ಇನ್ನೂ ಎರಡು ದಿನ ತಪ್ಪಲ್ಲ ಮಳೆ – ಚಳಿ ಕಾಟ

ಈ ಸುದ್ದಿಯನ್ನು ಶೇರ್ ಮಾಡಿ

rain-1

ಬೆಂಗಳೂರು,ಡಿ.1- ತೀವ್ರ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣವಿದ್ದು ಜಿಟಿಜಿಟಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ರಾಜಧಾನಿ ಬೆಂಗಳೂರು ಸೇರಿ ದಂತೆ ರಾಜ್ಯದ ದಕ್ಷಿಣ ಒಳನಾಡಿನ ಹಲವು ಕಡೆ ಹಗುರದಿಂದ ಸಾಧಾರಣ ಮಳೆಯಾಗಿದೆ. ಕೆಲವೆಡೆ 2 ಸೆಂ.ಮೀವರೆಗೂ ಮಳೆ ಬಿದ್ದ ವರದಿಯಾಗಿದೆ.
ನಿನ್ನೆ ಸಂಜೆಯಿಂದಲೇ ಆರಂಭಗೊಂಡ ಮಳೆ ರಾತ್ರಿ ಇಡೀ ಸುರಿಯಿತು. ಇಂದು ಮುಂಜಾನೆಯಿಂದಲೇ ಜಿಟಿಜಿಟಿ ಮಳೆ ಆರಂಭಗೊಂಡು ದೈನಂದಿನ ಕೆಲಸಕಾರ್ಯಗಳಿಗೆ ಹೋಗು ವವರಿಗೆ ಅನಾನುಕೂಲವಾಯಿತು. ಒಂದೆಡೆ ಕೊರೆಯುವ ಚಳಿ ಮತ್ತೊಂದೆಡೆ ಸುರಿಯುವ ಮಳೆಯಿಂದ ಜನರು ಸಂಕಷ್ಟವನ್ನು ಎದುರಿಸುವಂತಾಯಿತು.

ಹವಾಮಾನ ಮುನ್ಸೂಚನೆ ಪ್ರಕಾರ ನಾಳೆಯವರೆಗೆ ಜಿಟಿಜಿಟಿ ಮಳೆ ಜೊತೆಗೆ ತಂಪಾದ ಮೇಲ್ಮೈ ಗಾಳಿ ಹೆಚ್ಚಾಗಲಿದೆ ಹಾಗೂ ಮೋಡ ಕವಿದ ವಾತಾವರಣ ಮುಂದುವರೆಯಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ತಿಳಿಸಿದರು. ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಪಶ್ಚಿಮಾಭಿಮುಖವಾಗಿ ಅರಬ್ಬೀ ಸಮುದ್ರದ ಕಡೆ ಚಲಿಸುತ್ತಿರುವುದರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದೆ. ಆದರೆ ಭಾರೀ ಮಳೆಯಾಗುವ ಮುನ್ಸೂಚನೆಗಳಿಲ್ಲ. ತೀವ್ರ ವಾಯುಭಾರ ಕುಸಿತದಿಂದಾಗಿ ಕೇರಳ ಹಾಗೂ ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹೇಳಿದರು. ಬಂಗಾಳಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ ಉಂಟಾಗಿದ್ದು , ಪೂರ್ವಾಭಿಮುಖವಾಗಿ ಚಲಿಸುವುದರಿಂದ ಒರಿಸ್ಸಾ ರಾಜ್ಯದ ಕಡೆಗೆ ಹೋಗಲಿದೆ. ಆಗಲೂ ಕೂಡ ಇದೇ ರೀತಿ ರಾಜ್ಯದ ದಕ್ಷಿಣ ಹಾಗೂ ಪೂರ್ವ ಭಾಗದ ಮೇಲೆ ಪರಿಣಾಮ ಉಂಟಾಗಲಿದೆ.  ಡಿ.5ರಿಂದ ಒಂದೆರಡು ದಿನ ಇದೇ ರೀತಿ ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಅವರು ಸ್ಪಷ್ಟಪಡಿಸಿದರು.

Facebook Comments

Sri Raghav

Admin