ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಭದ್ರತೆಯೇ ಇಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

Mysuru-Airport-01

ಮೈಸೂರು,ಡಿ.1- ರಾಷ್ಟ್ರಪತಿ ಸೇರಿದಂತೆ ಅತಿಗಣ್ಯರ ಆಗಮನ, ನಿರ್ಗಮನ ವೇಳೆ ಸಾಕಷ್ಟು ವಿಶೇಷ ಭದ್ರತೆ ವಹಿಸುವ ವಿಮಾನ ನಿಲ್ದಾಣಗಳೇ ಅಭದ್ರತೆಯ ತಾಣವಾದರೆ…? ಹೌದು ಇಂತಹ ಅಭದ್ರತೆಗೆ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ಲಕ್ಷ್ಯವೇ ಕಾರಣವಲ್ಲವೆ… ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಭದ್ರತೆಯೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.  ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಒಳಪ್ರವೇಶಿಸುವವರಿಗೆ ತಪಾಸಣೆ ನಡೆಸಿ ಒಳಬಿಟ್ಟರೂ ವಿಮಾನ ನಿಲ್ದಾಣದ ಕಾಂಪೌಂಡ್ ಗೋಡೆಯೇ ಕುಸಿದಿರುವುದರಿಂದ ಇದೆಂತಹ ಭದ್ರತೆ ಎಂದು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮೈಸೂರು ನಂಜನಗೂಡು ಮುಖ್ಯರಸ್ತೆಯಲ್ಲಿರುವ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಒಳ ಹೋಗುವವರಿಗೆ ಹೊರ ಬರುವವರಿಗೆ ತಪಾಸಣೆ ನಡೆಸಿದರೂ ಪ್ರಯೋಜನವಿಲ್ಲದಂತಾಗಿದೆ. ಈ ನಿಲ್ದಾಣದ ಪ್ರಮುಖ ಪ್ರವೇಶದ್ವಾರದ ಬಳಿಯೇ ಇರುವ ಕಾಂಪೌಂಡ್ ಗೋಡೆ ಸುಮಾರು 50 ಮೀಟರ್ ಉದ್ದದವರೆಗೂ ಕುಸಿದು ಬಿದ್ದಿದ್ದು ಆ ಸ್ಥಳದಲ್ಲಿ ಕೇವಲ ತಂತಿಬೇಲಿ ಹಾಕಿ ಅಕ್ರಮ ಪ್ರವೇಶ ಮಾಡಬಾರದು ಎಂಬ ಬೋರ್ಡ್ ಹಾಕಿರುವುದು ಇದೆಂತಹ ಭದ್ರತೆ ಎಂದು ಅಚ್ಚರಿ ಮೂಡಿಸುತ್ತಿದೆ.

ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಈ ರೀತಿ ನಿರ್ಲಕ್ಷ್ಯತೆ ತೋರುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೂ ಕಾರಣವಾಗಿದೆ. ರಾಷ್ಟ್ರಪತಿಗಳು, ಅತಿಗಣ್ಯ ವ್ಯಕ್ತಿಗಳು ವಿಮಾನದಲ್ಲಿ ಬಂದು ಹೋಗುವ ಈ ಸ್ಥಳದಲ್ಲೇ ಭದ್ರತೆ ಲೋಪವಾಗಿದ್ದರೂ ಕೇವಲ ತಂತಿಬೇಲಿ ಹಾಕಿ ನಿರುಮ್ಮಳವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಸಹ ತಮ್ಮ ತವರು ಜಿಲ್ಲೆಗೆ ಆಗಾಗ ಭೇಟಿ ನೀಡುತ್ತಿದ್ದು , ಆಗೆಲ್ಲ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಾರೆ ಹಾಗಿದ್ದರೂ ಈ ರೀತಿಯ ಭದ್ರತೆ ಎಷ್ಟು ಸರಿಯಾಗಿದೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

Facebook Comments

Sri Raghav

Admin