ಹೊಸದಾಗಿ ಪಾಸ್ಪೋರ್ಟ್ ಮಾಡಿಸುವವರಿಗೆ ಇಲ್ಲಿದೆ ಸಿಹಿಸುದ್ದಿ

ಈ ಸುದ್ದಿಯನ್ನು ಶೇರ್ ಮಾಡಿ

passport

ನವದೆಹಲಿ, ಡಿ.1- ಹೊಸದಾಗಿ ಪಾಸ್ಪೋರ್ಟ್ ಮಾಡಿಸುವವರಿಗೆ ಇದು ಸಂತಸದ ಮತ್ತು ನಿರಾಳದ ಸುದ್ದಿ. ಏಕೆಂದರೆ ನೂತನ ವಿದೇಶಿ ರಹದಾರಿ ಪತ್ರಗಳಿಗೆ (ಪಾಸ್ಪೋರ್ಟ್) ಇನ್ನು ಮುಂದೆ ಪೊಲೀಸ್ ಪರಿಶೀಲನೆ ಮತ್ತು ವಿಚಾರಣೆಯ ಅಗತ್ಯವಿರುವುದಿಲ್ಲ. ಇದಕ್ಕಾಗಿ ಅಪರಾಧ ಮತ್ತು ಅಪರಾಧಿಗಳ ಜಾಡ ಪತ್ತೆ ಮಾಡುವ ಜಾಲ ಮತ್ತು ವ್ಯವಸ್ಥೆಗಳ ಯೋಜನೆ (ಕ್ರೈಂ ಆ್ಯಂಡ್ ಕ್ರಿಮಿನಲ್ ಟ್ರಾಕಿಂಗ್ ನೆಟ್‍ವರ್ಕ್ ಆ್ಯಂಡ್ ಸಿಸ್ಟಮ್ಸ್ ಪ್ರಾಜೆಕ್ಟ್-ಸಿಸಿಟಿಎನ್‍ಎಸ್) ಎಂಬ ಅತ್ಯಾಧುನಿಕ ತಂತ್ರಜ್ಞಾನ ಜಾರಿಗೆ ಬರಲಿದೆ. ಈ ವ್ಯವಸ್ಥೆಯಲ್ಲಿ ಹೊಸದಾಗಿ ಪಾಸ್ಪೋರ್ಟ್ ಪಡೆಯುವ ಮಂದಿ ಪೊಲೀಸ್ ವಿಚಾರಣೆ ಮತ್ತು ಪರಿಶೀಲನೆಯ ಕಿರಿಕಿರಿ ಅನುಭವಿಸುವುದು ಇನ್ನು ಮುಂದೆ ತಪ್ಪಲಿದೆ.

ಈ ವಿಷಯ ಪ್ರಕಟಿಸಿರುವ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮಹರ್ಷಿ ಪಾಸ್ಪೋರ್ಟ್‍ಗಳನ್ನು ತ್ವರಿತವಾಗಿ ನೀಡಲು ಮತ್ತು ಪೊಲೀಸ್ ಪರಿಶೀಲನೆ ವಿಧಾನದಿಂದ ಮುಕ್ತಗೊಳಿಸಿ ಸುಗಮ ನೀಡಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಹೊಸ ಪಾಸ್ಪೋರ್ಟ್ ನೀಡಿಗೆ ವಿಧಾನದಲ್ಲಿ ಪೊಲೀಸರ ಭೌತಿಕ ತಪಾಸಣೆ ತಪ್ಪಿಸುವ ನಿಟ್ಟಿನಲ್ಲಿ ಇದು ಮಹತ್ವದ ಕ್ರಮವಾಗಿದೆ. ಪಾಸ್ಪೋರ್ಟ್ ನೀಡಿದ ನಂತರ ಕೆಲವು ಪ್ರಕರಣಗಳಲ್ಲಿ ತೀರಾ ಅಗತ್ಯವಾದರೆ ಪೊಲೀಸ್ ತಪಾಸಣೆಯನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಆಧಾರ್ ಸಂಖ್ಯೆ, ಪ್ಯಾನ್‍ಕಾರ್ಡ್ ಮೊದಲಾದ ಪ್ರಮಾಣ ಪತ್ರಗಳನ್ನು ಆನ್‍ಲೈನ್ ಮೂಲಕ ಕೂಲಕಂಷ ತಪಾಸಣೆಗೆ ಒಳಪಡಿಸಿದ ನಂತರ ಹೊಸ ಪಾಸ್ಪೋರ್ಟ್‍ಗಳನ್ನು ನೀಡಲಾಗುವುದು ಎಂದು ಮಹರ್ಷಿ ತಿಳಿಸಿದ್ದಾರೆ.  ಇದೇ ವೇಳೆ ಪೊಲೀಸ್ ತಪಾಸಣೆ ವರದಿಯನ್ನು ಕ್ಷಿಪ್ರವಾಗಿ ಸಲ್ಲಿಸಲು ಅನುಕೂಲವಾಗುವಂತೆ ಎಂ ಪಾಸ್ಪೋರ್ಟ್ ಪೊಲೀಸ್ ಅಪ್ಲಿಕೇಷನ್ ಎಂಬ ಹೊಸ ವ್ಯವಸ್ಥೆಯನ್ನು ಸಹ ವಿದೇಶಾಂಗ ವ್ಯವಹಾರಗಳ ಇಲಾಖೆ ಜಾರಿಗೆ ತಂದಿದೆ.

Facebook Comments

Sri Raghav

Admin