾಗವಹಿಸಿದವರು ಜಾತ್ಯಾತೀತ ವಿರೋಧಿಗಳು : ಸಿಎಂ ಸಿದ್ಧರಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

S-Siddaramaiha

ಮೈಸೂರು, ನ.30- ಉಡುಪಿಯಲ್ಲಿ ನಡೆದ ಧರ್ಮ ಸಂಸತ್‍ನಲ್ಲಿ ಭಾಗವಹಿಸಿದವರು ಜಾತ್ಯಾತೀತ ವಿರೋಧಿಗಳು. ಅಲ್ಲಿ ಹಲವು ಸಂವಿಧಾನ ವಿರೋಧಿ ನಿರ್ಣಯಗಳು ಹೊರಹೊಮ್ಮಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಗುಡುಗಿದರು. ನಗರದಲ್ಲಿ ಕೆಪಿಎನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನವನ್ನೇ ಪರಾಮರ್ಶೆ ಮಾಡಬೇಕೆಂದು ಧರ್ಮ ಸಂಸತ್‍ನಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಆತಂಕಕಾರಿ ವಿಷಯವಾಗಿದೆ. ಅಲ್ಲಿ ಭಾಗವಹಿಸಿದವರು ಸೆಕ್ಯೂಲರಿಸಂ ವಿರೋಧಿಗಳಾಗಿದ್ದಾರೆ. ಅಲ್ಲಿ ಕೈಗೊಂಡಿರುವ ನಿರ್ಣಯಗಳು ಕೂಡ ಜಾತ್ಯತೀತ ತತ್ವಕ್ಕೆ ವಿರೋಧವಾಗಿವೆ ಎಂದು ತಿಳಿಸಿದರು. ಸಂವಿಧಾನದ ವಿರುದ್ಧ ಯಾರೂ ನಿರ್ಣಯ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಅವು ಕಾರ್ಯಸಾಧುವೂ ಅಲ್ಲ ಎಂದು ಅವರು ಹೇಳಿದರು. ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕರಾವಳಿ ಪ್ರದೇಶದಲ್ಲಿ ಕಾಂಗ್ರೆಸ್ ಸುಭದ್ರವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲಿದ್ದಾರೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅನ್ನ ಭಾಗ್ಯ ಯೋಜನೆ ತೆಗೆದು ಹಾಕುವುದಾಗಿ ಎಚ್.ಡಿ.ದೇವೇಗೌಡರು ಹೇಳಿದ್ದಾರಲ್ಲ ಎಂಬ ವರದಿಗಾರರ ಪ್ರಶ್ನೆಗೆ ರಾಜಕೀಯ ಉದ್ದೇಶದಿಂದ ಅವರು ಹಾಗೆ ಹೇಳಿರಬಹುದು. ಆದರೆ ಹಸಿವು ಮುಕ್ತ ರಾಜ್ಯ ಮಾಡುವುದು ನಮ್ಮ ಉದ್ದೇಶವಾಗಿದೆ. ಪ್ರತಿಯೊಬ್ಬರಿಗೂ ಅನ್ನ ಸಿಗಬೇಕೆಂಬ ಹಿನ್ನೆಲೆಯಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಸ್ಪಷ್ಟಪಡಿಸಿದರು.

ಸೋಲಿನ ಭೀತಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಗುಜರಾತ್‍ನಲ್ಲಿ ಸತತ ಪ್ರಚಾರದಲ್ಲಿ ತೊಡಗಿದ್ದಾರೆ. ಮೋದಿಯವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಇದ್ದಂತಹ ನಂಬಿಕೆ, ವಿಶ್ವಾಸಗಳು ಈಗ ಇಲ್ಲ. ತಾವು ಚುನಾವಣೆಯಲ್ಲಿ ಸೋಲಬಹುದು ಎಂಬ ಭೀತಿ ಅವರಿಗೆ ಉಂಟಾಗಿದೆ. ಹಾಗಾಗಿ ಅವರು ಗುಜರಾತ್‍ನಲ್ಲಿ 155 ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಟೀಕಿಸಿದರು. ರಾಜ್ಯದ ಚುನಾವಣೆಯಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡ ಪ್ರಧಾನಿಗಳಲ್ಲಿ ಅವರೇ ಮೊದಲಿಗರು ಎಂದು ವ್ಯಂಗ್ಯವಾಡಿದರು.

Facebook Comments

Sri Raghav

Admin