ಬಿಜೆಪಿ 10 ಶಾಸಕರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ..! ವಲಸೆ ಬಂದವರಿಗೂ ಕಾದಿದೆ ನಿರಾಸೆ..!

ಈ ಸುದ್ದಿಯನ್ನು ಶೇರ್ ಮಾಡಿ

BJP-Protest--02

ಬೆಂಗಳೂರು, ನ.30-ರಾಜ್ಯದಲ್ಲಿ ಶತಾಯಗತಾಯ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಪಣ ತೊಟ್ಟಿರುವ ಬಿಜೆಪಿ ಉತ್ತರ ಪ್ರದೇಶ ಹಾಗೂ ದೆಹಲಿಯಲ್ಲಿ ಅನುಸರಿಸಿದ ಮಾದರಿಯನ್ನೇ ಅಳವಡಿಸಿಕೊಳ್ಳಲು ಮುಂದಾಗಿರುವುದರಿಂದ ಕೆಲವು ಹಾಲಿ ಶಾಸಕರಿಗೆ ಕೋಕ್ ಸಿಗುವ ಸಾಧ್ಯತೆ ಇದೆ. ಸದ್ಯಕ್ಕೆ ವಿಧಾನಸಭೆಯಲ್ಲಿ ಬಿಜೆಪಿ, ಕೆಜೆಪಿ ಮತ್ತು ಬಿಎಸ್‍ಆರ್ ವಿಲೀನಗೊಂಡಿರುವುದರಿಂದ ಸದಸ್ಯರ ಸಂಖ್ಯೆ 46ರಕ್ಕೇರಿದೆ. ಇದರಲ್ಲಿ ಹಾಲಿ 8ರಿಂದ 10 ಶಾಸಕರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ತಪ್ಪುವ ಸಾಧ್ಯತೆ ಇದೆ. ವಿಶೇಷವೆಂದರೆ ಪಕ್ಷದ ಪ್ರಮುಖ ತೀರ್ಮಾನಗಳನ್ನು ನಿರ್ಧರಿಸುವ ಕೋರ್‍ಕಮಿಟಿ ಸದಸ್ಯರಾಗಿರುವ ಹಾಲಿ ಇಬ್ಬರು ಶಾಸಕರಿಗೆ ಹಾಗೂ ಬೆಂಗಳೂರು ಮೂಲದ ಇಬ್ಬರಿಗೆ ಟಿಕೆಟ್ ಸಿಗುವ ಸಂಭವ ಕ್ಷೀಣಿಸಿವೆ.

ಪಕ್ಷಕ್ಕೆ ಬರುವ ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಕಳುಹಿಸಿಕೊಡಬೇಕೆಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯ ನಾಯಕರಿಗೆ ಸೂಚನೆ ಕೊಟ್ಟಿದ್ದರು. ಇದರಂತೆ ಕೇಂದ್ರ ಚುನಾವಣಾ ಸಮಿತಿಗೆ ಬಿಜೆಪಿ ಪಟ್ಟಿ ಕಳುಹಿಸಿಕೊಡಲಾಗಿದೆ. ಅಳೆದು ತೂಗಿ ಹಾಗೂ ಖಾಸಗಿ ಸಂಸ್ಥೆಗಳಿಂದ ಗೆಲ್ಲುವ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿರುವ ರಾಷ್ಟ್ರೀಯ ನಾಯಕರು ಕೆಲವು ಶಾಸಕರಿಗೆ ಕೋಕ್ ನೀಡುವುದು ಅನಿವಾರ್ಯ ಎಂಬ ಸಂದೇಶವನ್ನು ರವಾನಿಸಿದ್ದಾರೆ. ರಾಜ್ಯದಲ್ಲಿ ನಾವು ಯಾರ ಹಂಗಿಲ್ಲದೆ ಅಧಿಕಾರಕ್ಕೆ ಬರಬೇಕಾದರೆ ಕೆಲವು ಬಾರಿ ಕಠಿಣ ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ. ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕಬೇಕಾದ ಅಗತ್ಯವಿರುವುದರಿಂದ ಹಾಲಿ ಶಾಸಕರಿಗೆ ಟಿಕೆಟ್ ಖಾತರಿ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಹಾಲಿ ಶಾಸಕರಿಗೆ ಕೋಕ್:

ಮೂಲಗಳ ಪ್ರಕಾರ ಹಾಲಿ 46 ಶಾಸಕರಲ್ಲಿ 8ರಿಂದ 10 ಶಾಸಕರಿಗೆ ಟಿಕೆಟ್ ಸಿಗುವ ಸಾಧ್ಯತೆಗಳಿಲ್ಲ. ಉತ್ತರ ಪ್ರದೇಶದಲ್ಲಿ ಹಾಲಿ ಶಾಸಕರಿಗೆ ಮಣೆ ಹಾಕದೆ ಕೆಲವು ಹೊಸ ಮುಖಗಳಿಗೆ ಟಿಕೆಟ್ ನೀಡಲಾಯಿತು. ಇನ್ನು ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇದೇ ತಂತ್ರವನ್ನು ಅನುಸರಿಸಲಾಯಿತು. ಪರಿಣಾಮ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಕು ಮಾಡಿ ಬಿಜೆಪಿ ಅಧಿಕಾರ ಹಿಡಿಯಿತು. ಈಗ ರಾಜ್ಯದಲ್ಲೂ ಇದೇ ಮಾದರಿ ಅನುಸರಿಸಲು ಕಮಲ ಪಡೆ ಸಜ್ಜಾಗಿದೆ. ಇದರನ್ವಯ ಬೆಂಗಳೂರಿನ ಇಬ್ಬರು ಹಾಗೂ ಉತ್ತರ ಕರ್ನಾಟಕದ ಕೆಲವು ಶಾಸಕರಿಗೆ ಅರ್ಧಚಂದ್ರ ಸಿಗಲಿದೆ.

ವಲಸೆ ಬಂದವರಿಗೂ ಟಿಕೆಟ್ ಇಲ್ಲ:

ಇನ್ನು ಬೇರೆ ಬೇರೆ ಪಕ್ಷಗಳಿಂದ ಬಂದವರಿಗೂ ಟಿಕೆಟ್ ನೀಡುವ ಬಗ್ಗೆ ರಾಷ್ಟ್ರೀಯ ನಾಯಕರು ಸ್ಪಷ್ಟ ಭರವಸೆ ನೀಡಿಲ್ಲ. ನಾವು ಯಾವುದೇ ಷರತ್ತು ವಿಧಿಸದೆ ಪಕ್ಷಕ್ಕೆ ಬರಬೇಕೆಂದು ಸೂಚಿಸಿದ್ದೆವು. ಸ್ಥಾನಮಾನ ನಿರೀಕ್ಷೆ ಇಟ್ಟುಕೊಳ್ಳಬಾರದೆಂದು ಮೊದಲೇ ಸೂಚಿಸಲಾಗಿತ್ತು. ಪಕ್ಷ ಅಧಿಕಾರಕ್ಕೆ ಬಂದರೆ ಅಂಥಹವರಿಗೆ ಬೇರೆ ಬೇರೆ ರೀತಿ ಅವಕಾಶ ಕಲ್ಪಿಸಲಾಗುವುದು. ಅನ್ಯ ಪಕ್ಷದಿಂದ ಬಂದವರಿಗೆ ರಾಜ್ಯದ ನಾಯಕರು ಟಿಕೆಟ್ ಭರವಸೆ ನೀಡಬಾರದು ಎಂದು ಸ್ಪಷ್ಟ ಮಾತುಗಳಲ್ಲಿ ಸೂಚಿಸಲಾಗಿದೆ.

ಗುಜರಾತ್ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಮಿತ್ ಷಾ ಸಂಪೂರ್ಣವಾಗಿ ಅವರ ಗಮನವನ್ನು ತವರು ರಾಜ್ಯದಲ್ಲಿ ಕೇಂದ್ರೀಕರಿಸಿದ್ದಾರೆ. ಡಿ.18ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.  ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ಬಿಜೆಪಿ ಪುನಃ ಅಧಿಕಾರಕ್ಕೆ ಬಂದರೆ ಡಿ.20ರಿಂದಲೇ ಅಮಿತ್ ಷಾ ಕರ್ನಾಟಕದತ್ತ ತಮ್ಮ ಗಮನವನ್ನು ಕೇಂದ್ರೀಕರಿಸುವರು. ಸದ್ಯಕ್ಕೆ ರಾಜ್ಯ ಉಸ್ತುವಾರಿ ಮುರಳೀಧರರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್, ಸಹ ಉಸ್ತುವಾರಿ ಪಿಯೂಷ್‍ಗೋಯಲ್ ಪಕ್ಷದ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಗುಜರಾತ್, ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆ ಬಳಿಕ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಗರಿಗೆದರಲಿವೆ.

Facebook Comments

Sri Raghav

Admin