ಬಯಲಾಯ್ತು ಮಂಗಳೂರು ಏರ್ ಪೋರ್ಟ್’ನ ಕಳ್ಳಸಾಗಣೆ ‘ಬಹುರೂಪ’..!

ಈ ಸುದ್ದಿಯನ್ನು ಶೇರ್ ಮಾಡಿ

Mangalore-01

ಮಂಗಳೂರು, ಡಿ.1-ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕಳೆದ ನವೆಂಬರ್‍ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಆರು ಪ್ರತ್ಯೇಕ ಪ್ರಕರಣಗಳಲ್ಲಿ 64.38 ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಅಕ್ರಮಗಳನ್ನು ಪತ್ತೆ ಮಾಡಿದ್ದಾರೆ. ಏರ್ ಪೋರ್ಟ್ ನ ಸೀಮಾಸುಂಕ ಅಧಿಕಾರಿಗಳು ಕಳೆದ ತಿಂಗಳು 2.141 ಕೆ.ಜಿ. ಚಿನ್ನ ವಶಪಡಿಸಿಕೊಂಡಿದ್ದಾರೆ. ಇವು 64.38 ಲಕ್ಷ ರೂ. ಬೆಲೆಬಾಳುತ್ತವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಅವಧಿಯಲ್ಲಿ ಕಳ್ಳಸಾಗಣೆದಾರರು ಚಿನ್ನವನ್ನು ಸಾಗಣೆ ಮಾಡಲು ವಿಭಿನ್ನ ಕುತಂತ್ರಗಳನ್ನು ಅನುಸರಿಸಿರುವುದು ಪತ್ತೆಯಾಗಿದೆ. ಬಂಗಾರದ ಪುಡಿಯನ್ನು ರಾಸಾಯನಿಕದೊಂದಿಗೆ ಬೆರೆಸಿ ಸ್ಮಗ್ಲಿಂಗ್ ಮಾಡಲು ಯತ್ನಿಸಿದ ಪ್ರಕರಣದಲ್ಲಿ 803 ಗ್ರಾಂ ಚಿನ್ನವನ್ನು ಪತ್ತೆ ಮಾಡಲಾಗಿದೆ. ಮತ್ತೊಬ್ಬ ತನ್ನ ಪಾದದ ಅಡಿಯಲ್ಲಿ 466.4 ಗ್ರಾಂ ಹಳದಿ ಲೋಹವನ್ನು ಇಟ್ಟು ಸಾಗಾಟಕ್ಕೆ ಯತ್ನಿಸಿ ಸಿಕ್ಕಿ ಬಿದ್ದಿದ್ದಾನೆ.

ಇನ್ನೊಬ್ಬ ಪ್ರಯಾಣಿಕ ತನ್ನ ಪ್ಯಾಂಟಿನೊಳಗೆ 184.29 ಗ್ರಾಂ ಚಿನ್ನವನ್ನು ಅಡಗಿಸಿಟ್ಟಿದ್ದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಮಗದೊಬ್ಬ ಕಳ್ಳಸಾಗಣೆದಾರ ತನ್ನ ಗುದದ್ವಾರದಲ್ಲಿ 466 ಗ್ರಾಂ ತೂಕದ 4 ಬಂಗಾರದ ಬಿಸ್ಕತ್ತುಗಳನ್ನು ಬಚ್ಚಿಟ್ಟುಕೊಂಡು ಸಾಗಿಸಲು ಯತ್ನಿಸಿ ಸೀಮಾಸುಂಕ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.  ಮತ್ತೊಬ್ಬ ವ್ಯಕ್ತಿ 221 ಗ್ರಾಂ ತೂಕದ ಚಿನ್ನಕ್ಕೆ ಉಕ್ಕಿನ ಲೇಪನದಿಂದ ಮರೆಮಾಚ್ಚಿದ್ದನ್ನು ಅಧಿಕಾರಿಗಳು ತಪಾಸಣೆ ವೇಳೆ ಪತ್ತೆ ಮಾಡಿ ವಶಪಡಿಸಿಕೊಂಡಿದ್ದಾರೆ.

Facebook Comments

Sri Raghav

Admin