ತೀವ್ರ ಕುತೂಹಲ ಕೆರಳಿಸಿದೆ ಜಯಲಲಿತಾ ಕ್ಷೇತ್ರ ಆರ್‍ಕೆ ನಗರ ಉಪ ಚುನಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

RK-Nagar--02

ಚೆನ್ನೈ, ನ.30-ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ನಿಧನದಿಂದ ತೆರವಾಗಿರುವ ಪ್ರತಿಷ್ಠಿತ ಆರ್.ಕೆ.ನಗರ (ರಾಧಾಕೃಷ್ಣನ್ ನಗರ) ವಿಧಾನಸಭಾ ಕ್ಷೇತ್ರಕ್ಕೆ ಡಿ.21ರಂದು ನಡೆಯಲಿರುವ ಉಪ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಈ ಕ್ಷೇತ್ರದಿಂದ ಆಡಳಿತಾರೂಢ ಎಐಎಡಿಎಂಕೆ ಅಭ್ಯರ್ಥಿಯಾಗಿ ಪಕ್ಷದ ಉನ್ನತಾಧಿಕಾರ ಸ್ಥಾಯಿ ಸಮಿತಿ ಅಧ್ಯಕ್ಷ ಈ ಮಧುಸೂದನನ್ ಸ್ಫರ್ಧಿಸಲಿದ್ದಾರೆ. ಇವರನ್ನು ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ನಿರ್ಧರಿಸಿದ್ದು, ಅಧಿಕೃತ ಪ್ರಕಟಣೆ ಇಂದು ಹೊರಬಿದ್ದಿದೆ.

ವಿರೋಧ ಪಕ್ಷ ಡಿಎಂಕೆ ಎಂ. ಮರುತು ಗಣೇಶ್ ಅವರನ್ನು ಚುನಾವಣಾ ಆಖಾಡಕ್ಕೆ ಇಳಿಸಿದೆ. ಎಐಎಡಿಎಂಕೆಯ ಉಚ್ಚಾಟಿತ ನಾಯಕ ಟಿಟಿವಿ ದಿನಕರನ್ ಶಶಿಕಲಾ ಬಣದಿಂದ ಸ್ಫರ್ಧಿಸಿದ್ದರೆ, ಜಯಲಲಿತಾರ ಸೋದರನ ಪುತ್ರಿ ದೀಪಾ ಜಯಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಹೀಗಾಗಿ ನಾಲ್ಕು ಪ್ರಬಲ ಅಭ್ಯರ್ಥಿಗಳೊಂದಿಗೆ ಈ ಕ್ಷೇತ್ರದ ಚುನಾವಣಾ ಫಲಿತಾಂಶ ಆಸಕ್ತಿ ಮೂಡಿಸಿದೆ. ಜಯಲಲಿತಾ ಅವರು ಕಳೆದ ವರ್ಷ ಡಿಸೆಂಬರ್ 5ರಂದು ನಿಧನರಾದ ನಂತರ ಅವರು ಪ್ರತಿನಿಧಿಸಿದ್ದ ಕ್ಷೇತ್ರಕ್ಕೆ ಏಪ್ರಿಲ್ 12ರಂದು ಉಪ ಚುನಾವಣೆಗೆ ಈ ಹಿಂದೆ ದಿನಾಂಕ ಪ್ರಕಟವಾಗಿತ್ತು. ಆದರೆ ದಿನಕರನ್ ಪರವಾಗಿ ಮತ ಚಲಾಯಿಸಲು ಶಶಿಕಲಾ ಬಣದಿಂದ 89 ಕೋಟಿ ರೂ.ಗಳ ಓಟಿಗಾಗಿ ನೋಟು ಅಕ್ರಮ ನಡೆದಿದೆ ಎಂಬ ಕಾರಣಕ್ಕಾಗಿ ಚುನಾವಣಾ ಆಯೋಗ ಚುನಾವಣೆಯನ್ನು ರದ್ದುಗೊಳಿಸಿತ್ತು. ಡಿ.21ರಂದು ಈ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದ್ದು, ಡಿ.24ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬ ಕುತೂಹಲವನ್ನೂ ಕೆರಳಿಸಿದೆ.

Facebook Comments

Sri Raghav

Admin