ಸದ್ಯದಲ್ಲೇ ಸಾರ್ವಜನಿಕರಿಗೆ ಹೋಟೆಲ್ ಮಾಲೀಕರಿಂದ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

Hotel--02

ಬೆಂಗಳೂರು, ನ.30- ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಪರಿಣಾಮ ತಿಂಡಿ, ಪದಾರ್ಥಗಳ ದರವನ್ನು ಪರಿಷ್ಕರಣೆ ಮಾಡಲು ಹೋಟೆಲ್ ಮಾಲೀಕರ ಸಂಘ ಮುಂದಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಈರುಳ್ಳಿ ಬೆಲೆ ಇಳಿಮುಖವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಈಗಾಗಲೇ ಪ್ರತಿ ಕೆಜಿಗೆ ಮಾರುಕಟ್ಟೆಯಲ್ಲಿ 70ರಿಂದ 80ರೂ.ಗೆ ಏರಿಕೆಯಾಗಿರುವುದರಿಂದ ಹೋಟೆಲ್ ಮಾಲೀಕರು ಚಿಂತಾಕ್ರಾಂತರಾಗಿದ್ದಾರೆ.

ಹೋಟೆಲ್‍ನಲ್ಲಿ ತಯಾರಿಸುವ ಪ್ರತಿಯೊಂದು ತಿಂಡಿಗೂ ಈರುಳ್ಳಿ ಹಾಕಬೇಕಾಗುತ್ತದೆ. ಗ್ರಾಹಕರಿಗೆ ರುಚಿಕರವಾದ ತಿಂಡಿ ನೀಡದಿದ್ದರೆ ದಿನನಿತ್ಯದ ವಹಿವಾಟಿನ ಮೇಲೆ ಪರಿಣಾಮ ಬೀರುತ್ತದೆ. ಈಗಿನ ದರದಲ್ಲೇ ನಾವು ಈರುಳ್ಳಿ ಕೊಂಡು ರುಚಿಕರವಾದ ತಿಂಡಿ, ಊಟ ತಯಾರಿಸಿದರೆ ನಮಗೆ ಆರ್ಥಿಕವಾಗಿ ಹೊರೆಯಾಗುತ್ತದೆ. ಹೀಗಾಗಿ ದರ ಏರಿಕೆ ಅನಿವಾರ್ಯ ಎನ್ನುತ್ತಾರೆ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಯೊಬ್ಬರು.

ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಲ್ಲಿ ನಮಗೆ ಪ್ರತಿ ಕೆಜಿಗೆ ಈರುಳ್ಳಿ ಮಾರುಕಟ್ಟೆಯಲ್ಲಿ 20ರಿಂದ 30ರೂ. ಆಸುಪಾಸಿನಲ್ಲಿ ಲಭ್ಯವಾಗುತ್ತಿತ್ತು. ರೈತರು ಬೆಳೆದ ಬೆಳೆಯನ್ನು ಈ ತಿಂಗಳಿನಲ್ಲೇ ಮಾರಾಟ ಮಾಡುತ್ತಿದ್ದರು.  ಆದರೆ, ಈ ಬಾರಿ ದರ ದುಪ್ಪಟ್ಟಿಗಿಂತಲೂ ಹೆಚ್ಚಾಗಿರುವುದರಿಂದ ಹೋಟೆಲ್ ನಿರ್ವಹಣೆ ಮಾಡುವುದು ಅಷ್ಟು ಸುಲಭವಲ್ಲ. ಹಾಗಾಗಿ ದರ ಪರಿಷ್ಕರಣೆ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ ಎಂಬ ಅಸಹಾಯಕತೆಯನ್ನು ಅವರು ಹೊರ ಹಾಕಿದ್ದಾರೆ.

ಬೆಲೆ ಏರಿಕೆ ಅನಿವಾರ್ಯ:

ನಮಗೆ ಈಗಿನ ತರಕಾರಿ ದರದಲ್ಲಿ ಹೋಟೆಲ್ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಒಂದು ರೂ. ಏರಿಕೆ ಮಾಡಿದರೆ ಗ್ರಾಕರು ನೂರೆಂಟು ಪ್ರಶ್ನೆಗಳನ್ನು ಕೇಳುತ್ತಾರೆ. ಕಾರ್ಮಿಕರ ವೆಚ್ಚ, ಬಾಡಿಗೆ, ವಿದ್ಯುತ್ ಸೇರಿದಂತೆ ಮತ್ತಿತರ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಉಪ್ಪಿಟ್ಟು, ಚಿತ್ರಾನ್ನ, ವೆಜಿಟೆಬಲ್ ಫಲಾವು, ಗೋಬಿ, ಪಾನೀಪುರಿ, ಟೊಮ್ಯಾಟೋಭಾತ್, ವಾಂಗಿಭಾತ್, ಈರುಳ್ಳಿ ದೋಸೆ, ಮಸಾಲದೋಸೆ, ಸೆಟ್‍ದೋಸೆ, ಪಕೋಡ, ಸಾಗು, ಸಾಂಬಾರು ಸೇರಿದಂತೆ ಮತ್ತಿತರ ತಿಂಡಿಗಳಿಗೆ ಹೆಚ್ಚಿನ ಖರ್ಚು ತಗುಲುವುದರಿಂದ ದರ ಪರಿಷ್ಕರಣೆ ಸದಸ್ಯದಲ್ಲೇ ಆಗಲಿದೆ.

ಕೃತಕ ಅಭಾವ ಸೃಷ್ಟಿ:

ಇನ್ನೊಂದು ಮಾಹಿತಿಯ ಪ್ರಕಾರ ಇದ್ದಕ್ಕಿದ್ದಂತೆ ಈರುಳ್ಳಿ ಬೆಲೆ ದಿಢೀರನೇ ಏರಿಕೆಯಾಗಿರುವುದರಿಂದ ಕೃತಕ ಅಭಾವ ಸೃಷ್ಟಿಯನ್ನು ತಳ್ಳಿಹಾಕುವಂತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ರೈತರಿಂದ ಕಡಿಮೆ ದರದಲ್ಲಿ ಖರೀದಿ ಮಾಡುವ ಮಧ್ಯವರ್ತಿಗಳು ಉದ್ದೇಶ ಪೂರಕವಾಗಿಯೇ ಅಭಾವ ಸೃಷ್ಟಿಸಿ ದುಪ್ಪಟ್ಟು ದರದಲ್ಲಿ ಮಾರಾಟ ಮಾಡಲು ಮುಂದಾಗಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ. ಯಶವಂತಪುರ, ಎಪಿಎಂಸಿ, ಕೆಲವು ಖಾಸಗಿ ಗೋಡೌನ್‍ಗಳಲ್ಲಿ ಮಾರಾಟಗಾರರು ಈಗಾಗಲೇ ರೈತರಿಂದ ಈರುಳ್ಳಿ ಖರೀದಿಸಿ ಸಂಗ್ರಹಿಸಿಟ್ಟಿದ್ದಾರೆ. ಕೆಜಿಗೆ 100ರೂ. ದಾಟಲಿ ಎಂಬುದು ಅವರ ಉದ್ದೇಶವಾಗಿದೆ. ಸರ್ಕಾರ ಇಂಥವರ ಮೇಲೆ ಹದ್ದಿನಕಣ್ಣಿಡಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು 15ರಿಂದ 20 ದಿನ ಈರುಳ್ಳಿ ಬೆಲೆ ಇಳಿಕೆಯಾಗುವ ಯಾವ ಸೂಚನೆಯೂ ಸಿಗುತ್ತಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ನಾವು ಹಾಲಿ ದರವನ್ನು ಪರಿಷ್ಕರಣೆಯನ್ನು ಮಾಡಲೇಬೇಕಾಗುತ್ತದೆ ಎಂದು ಸಂಘದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin