ಏಡ್ಸ್/ಹೆಚ್‍ಐವಿ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ಸಂಗತಿಗಳು ಇಲ್ಲಿವೆ

ಈ ಸುದ್ದಿಯನ್ನು ಶೇರ್ ಮಾಡಿ

ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನ. ವಿಶ್ವದಾದ್ಯಂತ ಈ ಮಾರಕ ರೋಗ ಕುರಿತು ಜಾಗೃತಿ ಮೂಡಿಸುವ ದಿನ. ಏಡ್ಸ್ ದಿನಾಚರಣೆ ನಿಮಿತ್ತ ಈ ಲೇಖನ.

Aids--01

ಶತಶತಮಾನಗಳಿಂದ ಮನುಕುಲವನ್ನು ಅನೇಕ ಸಾಂಕ್ರಾಮಿಕ ರೋಗರುಜಿನಗಳು ಕಾಡುತ್ತಿವೆ. ಪ್ಲೇಗ್, ಸಿಡುಬು, ಕಾಲರಾ, ಕ್ಷಯ, ಕ್ಯಾನ್ಸರ್, ಗೊನೆರಿಯಾ, ಸಿಪಿಲಿಸ್, ಮಲೇರಿಯಾ ಇತ್ಯಾದಿ. ಈ ಕಾಯಿಲೆಗಳು ಮಾನವನ ಅಸ್ವಿತ್ವಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದವು. ಇವುಗಳಲ್ಲಿ ತುಂಬಾ ಹೃದಯ ವಿದ್ರಾವಕ ಮತ್ತು ಮಾರಕ ರೋಗವೆಂದರೆ ಏಡ್ಸ್. 1981ರಲ್ಲಿ ಕಾಣಿಸಿಕೊಂಡ ಈ ಹೆಮ್ಮಾರಿ ಮಾನವನನ್ನು ಕಾಡುತ್ತಲೆ ಇದೆ. ಈ ಮೇಲೆ ತಿಳಿಸಿದ ರೋಗಗಳನ್ನು ಔಷಧಿಗಳಿಂದ ಗುಣಪಡಿಸಬಹುದು. ಆದರೆ ಏಡ್ಸ್ ಮತ್ತು ಕ್ಯಾನ್ಸರ್‍ನಂಥ ರೋಗಗಳನ್ನು ಗುಣಪಡಿಸಲು ಈ ಕ್ಷಣದಲ್ಲೂ ಸಂಶೋಧನೆಗಳು ಮುಂದುವರೆಯುತ್ತಿವೆ. ಇತರೆ ದೇಶಗಳಂತೆ ಭಾರತದಲ್ಲೂ ಏಡ್ಸ್ ಪರರ ರೋಗ ಎಂದೇ ಪರಿಗಣಿಸಲಾಗಿದೆ. ಮನಸೋಇಚ್ಚೆಯ ಜೀವನಶೈಲಿ ಮತ್ತು ಸ್ವೇಚ್ಛಾಚಾರದ ಮಂದಿಗೆ ಈ ಭಯಾನಕ ರೋಗ ಅಮರಿಕೊಳ್ಳುತ್ತದೆ. ಏಡ್ಸ್ ಪಾಪದ ರೋಗ ಎಂದೂ ಸಹ ಪರಿಗಣಿಸಲಾಗಿದೆ. ಈ ರೋಗದ ಪ್ರಭಾವದಿಂದ ರೋಗಿಗಳು ತಾರತಮ್ಯ, ತಾತ್ಸಾರ ಮತ್ತು ನಿರಾಕರಣೆಗೆ ಒಳಗಾಗುತ್ತಾರೆ. ಇದು ಕುಟುಂಬಗಳು, ಸಮುದಾಯಗಳು, ಕೆಲಸ ಮಾಡುವ ಸ್ಥಳಗಳು, ಶಾಲಾ-ಕಾಲೇಜುಗಳು ಮತ್ತು ಆರೋಗ್ಯ ಆರೈಕೆ ಕೇಂದ್ರಗಳ ಮೇಲೆ ಪರಿಣಾಮ ಬೀರುತ್ತದೆ.

ಹೆಚ್‍ಐವಿ/ಏಡ್ಸ್:

ಹೆಚ್‍ಐವಿ-ಹ್ಯೂಮನ್ ಇಮ್ಯೂನೋ ಡಿಫಿಸಿಯೆನ್ಸಿ ವೈರಸ್ ಎಂಬ ಸೂಕ್ಷ್ಮಜೀವಿಯಿಂದ ಕಂಡುಬರುತ್ತದೆ. ಈ ವೈರಾಣು ದೇಹದ ರೋಗ ಪ್ರತಿರೋಧಕ ಶಕ್ತಿಯನ್ನು ಹಾನಿಗೊಳಿಸುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಒಮ್ಮೆ ಕುಂಠಿತಗೊಂಡರೆ, ಬ್ಯಾಕ್ಟೀರಿಯಾ, ಫಂಗೈ, ವೈರಸ್‍ನಂಥ ವಿವಿಧ ಸೂಕ್ಷ್ಮ ಜೀವಿಗಳು ಹಾಗೂ ಇತರ ಪರಾವಲಂಬಿಗಳು ದೇಹದ ಮೇಲೆ ದಾಳಿ ನಡೆಸಿ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ರೋಗ ಪ್ರತಿರೋಧಕ ಕುಂಠಿತಗೊಳ್ಳುವುದರಿಂದ ಹಾಗೂ ಬಹು ಸೋಂಕುಗಳು ತಗಲುವುದರಿಂದ ಕ್ಯಾನ್ಸರ್ ರೋಗ ಕಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಹೆಚ್‍ಐವಿ/ಏಡ್ಸ್ ಅಂಕಿಅಂಶಗಳು :

HIV-cases-dip-transmission-through-unprotected-sex-201709200224364616

ವಿಶ್ವಾದ್ಯಂತ 66 ದಶಲಕ್ಷಕ್ಕೂ ಅಧಿಕ ಮಂದಿ ಹೆಚ್‍ಐವಿ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಮಾರಕ ರೋಗಕ್ಕೆ ಈಗಾಗಲೇ 26 ದಶಲಕ್ಷ ಜನರು ಬಲಿಯಾಗಿದ್ದಾರೆ. ಜಾಗತಿಕವಾಗಿ ಕಾಡುತ್ತಿರುವ ಈ ಮಹಾಮಾರಿ ಉಪಟಳದ ಬಗ್ಗೆ ವಿಶ್ವಸಂಸ್ಥೆಯ ವರದಿ ಅಂದಾಜು ಮಾಡಿರುವಂತೆ ಭಾರತವು 5.7 ದಶಲಕ್ಷ ಹೆಚ್‍ಐವಿ/ಏಡ್ಸ್ ಸೋಂಕಿತ ವ್ಯಕ್ತಿಗಳೊಂದಿಗೆ ದಕ್ಷಿಣ ಆಫ್ರಿಕಾವನ್ನೂ ಹಿಂದಿಕ್ಕಿದೆ. ದಕ್ಷಿಣ ಆಫ್ರಿಕಾದಲ್ಲಿ 5.5 ದಶಲಕ್ಷದಷ್ಟು ಹೆಚ್‍ಐವಿ/ಏಡ್ಸ್ ಸೋಂಕಿತ ಜನರಿದ್ದಾರೆ. ಈ ಮಾರಕ ರೋಗದಿಂದ ಪುರುಷರು ಮತ್ತು ಮಹಿಳೆಯರು ಸಮನಾಗಿ ಬಳಲುತ್ತಾರೆ. ಈ ಹೆಮ್ಮಾರಿ ಬಹುತೇಕ 15-49 ವರ್ಷದ ವಯೋಮಾನದವರನ್ನು ಕಾಡುತ್ತದೆ.
ರೋಗ ಲಕ್ಷಣಗಳು ಮತ್ತು ಚಿಹ್ನೆಗಳು :

maxresdefault

ಹೆಚ್‍ಐವಿ ಮತ್ತು ಏಡ್ಸ್ ರೋಗ ಲಕ್ಷಣಗಳು ಸೋಂಕಿನ ತೀವ್ರತೆ ಆಧಾರದ ಮೇಲೆ ಭಿನ್ನ ವಿಭಿನ್ನವಾಗಿರುತ್ತದೆ. ಆರಂಭಿಕ ಹಂತದಲ್ಲಿ ವ್ಯಕ್ತಿಯಲ್ಲಿ ಇದರ ಯಾವುದೇ ಲಕ್ಷಣ ಮತ್ತು ಚಿಹ್ನೆಗಳು ಕಂಡುಬರುವುದಿಲ್ಲ. ಆದರೆ, ಫ್ಲ್ಯೂನಂಥ ರೋಗದ ಸೋಂಕಿನ ಹಲವಾರು ವಾರಗಳ ಬಳಿಕ ಲಕ್ಷಣಗಳು ಸಾಮಾನ್ಯವಾಗಿ ಕಂಡುಬರುತ್ತದೆ. ಜ್ವರ, ತೂಕ ಇಳಿಕೆ, ತಲೆನೋವು, ಗಂಟಲು ಹುಣ್ಣು, ಲಂಫ್ ಗಂತಿಯ ಊತ (ಇದು ಹೆಚ್‍ಐವಿ ಸೋಂಕಿನ ಮೊದಲ ಲಕ್ಷಣಗಳಲ್ಲಿ ಒಂದು) ಈ ರೀತಿಯ ಗುಣಲಕ್ಷಣಗಳ ಚಿಹ್ನೆಗಳು ಗೋಚರಿಸುತ್ತವೆ. ಅತಿಸಾರ ಮತ್ತು ದದ್ದು ಸಹ ಇತರೆ ಸಾಮಾನ್ಯ ರೋಗಗಳಚಿತೆ ಕಂಡುಬರುತ್ತವೆ. ಹೆಚ್‍ಐವಿಯ ಕೊನೆ ಹಂತದಲ್ಲಿ ಈ ಕೆಳಕಂಡ ಗಂಭೀರ ಸ್ವರೂಪದ ಚಿಹ್ನೆ ಮತ್ತು ಲಕ್ಷಣಗಳು ಗೋಚರಿಸುತ್ತವೆ. ಅವುಗಳೆಂದರೆ : ನ್ಯೂಮೋನಿಯಾ, ಮುಂದುವರೆದ, ವಿವರಿಸಲಾಗದ ಖಿನ್ನತೆ, ರಾತ್ರಿ ವೇಳೆ ಧಾರಾಕಾರ ಬೆವರು, ಹಲವು ವಾರಗಳ ಕಾಲ ಚಳಿ ಜ್ವರ ಅಥವಾ 100 ಡಿಗ್ರಿ ಫ್ಯಾರೆನ್‍ಹೀಟ್‍ಗಿಂತ ಅಧಿಕ ತಾಪಮಾನದ ಜ್ವರ, ದೀರ್ಘಕಾಲ ಅತಿಸಾರ, ನಿರಂತರ ತಲೆನೋವು. ಹೆಚ್‍ಐವಿ ಪಾಸಿಟೀವ್ ಇರುವ ಮಕ್ಕಳಲ್ಲಿ ತೂಕ ವೃದ್ಧಿ ವಿಫಲವಾಗಿರುತ್ತದೆ ಮತ್ತು ಸಾಮಾನ್ಯ ಬೆಳವಣಿಗೆ ಕುಂಠಿತವಾಗಿರುತ್ತದೆ. ರೋಗ ಮುಂದುವರೆದಂತೆ ನಡೆದಾಡಲು ಕಷ್ಟವಾಗುತ್ತದೆ. ಮಾನಸಿಕ ಬೆಳವಣಿಕೆ ವಿಳಂಬವಾಗುತ್ತದೆ. ಕಿವಿ ಸೋಂಕು, ನ್ಯೂಮೋನಿಯಾ ಮತ್ತು ದಢಾರ ಇತ್ಯಾದಿಯಂಥ ಬಾಲ್ಯದ ರೋಗಗಳು ಕಾಣಿಸಿಕೊಳ್ಳುತ್ತವೆ.

ವೈರಸ್ ಹರಡುವಿಕೆ:

aids_620x350_81491977376

ಒಮ್ಮೆ ಹೆಚ್‍ಐವಿ ವೈರಸ್ ದೇಹವನ್ನು ಹೊಕ್ಕರೆ ಅದರ ಮುಖ್ಯ ಗುರಿ ಶರೀರದ ರೋಗ ನಿರೋಧಕ ವ್ಯವಸ್ಥೆಯನ್ನು ಕುಂಠಿತಗೊಳಿಸುತ್ತದೆ. ವೈರಾಣುಗಳು ದ್ವಿಗುಣಗೊಳ್ಳುತ್ತಾ ಸಿಡಿ 4 ಲಿಂಫೋಸೈಟ್ಸ್ ರೋಗ ಪ್ರತಿರೋಧಕ ವ್ಯವಸ್ಥೆಯಾದ ಹೆಲ್ಫರ್ ಟಿ ಕೋಶಗಳನ್ನು ನಾಶಗೊಳಿಸುತ್ತದೆ. ಈ ವೈರಸ್‍ಗಳು ದೇಹದ ಪ್ರತಿರೋಧಕ ಶಕ್ತಿಯನ್ನು ದುರ್ಬಲಗೊಳಿಸಲು ದೊಡ್ಡಮಟ್ಟದ ಆಕ್ರಮಣ ನಡೆಸುತ್ತವೆ. ವೈರಾಣು ಕೋಶಗಳಿಗೆ ಅಂಟಿಕೊಂಡು ಅದರೊಳಗೆ ನುಗ್ಗುತ್ತವೆ ಹಾಗೂ ಸಿಡಿ 4 ಲಿಂಫೋಸೈಟ್ಸ್ ರೋಗ ಪ್ರತಿರೋಧಕ ವ್ಯವಸ್ಥೆಗೆ ತನ್ನದೇ ಆದ ಹಾನಿಕಾರಕ ಜೈವಿಕ ವಸ್ತುಗಳನ್ನು ಸೇರಿಸಿ ಅದರ ಪ್ರತಿಗಳು ವೃದ್ಧಿಯಾಗಲು ಈ ವಸ್ತುವನ್ನು ಬಳಸುತ್ತದೆ. ಲಿಪೊಸೈ ಈ ಪ್ರಕ್ರಿಯೆಯಲ್ಲಿ 10 ಶತಕೋಟಿ ಹೊಸ ಹೆಚ್‍ಐವಿ ಕಣಗಳು ಪ್ರತಿದಿನ ಉತ್ಪತ್ತಿಯಾಗುತ್ತದೆ. ಈ ಬೃಹತ್ ಮೊತ್ತದ ವೈರಾಣು ಸಂಖ್ಯೆಯನ್ನು ಮಟ್ಟ ಹಾಕಲು ನಮ್ಮ ರೋಗ ಪ್ರತಿರೋಧಕ ವ್ಯವಸ್ಥೆಯು ಪ್ರತಿ ದಿನ 2 ಶತಕೋಟಿ ಹೊಸ ಸಿಡಿ4 ಕೋಶಗಳನ್ನು ಬಲಿ ಕೊಡುತ್ತದೆ. ಈ ಹೋರಾಟದಲ್ಲಿ ವೈರಾಣುಗಳು ಜಯ ಸಾಧಿಸುತ್ತವೆ. ನಮ್ಮ ದೇಹದಲ್ಲಿನ ಸಿಡಿ 4 ಕೋಶಗಳು ಕಾಲಕ್ರಮೇಣ ನಶಿಸುತ್ತವೆ. ಇದರಿಂದ ರೋಗ ಪ್ರತಿರೋಧಕ ಶಕ್ತಿಯ ತೀವ್ರ ಕೊರತೆ ಉಂಟಾಗಿ ವೈರಾಣುಗಳು ತನ್ನ ಮಾರಕ ಆಕ್ರಮಣವನ್ನು ಮುಂದುವರೆಸುತ್ತವೆ.

ಹೆಚ್‍ಐವಿ ಹರಡುವಿಕೆ: 

ಸೋಂಕು ಇರುವ ಸಂಗಾತಿ ಜೊತೆ ಲೈಂಗಿಕ ಕ್ರಿಯೆ ನಡೆಸುವ ಮಂದಿಯಲ್ಲಿ ಇದು ಹರಡುತ್ತದೆ. ಈಗಾಗಲೇ ಯಾವುದೇ ವ್ಯಕ್ತಿ ಬೇರೆ ಲೈಂಗಿಕವಾಗಿ ಹರಡುವ ರೋಗವನ್ನು ಹೊಂದಿದ್ದರೆ, ಆತ/ಆಕೆಗೆ ಹೆಚ್‍ಐವಿ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸೋಂಕು ರಕ್ತದ ಮೂಲಕ ಹರಡುವಿಕೆ: ಕೆಲವು ಪ್ರಕರಣಗಳಲ್ಲಿ ರಕ್ತದ ಮೂಲಕ ವೈರಾಣುಗಳು ಹರಡುತ್ತವೆ. ರಕ್ತ ಪರಿಚಲನೆಯಲ್ಲಿ ಇಡೀ ರಕ್ತ, ಪ್ಯಾಕ್ ಮಾಡಿದ ರಕ್ತ ಕೋಶಗಳು, ತಾಜಾ ಶೈಥೀಕರಿಸಿದ ಪ್ಲಾಸ್ಮಾ ಹಾಗೂ ರಕ್ತ ಕಣಗಳು ಸೇರಿದಂತೆ ರಕ್ತ ಉತ್ಪನ್ನಗಳಿಂದ ಸೋಂಕು ಹಬ್ಬುತ್ತವೆ.

ಬಳಸಿದ ಸೂಜಿ ಮೂಲಕ ಹರಡುವಿಕೆ :

ಸೋಂಕು ರಕ್ತದೊಂದಿಗೆ ಕಲುಷಿತಗೊಂಡ ಶುಚಿತ್ವವಿಲ್ಲದ ಸೂಜಿಗಳು, ದಂತ ಮತ್ತು ಶಸ್ತ್ರಕ್ರಿಯೆ ಉಪಕರಣಗಳ ಮೂಲಕ ಹೆಚ್‍ಐವಿ ಸುಲಭವಾಗಿ ಹರಡುತ್ತದೆ. ತಾಯಿಯಿಂದ ಮಗುವಿಗೆ : ಪ್ರತಿ ವರ್ಷ ಸುಮಾರು 7,00,000 ಶಿಶುಗಳು ತಾಯಿಯ ಗರ್ಭಧಾರಣೆ ಸಂದರ್ಭದಲ್ಲಿ ಅಥವಾ ಸ್ತನಪಾನದ ಮೂಲಕ ಹೆಚ್‍ಐವಿ ಸೋಂಕಿಗೆ ಒಳಗಾಗುತ್ತವೆ.

China-s-condom-policies-to-prevent-HIV-fail-to-protect-sex-workers-research

ಈ ಕೆಳಕಂಡ ಸಂಪರ್ಕಗಳ ಮೂಲಕ ಬರುವುದಿಲ್ಲ :

ರೋಗಿಯಿಂದ ಹೆಚ್‍ಐವಿ ಸೋಂಕು ಉಂಟಾಗದು, ಆಲಿಂಗನ, ನೃತ್ಯ ಅಥವಾ ಹಸ್ತ ಲಾಘವ. ಬೆವರು ಅಥವಾ ಕಣ್ಣೀರಿನೊಂದಿಗಿನ ಸಂಪರ್ಕ. ಆಹಾರ, ಪಾತ್ರೆಗಳು, ಟವಲ್‍ಗಳು ಅಥವಾ ಹಾಸಿಗೆ, ಈಜುಕೊಳ, ಫೋನ್ ಅಥವಾ ಶೌಚಾಲಯ. ತಿಗಣೆಗಳು ಅಥವಾ ಸೊಳ್ಳೆಗಳು ಕಚ್ಚುವುದರಿಂದ ಏಡ್ಸ್ ರೋಗಿಗೆ ಚುಂಬಿಸುವುದ ರಿಂದ. ಆದಾಗ್ಯೂ ಹೆಚ್‍ಐವಿ ಕೆಲವೊಮ್ಮೆ ಎಂಜಲಿನಲ್ಲಿ ಕಂಡುಬಂದರೂ, ಇದರ ತೀವ್ರತೆ ತುಂಬಾ ಕಡಿಮೆ ಇರುತ್ತದೆ. ಇದರೊಂದಿಗೆ, ಎಂಜಲು ಅಥವಾ ಸಲೈವಾದಲ್ಲಿರುವ ನೈಸರ್ಗಿಕ ವಸ್ತುಗಳು ವೈರಾಣು ಹರಡುವುದನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ರೋಗ ನಿರ್ಧಾರ:

ಹೆಚ್‍ಐವಿ ಸೋಂಕನ್ನು ಸಾಮಾನ್ಯವಾಗಿ ಎಂಜೈಮ್-ಲಿಂಠಿಡಿ ಇಮ್ಯೂನೋ ಸೊರ್‍ಬೆಂಟ್ ಆಸ್ಸೆ (ಇಎಲ್‍ಐಎಸ್‍ಎ-ಎಲಿಸಾ) ಪರೀಕ್ಷೆ ಮೂಲಕ ನಿರ್ಧರಿಸಲಾಗುತ್ತದೆ. ವೈರಸ್ ಇರುವುದನ್ನು ತಿಳಿದುಕೊಳ್ಳಲು ವೆಸ್ಟರ್ನ್ ಬ್ಲಾಟ್ ಟೆಸ್ಟ್ ಎಂಬ ಪರೀಕ್ಷೆ ಮಾಡಲಾಗುತ್ತದೆ. ಈ ಟೆಸ್ಟ್ ಸ್ಯಾಂಪಲ್‍ಗಳಿಗಾಗಿ ರಕ್ತ, ಮೂತ್ರ, ಎಂಜಲು ಅಥವಾ ಬುಕಲ್ ಸ್ವಾಬ್ ಮಾದರಿಗಳನ್ನು ಪಡೆಯಲಾಗುತ್ತದೆ. ಈ ಸಿಡಿ 4 ಕೋಶವು ಕ್ಷಟಿಂಗ್ ಮಾಡುವುದರಿಂದ ಹೆಚ್‍ಐವಿ ಸೋಂಕು ದೃಢಪಡುತ್ತದೆ.

ತಡೆಗಟ್ಟುವಿಕೆ :

ಹೆಚ್‍ಐವಿ ಸೋಂಕು ತಡೆಗಟ್ಟಲು ಯಾವುದೇ ಲಸಿಕೆ ಇಲ್ಲ ಹಾಗೂ ಏಡ್ಸ್ ಗುಣಪಡಿಸಲಾಗುದು. ಆದರೆ ನಮಗೆ ನಾವೇ ಈ ಮಾರಕ ಸೋಂಕಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ. ರಕ್ತ, ವೀರ್ಯ ಅಥವಾ ಯೋನಿ ಸ್ರಾವ, ಎದೆ ಹಾಲು ಇತ್ಯಾದಿಗಳಿಂದ ಸೋಂಕುಗಳಿಗೆ ಒಳಗಾಗುವುದನ್ನು ತಪ್ಪಿಸುವ ಮೂಲಕ ಹಾಗೂ ಹೆಚ್‍ಐವಿ/ಏಡ್ಸ್ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಮೂಲಕ ಈ ಹೆಮ್ಮಾರಿಯನ್ನು ತಡೆಗಟ್ಟಬಹುದಾಗಿದೆ.

Facebook Comments

Sri Raghav

Admin