ಚುನಾವಣಾ ರಣರಂಗಕ್ಕಿಳಿಯಲು ಘಟಾನುಘಟಿ ರಾಜಕಾರಣಿಗಳ ಕುಡಿಗಳು ರೆಡಿ..!

ಈ ಸುದ್ದಿಯನ್ನು ಶೇರ್ ಮಾಡಿ

Son-Politics--01

-ವೈ.ಎಸ್.ರವೀಂದ್ರ
ಬೆಂಗಳೂರು, ಡಿ.1-ರಾಜಕಾರಣ ಎಂದರೆ ಹಾಗೇನೇ. ನನಗೂ ಇರಲಿ, ನನ್ನ ಮಕ್ಕಳು, ಮೊಮ್ಮಕ್ಕಳಿಗೂ ಇರಲಿ ಎಂದು ಹಪಹಪಿಸುವವರೇ ಬಹಳಷ್ಟು ಮಂದಿ.
ಒಂದು ಬಾರಿ ಈ ವಿಷವರ್ತುಲಕ್ಕೆ ಸಿಲುಕಿಕೊಂಡರೆ ಅದರಿಂದ ಹೊರ ಬರಲು ದುಸ್ಸಾಹಸವೇ ನಡೆಸಬೇಕು. ರಾಜಕಾರಣವೇ ಹಾಗೆ. ಮತದಾರ ಪ್ರಭು ಎಷ್ಟೇ ಟೀಕಿಸಲಿ, ಏನೇ ಮಾಡಲಿ ಗರಿಗರಿಯಾದ ಖಾದಿ ಮಾತ್ರ ಕೈ ತಪ್ಪಬಾರದು ಎಂದು ಹಗಲು-ರಾತ್ರಿ ಜಪಮಾಡುತ್ತಲೇ ಇರುತ್ತಾರೆ. ಹಿಂದೇಂದೂ ಕಾಣದಷ್ಟು ಜಿದ್ದಾಜಿದ್ದಿನ ಕುರುಕ್ಷೇತ್ರವಾಗಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇದೆ. ಮೇ 13ರಂದು ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಬೇಕು.

ಚುನಾವಣೆಗೆ ಇನ್ನು 6 ತಿಂಗಳು ಇರುವಾಗ ರಾಜ್ಯದಲ್ಲಿ ಒಂದು ರೀತಿ ಚುನಾವಣೆ ಕಾವು ಕಾಣಿಸತೊಡಗಿದೆ. ಅಧಿಕಾರ ಹಿಡಿಯಲು ಬಿಜೆಪಿ ಈಗಾಗಲೇ ಜನಾಶೀರ್ವಾದ ಯಾತ್ರೆ ನಡೆಸಿದರೆ, ಜೆಡಿಎಸ್ ಕೂಡ ಕುಮಾರ ಪರ್ವ ಆರಂಭಿಸಿದೆ. ಇನ್ನು ಆಡಳಿತರೂಢ ಕಾಂಗ್ರೆಸ್ ಈ ತಿಂಗಳಿನಿಂದ ಜನಾಶೀರ್ವಾದ ಯಾತ್ರೆ ನಡೆಸುವ ಮೂಲಕ ಪುನಃ ಅಧಿಕಾರ ಪಡೆಯುವ ಹುಮ್ಮಸ್ಸಿನಲ್ಲಿದೆ. ಇಷ್ಟೆಲ್ಲ ಪೀಠಿಕೆ ಏಕೆಂದರೆ ಈ ಬಾರಿಯ ಚುನಾವಣೆಯಲ್ಲಿ ಅಪ್ಪ-ಮಕ್ಕಳು, ಅಣ್ಣ-ತಮ್ಮಂದಿರು, ಸಹೋದರ-ಸಹೋದರಿಯರು, ತಂದೆ-ಮಗಳು ಸೇರಿದಂತೆ ಕುಟುಂಬದವರೇ ಸ್ಪರ್ಧಿಸಲು ಸಜ್ಜಾಗಿದ್ದಾರೆ.

ಪಕ್ಷದ ವರಿಷ್ಠರು ಈವರೆಗೂ ಯಾರೊಬ್ಬರಿಗೂ ಟಿಕೆಟ್ ಖಚಿತಪಡಿಸಿಲ್ಲವಾದರೂ ಆಗಲೇ ಕ್ಷೇತ್ರದಲ್ಲಿ ತಾವೇ ಅಧಿಕೃತ ಅಭ್ಯರ್ಥಿಗಳೆಂದು ಘೋಷಿಸಿಕೊಂಡು ಮತದಾರರ ಓಲೈಕೆಗೆ ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ.ಈಗಾಗಲೇ ಕ್ಷೇತ್ರದಲ್ಲಿ ಸಂಭವನೀಯ ಅಭ್ಯರ್ಥಿಗಳು ಕ್ರೀಡಾಸ್ಪರ್ಧೆ ಏರ್ಪಡಿಸುವುದು, ಸ್ತ್ರೀ ಶಕ್ತಿ ಸಂಘಟನಗಳಿಗೆ ಆರ್ಥಿಕ ನೆರವು, ಯುವಕರಿಗೆ ಕ್ರೀಡಾ ಉಪಕರಣ, ನಿರುದ್ಯೋಗಿ ಯುವತಿಯರಿಗೆ ಹೊಲಿಗೆಯಂತ್ರ ಸೇರಿದಂತೆ ನಾನಾ ರೀತಿಯ ಆಮಿಷಗಳನ್ನು ಒಡ್ಡುತ್ತಿದ್ದಾರೆ.

ಕಣದಲ್ಲಿ ಯಾರ್ಯಾರು ?

ಸಿದ್ದರಾಮಯ್ಯ-ಡಾ.ಯತೀಂದ್ರ:
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರುಗಳ ಪೈಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಡಾ.ಯತೀಂದ್ರ. ಕುಟುಂಬ ರಾಜಕಾರಣವನ್ನು ಪ್ರಬಲವಾಗಿ ವಿರೋಧಿಸುತ್ತಲೇ ಬಂದಿದ್ದ ಸಿದ್ದರಾಮಯ್ಯ ತನ್ನ ಕಣ್ಣೆದುರೇ ಪುತ್ರ ಒಂದು ಬಾರಿ ಶಾಸಕನಾಗಬೇಕೆಂಬ ಗುರಿಯನ್ನು ಇಟ್ಟುಕೊಂಡಿದ್ದಾರೆ. ಈ ಮೊದಲು ಹಿರಿಯ ಪುತ್ರ ರಾಕೇಶ್‍ನನ್ನು ಚುನಾವಣಾ ಕಣಕ್ಕೆ ತರಲು ಒಲವು ತೋರಿದ್ದರಾದರೂ ವಿಧಿ ಆಟವೇ ಬೇರೆ ಇತ್ತು. ಇದೀಗ ಕಿರಿಯ ಪುತ್ರ ಡಾ.ಯತೀಂದ್ರನನ್ನು ತಾವು ಪ್ರತಿನಿಧಿಸುವ ವರುಣಾ ವಿಧಾನಸಭಾದಿಂದ ಹಾಗೂ ತಮಗೆ ರಾಜಕೀಯ ಪುನರ್‍ಜನ್ಮ ನೀಡಿದ ಚಾಮುಂಡಿ ಕ್ಷೇತ್ರದಿಂದ ಸಿದ್ದರಾಮಯ್ಯ ಕೊನೆಯ ಬಾರಿಗೆ ಅದೃಷ್ಟ ಪರೀಕ್ಷೆ ಎದುರಿಸಲು ಮುಂದಾಗಿದ್ದಾರೆ.

ಬಿ.ಎಸ್.ಯಡಿಯೂರಪ್ಪ-ಬಿ.ವೈ.ರಾಘವೇಂದ್ರ:
ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಬಿ.ಎಸ್.ಯಡಿಯೂರಪ್ಪ ಎಲ್ಲಿಂದ ಕಣಕ್ಕಿಳಿಯುತ್ತಾರೆ ಎಂಬುದರ ಬಗ್ಗೆ ಸ್ವತಃ ಅವರಿಗೆ ಖಚಿತತೆ ಇಲ್ಲ. ಒಂದು ಬಾರಿ ಬಾಗಲಕೋಟೆ ಜಿಲ್ಲೆ ತೆರೆದಾಳದಿಂದ ಎಂದರೆ ಮತ್ತೊಂದು ಬಾರಿ ಶಿಕಾರಿಪುರದಿಂದಲೇ ಅಖಾಡಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಸದ್ಯಕ್ಕೆ ಶಿಕಾರಿಪುರದಿಂದ ಅವರ ಪುತ್ರ ಬಿ.ವೈ.ರಾಘವೇಂದ್ರ ಶಾಸಕರಾಗಿದ್ದಾರೆ. ಒಂದು ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದಲೂ ಆಯ್ಕೆಯಾಗಿದ್ದರು. ಈಗ ಯಡಿಯೂಪ್ಪ ಶಿಕಾರಿಪುರದಿಂದ ಸ್ಪರ್ಧಿಸಿದರೆ, ರಾಘವೇಂದ್ರ ರಾಣೆಬೆನ್ನೂರು, ಹಾನಗಲ್ ಸೇರಿದಂತೆ ಮತ್ತಿತರ ಕಡೆ ವಲಸೆ ಹೋಗುವ ಸಂಭವವಿದೆ.

ರಾಮಲಿಂಗಾರೆಡ್ಡಿ-ಸೌಮ್ಯಾರೆಡ್ಡಿ:
ಗೃಹ ಸಚಿವ ರಾಮಲಿಂಗಾರೆಡ್ಡಿ ಹಾಗೂ ಅವರ ಪುತ್ರಿ ಸೌಮ್ಯಾರೆಡ್ಡಿ ಈ ಬಾರಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದಾರೆ. ಜಯನಗರ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಹಾರಿಸಿ ಬರುತ್ತಿದ್ದ ರಾಮಲಿಂಗಾರೆಡ್ಡಿ, ನಂತರ ಬಿಟಿಎಂಲೇಔಟ್ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದಾರೆ. ಇದೀಗ ತಮ್ಮ ಪುತ್ರಿಯನ್ನು ಹಳೆಯ ಕ್ಷೇತ್ರವಾದ ಜಯನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಕಸರತ್ತು ನಡೆಸಿದ್ದಾರೆ. ವರಿಷ್ಠರಿಂದ ಈವರೆಗೂ ಯಾವುದೇ ರೀತಿಯ ಭರವಸೆ ಬಂದಿಲ್ಲವಾದರೂ ಕ್ಷೇತ್ರದಲ್ಲಿ ಸೌಮ್ಯಾರೆಡ್ಡಿ ಸಮಾಜ ಸೇವೆ ಮಾಡುವ ಮೂಲಕ ಮತದಾರರ ಮನಗೆಲ್ಲುವ ಕಸರತ್ತು ನಡೆಸುತ್ತಿದ್ದಾರೆ.

ಕೆ.ಎನ್.ರಾಜಣ್ಣ-ರಾಜೇಂದ್ರ:
ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ ತಮ್ಮ ಪುತ್ರ ರಾಜೇಂದ್ರನನ್ನು ಕಣಕ್ಕಿಳಿಸಲು ಹರಸಾಹಸ ನಡೆಸುತ್ತಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಕಾಂಗ್ರೆಸ್ ಮುಖಂಡರಿಗೆ ಒತ್ತಡ ಹಾಕಿದ್ದಾರೆ. ಬಿಜೆಪಿ ಶಾಸಕ ಸುರೇಶ್‍ಗೌಡ, ಜೆಡಿಎಸ್ ಸಂಭವನೀಯ ಅಭ್ಯರ್ಥಿ ಗೌರಿಶಂಕರ್ ಕೂಡ ಈಗಾಗಲೇ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಇನ್ನು ರಾಜೇಂದ್ರ ಸ್ಪರ್ಧಿಸಿದರೆ ಇದು ಕೂಡ ರಾಜ್ಯದ ಗಮನ ಸೆಳೆಯಲಿದೆ.

ಟಿ.ಬಿ.ಜಯಚಂದ್ರ-ಸಂತೋಷ್:
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಕೂಡ ಮಗ ಸಂತೋಷ್‍ರನ್ನು ರಾಜಕೀಯದಲ್ಲಿ ಮೇಲಕ್ಕೆ ಕರೆತರಲು ಮುಂದಾಗಿದ್ದಾರೆ. ಈ ಹಿಂದೆ ತುಮಕೂರು ಲೋಕಸಭೆ ಕ್ಷೇತ್ರದಿಂದ ಟಿಕೆಟ್‍ಗೆ ಪ್ರಯತ್ನಿಸಿದ್ದರಾದರೂ ಅದು ಈಡೇರಲಿಲ್ಲ. ಇದೀಗ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸಂತೋಷ್‍ಗೆ ಟಿಕೆಟ್ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿದಂತೆ ಮತ್ತಿತರಿಗೆ ಮನವಿ ಮಾಡಿದ್ದಾರೆ.

ಆರ್.ವಿ.ದೇವರಾಜ್-ಯುವರಾಜ್:
ಚಿಕ್ಕಪೇಟೆ ವಿಧಾನಸಭೆ ಶಾಸಕ ಆರ್.ವಿ.ದೇವರಾಜ್ ಕೂಡ ಮಗ ಯುವರಾಜ್‍ನನ್ನು ವಿಧಾನಸಭಾ ಕ್ಷೇತ್ರಕ್ಕೆ ಕರೆತರಲು ಒಲವು ಹೊಂದಿದ್ದಾರೆ. ಈಗಾಗಲೇ ಬಿಬಿಎಂಪಿ ಸದಸ್ಯರಾಗಿರುವ ಯುವರಾಜ್ ಪಕ್ಕದ ಚಾಮರಾಜಪೇಟೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಈ ಕ್ಷೇತ್ರದ ಮೇಲೆ ಹಾಲಿ ಶಾಸಕ ಜಮೀರ್‍ಅಹಮ್ಮದ್, ನಿವೃತ್ತ ಪೆÇಲೀಸ್ ಅಧಿಕಾರಿ ಭಾವ ಕೂಡ ಆಕಾಂಕ್ಷಿಯಾಗಿರುವುದರಿಂದ ಯುವರಾಜ್‍ಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳೇ ಹೆಚ್ಚಾಗಿವೆ.

ರೋಷನ್‍ಬೇಗ್-ರೋಹನ್‍ಬೇಗ್:
ನಗರಾಭಿವೃದ್ಧಿ ಸಚಿವ ಹಾಗೂ ಬೆಂಗಳೂರಿನ ಪ್ರಭಾವಿ ಅಲ್ಪಸಂಖ್ಯಾತ ಸಮುದಾಯದ ಮುಖಂಡ ರೋಷನ್‍ಬೇಗ್ ಕೂಡ ಕುಟುಂಬ ರಾಜಕಾರಣಕ್ಕೆ ಹೊರತಾಗಿಲ್ಲ. ತಮ್ಮ ಪುತ್ರನನ್ನು ಶಿವಾಜಿನಗರ ಇಲ್ಲವೇ ಹೆಬ್ಬಾಳ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಅವರು ಭಾರೀ ಕಸರತ್ತು ನಡೆಸಿದ್ದಾರೆ. ತಮ್ಮ ಅವಧಿಯಲ್ಲೇ ಒಂದು ಬಾರಿ ಪುತ್ರ ವಿಧಾನಸಭೆ ಪ್ರವೇಶಿಸಬೇಕೆಂಬುದು ಅವರ ಹೆಬ್ಬಯಕೆ. ಈಗಾಗಲೇ ರೋಹನ್‍ಬೇಗ್ ಹೆಬ್ಬಾಳ ವಿಧಾನಸಭೆ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುವ ಮೂಲಕ ಕಾಣಿಸಿಕೊಳ್ಳುತ್ತಿದ್ದರಾದರೂ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಹಾಗೂ ವಿಧಾನಪರಿಷತ್ ಸದಸ್ಯ ಬೈರತಿ ಸುರೇಶ್ ಕೂಡ ಈ ಕ್ಷೇತ್ರದ ಮೇಲೆ ಕಣ್ಣಿಟ್ಟೇ ಹಲವು ತಿಂಗಳಾಗಿವೆ.ಇದಕ್ಕಾಗಿ ಅವರು ಕ್ಷೇತ್ರದಲ್ಲಿ ಉಚಿತ ವೈದ್ಯಕೀಯ ಸೇವೆ, ಉಚಿತ ಆರೋಗ್ಯ ಶಿಬಿರ, ಆ್ಯಂಬುಲೆನ್ಸ್ ಸೇವೆ, ಉಚಿತ ನೀರು ಪೂರೈಕೆ, ಕನ್ನಡಪರ ಸಂಘಟನೆಗಳ ಮೂಲಕ ಉದಾರ ದೇಣಿಗೆ ನೀಡುವ ಮೂಲಕ ಸಮಾಜ ಸೇವೆ ಸೇರಿದಂತೆ ಹತ್ತು ಹಲವು ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕೆ.ಎಚ್.ಮುನಿಯಪ್ಪ-ರೂಪಾ:
ಇನ್ನು ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಕೆ.ಎಚ್.ಮುನಿಯಪ್ಪ ಕೂಡ ತಮ್ಮ ಪುತ್ರಿ ರೂಪಾ ಅವರನ್ನು ಕೆಜಿಎಫ್ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಈ ಹಿಂದೆ ರೂಪಾ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಮಾಜಿ ಶಾಸಕ ವೈ.ಸಂಪಗಿ ಅವರ ತಾಯಿ ರಾಮಕ್ಕನ ಎದುರು ಪರಾಭವಗೊಂಡಿದ್ದರು. ಆದರೂ ಕೆಜಿಎಫ್‍ನಿಂದಲೇ ಈ ಬಾರಿ ಅಖಾಡಕ್ಕಿಳಿಯಲು ಮುಂದಾಗಿದ್ದಾರೆ.  ಇದೇ ರೀತಿ ಪಶುಸಂಗೋಪನ ಸಚಿವ ಎ.ಮಂಜು, ಕೇಂದ್ರದ ಮಾಜಿ ಸಚಿವ ಎಂ.ವೀರಪ್ಪಮೊಯ್ಲಿ ಸೇರಿದಂತೆ ಅನೇಕ ಸಚಿವರು ಮತ್ತು ಶಾಸಕರು ತಮ್ಮ ಪುತ್ರರತ್ನರಿಗೆ ಈ ಬಾರಿ ಶತಾಯಗತಾಯ ಟಿಕೆಟ್ ಕೊಡಿಸಲು ಭಾರೀ ಲಾಬಿ ನಡೆಸಿದ್ದಾರೆ.

Facebook Comments

Sri Raghav

Admin