ಹಾರಾಡುತ್ತಿರುವಾಗಲೇ ಆಗಸದಿಂದ ವಿಮಾನದೊಳಗೆ ಜಿಗಿದ ಸಾಹಸಿಗರು..!

ಈ ಸುದ್ದಿಯನ್ನು ಶೇರ್ ಮಾಡಿ

ಜಂಗ್‍ಫ್ರೌ (ಬರ್ನ್ ಅಲ್ಪ್ಸ್ ಪರ್ವತ, ಯುರೋಪ್), ನ.30-ವಿಮಾನ ಅಥವಾ ಹೆಲಿಕಾಪ್ಟರ್ ಹಾರಾಡುತ್ತಿರುವಾಗಲೇ ಆಗಸದಿಂದ ಭೂಮಿಗೆ ಹಾರುವುದನ್ನು ನಾವು ನೋಡಿದ್ದೇವೆ. ಆದರೆ ಇಬ್ಬರು ಸಾಹಸಿಗಳು ಗಗನದಿಂದಲೇ ವಿಮಾನದೊಳಗೆ ನಿಖರವಾಗಿ ಜಿಗಿಯುವ ಮೈ ನವಿರೇಳಿಸುವ ಅದ್ಭುತ ಸಾಹಸ ಮಾಡಿದ್ದಾರೆ. ಯುರೋಪ್ ಖಂಡದ ಅತಿ ಎತ್ತರದ ಶಿಖರಾಗ್ರಗಳಲ್ಲಿ ಒಂದಾದ ಬರ್ನ್ ಆಲ್ಸ್ಪ್ ಹಿಮಪರ್ವತ ಸ್ತೋಮದಲ್ಲಿರುವ ಜಂಗ್‍ಫ್ರೌನಲ್ಲಿ ಈ ರೋಚಕ ಸಾಹಸ ನಡೆದಿದೆ. ಅತ್ಯಂತ ಅಪಾಯಕಾರಿಯಾದ ಈ ಸಾಹಸ ದೃಶ್ಯವನ್ನು ರೆಡ್‍ಬುಲ್, ಯೂಟ್ಯೂಬ್‍ನಲ್ಲಿ ಬಿಡುಗಡೆ ಮಾಡಿದೆ.

ಫ್ರಾನ್ಸ್ ಬೇಸ್ ಜಂಪಿಂಗ್ ಸಾಹಸಿಗಳಾದ ಫ್ರೆಡ್ ಫ್ಯೂಗನ್ ಮತ್ತು ವಿನ್ಸ್ ರಪ್ಫೆಟ್, ಜಂಗ್‍ಫ್ರೌ ಶಿಖರವೇರಿ ಕೆಳಗೆ ಜಿಗಿದರು ನಂತರ ವಿಂಗ್‍ಸೂಟ್ ಧರಿಸಿ(ಗಗನದಲ್ಲಿ ಪಕ್ಷಿಯಂತೆ ಹಾರುವ ಅತ್ಯಾಧುನಿಕ ವಸ್ತ್ರ) ಬಾನಂಗಳದಲ್ಲಿ ತೇಲಾಡಿದರು. ಹಾಗೆಯೇ ತೇಲಾಡುತ್ತಾ ವಿಮಾನದ ಒಳಗೆ ಅತ್ಯಂತ ನಿಖರವಾಗಿ ಪ್ರವೇಶಿಸಿದರು.  ಇದು ಅತ್ಯಂತ ಅಪಾಯಕಾರಿ ಸಾಹಸ. ಮೇಲಿನಿಂದ ಹಾರುತ್ತಾ ವಿಮಾನದೊಳಗೆ ಜಿಗಿಯುವ ಸಮಯದಲ್ಲಿ ಕೆಲವು ಸೆಕೆಂಡ್‍ಗಳ ಕಾಲ ವ್ಯತ್ಯಾಸವಾಗಿದ್ದರೂ ವಿಮಾನ ಸ್ಫೋಟಗೊಂಡು ಈ ಇಬ್ಬರು ಬೇಸ್ ಜಂಪರ್‍ಗಳು ಮತ್ತು ಪೈಲೆಟ್ ಸಾವಿಗೀಡಾಗುತ್ತಿದ್ದರು. ಫ್ರೆಡ್ ಮತ್ತು ವಿನ್ಸ್ ಅದ್ಭುತ ಸಾಹಸಕ್ಕೆ ಅಪಾರ ಪ್ರಶಂಸೆ ವ್ಯಕ್ತವಾಗಿದೆ.  ಈ ಇಬ್ಬರು ಮಹಾ ಸಾಹಸಿಗರು ಯೂರೋಪ್‍ನ ವಿವಿಧೆಡೆ ನೂರಕ್ಕೂ ಹೆಚ್ಚು ಅಪಾಯಕಾರಿ ಬೇಸ್‍ಜಂಪ್ ಸಾಹಸ ಮಾಡಿ ಗಮನ ಸೆಳೆದಿದ್ದಾರೆ.

Facebook Comments

Sri Raghav

Admin