ಗಡಿಯಲ್ಲಿ 10,000 ಕೆಜಿ ಡ್ರಗ್ಸ್, 49 ಕೋಟಿ ನಕಲಿ ನೋಟು, 1.20 ಲಕ್ಷ ಗೋವುಗಳ ವಶ

ಈ ಸುದ್ದಿಯನ್ನು ಶೇರ್ ಮಾಡಿ

BSF--01

ನವದೆಹಲಿ, ನ.30-ಗಡಿ ಭದ್ರತಾ ಪಡೆ(ಬಿಎಸ್‍ಎಫ್) ಸಿಬ್ಬಂದಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಗಡಿಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 10,000 ಕೆಜಿ ಮಾದಕ ವಸ್ತುಗಳು, 49.44 ಕೋಟ ಖೋಟಾ ನೋಟು ಹಾಗೂ 1.20 ಲಕ್ಷ ಗೋವುಗಳನ್ನು ವಶಪಡಿಸಿಕೊಂಡಿದ್ದಾರೆ. ಇದು ಗಡಿ ಭಾಗದಲ್ಲಿ ನಡೆಯುತ್ತಿರುವ ವ್ಯಾಪಕ ಕಳ್ಳಸಾಗಣೆಗೆ ಸಾಕ್ಷಿಯಾಗಿದೆ.

ಕಳೆದ ವರ್ಷ ಡಿಸೆಂಬರ್‍ನಿಂದ ಈ ವರ್ಷದ ಅಕ್ಟೋಬರ್‍ವರೆಗೆ ಪೂರ್ವ ಗಡಿ ಭಾಗದಲ್ಲಿ (ಭಾರತ-ಬಾಂಗ್ಲಾದೇಶ ಗಡಿ) 9,807 ಕೆಜಿ ಮಾದಕವಸ್ತುಗಳು ಹಾಗೂ ಪಶ್ಚಿಮ ವಲಯದಲ್ಲಿ (ಭಾರತ-ಪಾಕಿಸ್ತಾನ ಗಡಿ) 439.21 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್‍ಎಫ್ ಮಹಾ ನಿರ್ದೇಶಕ ಕೆ.ಕೆ.ಶರ್ಮ ತಿಳಿಸಿದ್ದಾರೆ.  ಬಿಎಸ್‍ಎಫ್ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಇದೇ ಅವಧಿಯಲ್ಲಿ ಪೂರ್ವ ಗಡಿ ಭಾಗದಲ್ಲಿ 49.44 ಕೋಟಿ ರೂ. ಮೌಲ್ಯದ ನಕಲಿ ಕರೆನ್ಸಿಗಳು ಹಾಗೂ 1,20,578 ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

ಈ 10 ತಿಂಗಳ ಅವಧಿಯಲ್ಲಿ ಎರಡೂ ಗಡಿ ಭಾಗಗಳಿಂದ ಒಟ್ಟು 50 ಅತ್ಯಾಧುನಿಕ ಶಸ್ತ್ರಾಸ್ತ್ರಗಳು, 606 ಮದ್ದುಗುಂಡುಗಳನ್ನು ಸಹ ಜಫ್ತಿ ಮಾಡಲಾಗಿದೆ ಎಂದು ಶರ್ಮಾ ಅಂಕಿ-ಅಂಶ ನೀಡಿದ್ದಾರೆ. ಗಡಿ ಭದ್ರತಾ ಪಡೆ 1965ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, 2.5 ಲಕ್ಷ ಸಿಬ್ಬಂದಿಯನ್ನು ಒಳಗೊಂಡಿದೆ. ಇದು ದೇಶದ ಅತಿದೊಡ್ಡ ಗಡಿ ರಕ್ಷಣಾ ದಳವಾಗಿದೆ.

Facebook Comments

Sri Raghav

Admin