ಗುಜರಾತ್ ಫಲಿತಾಂಶದ ನಂತರ ಕರ್ನಾಟಕದಲ್ಲಿ ಜೋರಾಗಿರಲಿದೆ ‘ಜಂಪಿಂಗ್ ರಾಜಕೀಯ’..!

ಈ ಸುದ್ದಿಯನ್ನು ಶೇರ್ ಮಾಡಿ

Politics-Parties

ಬೆಂಗಳೂರು,ಡಿ.2- ರಾಷ್ಟ್ರದ ಗಮನಸೆಳೆದಿರುವ ಗುಜರಾತ್ ವಿಧಾನಸಭೆ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಪ್ರಾರಂಭವಾಗುವ ಲಕ್ಷಣಗಳು ಗೋಚರಿಸಿವೆ. ಬೇಲಿ ಹಾರಲು ಸಿದ್ದರಿರುವ ಪ್ರಮುಖ ಪಕ್ಷಗಳ ನೇತಾರರು ಗುಜರಾತ್ ಫಲಿತಾಂಶದ ನಂತರ ತಮ್ಮ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳಲು ಮುಂದಾಗಿದ್ದಾರೆ.

ಆಡಳಿತಾರೂಢ ಕಾಂಗ್ರೆಸ್‍ಗೆ ಸೇರ್ಪಡೆಯಾಗಬೇಕೇ. ಇಲ್ಲವೆ ಬಿಜೆಪಿಗೆ ಹೋಗಬೇಕೆ ಅಥವಾ ಎರಡೂ ಪಕ್ಷಗಳನ್ನು ಬಿಟ್ಟು ಪ್ರಾದೇಶಿಕ ಪಕ್ಷ ಜೆಡಿಎಸ್‍ನಲ್ಲಿ ರಾಜಕೀಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆ ಎಂಬುದರ ಬಗ್ಗೆ ಒಳ ಲೆಕ್ಕಾಚಾರಗಳು ನಡೆಯುತ್ತಿದ್ದು ಶೀಘ್ರ ಇದರ ಸ್ಪಷ್ಟ ಚಿತ್ರಣ ಸಿಗಲಿದೆ. ಈಗಾಗಲೇ ಪರಿವರ್ತನಾ ರ್ಯಾಲಿ ಆರಂಭಿಸಿರುವ ಬಿಜೆಪಿ ಸಾದ್ಯವಾದ ಕಡೆಯಲೆಲ್ಲ ಆಪರೇಷನ್ ಕಮಲಕ್ಕೆ ಕೈ ಹಾಕಿದೆ. ಪರಿವರ್ತನಾ ರಥ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೆಲ ನಾಯಕರನ್ನು ಭೇಟಿ ಮಾಡಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ.  ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಬಿಜೆಪಿಗೆ ಸೆಡ್ಡು ಹೊಡೆಯುವಂತೆ ಕಾಂಗ್ರೆಸ್‍ನತ್ತ ಕೆಲವು ನಾಯಕರನ್ನು ಸೆಳೆಯಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.

ಎರಡು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದಿರುವ ಜೆಡಿಎಸ್ ಕೂಡ ತನ್ನ ಪಕ್ಷಕ್ಕೆ ಅನ್ಯ ಪಕ್ಷಗಳ ಮುಖಂಡರನ್ನು ಸೆಳೆಯುವಲ್ಲಿ ಹಿಂದೆ ಬಿದ್ದಿಲ್ಲ. ಕುಮಾರ ಪರ್ವ ಆರಂಭಿಸಿರುವ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪಕ್ಷ ಸಂಘಟನೆ ಹಿನ್ನಡೆ ಇರುವ ಕಡೆ ಕೆಲವು ಪ್ರಭಾವಿ ಮುಖಂಡರನ್ನು ಪಕ್ಷಕ್ಕೆ ಆಹ್ವಾನಿಸುತ್ತಿದ್ದಾರೆ.
ಹೀಗೆ ಮೂರು ಪಕ್ಷಗಳು ಏಕಕಾಲದಲ್ಲಿ ತಮ್ಮ ತಮ್ಮ ಪಕ್ಷಕ್ಕೆ ಮುಖಂಡರನ್ನು ಗಾಳ ಹಾಕುತ್ತಿರುವುದರಿಂದ ಯಾರ ಚಿತ್ತ ಯಾರ ಕಡೆ ಎಂಬುದು ಗುಜರಾತ್‍ನ ಫಲಿತಾಂಶದ ನಂತರವೇ ಸ್ಪಷ್ಟವಾಗಲಿದೆ.

18ರತ್ತ ಎಲ್ಲರ ಚಿತ್ತ:

ಇದೇ 18ರಂದು ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದೆ. ರಾಜಕೀಯ ವಲಯದಲ್ಲಿ ಹೈವೋಲ್ಟೇಜ್ ಎಂದೇ ಬಿಂಬಿತವಾಗಿರುವ ಪ್ರಧಾನಿ ನರೇಂದ್ರ ಮೋದಿ ತವರೂರು ಗುಜರಾತ್ ಚುನಾವಣೆಯ ಫಲಿತಾಂಶವನ್ನು ದೇಶದ ಜನತೆ ಚಾತಕಪಕ್ಷಿಯಂತೆ ಎದುರು ನೋಡುತ್ತಿದ್ದಾರೆ.  ನಾಲ್ಕು ಅವಧಿಗೆ ಆಡಳಿತ ನಡೆಸಿರುವ ಬಿಜೆಪಿ ಈ ಬಾರಿ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ಮತ್ತೊಮ್ಮೆ ಕಮಲವನ್ನು ಅರಳಿಸಿದರೆ ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ತುಸು ಹಿನ್ನಡೆಯಾಗುವುದು ಬಹುತೇಕ ಖಚಿತ.

ಏಕೆಂದರೆ ಗುಜರಾತ್ ಗೆದ್ದರೆ ಮೋದಿ ಅಲೆಯಿಂದಲೇ ಎಂಬುದು ಸಾಬೀತಾಗುತ್ತದೆ. ಹೀಗಾಗಿ ಪಕ್ಷ ಸೇರ್ಪಡೆಯಾಗಲು ತುದಿಗಾಲಲ್ಲಿ ನಿಂತಿರುವ ಅನೇಕರು ಅನಿವಾರ್ಯ ಕಾರಣಗಳಿಂದ ಬಿಜೆಪಿಗೆ ಸೇರಬಹುದು.  ಒಂದು ವೇಳೆ ಎಲ್ಲರ ನಿರೀಕ್ಷೆಗಳನ್ನು ತಲೆ ಕೆಳಗೆ ಮಾಡಿ ಕಾಂಗ್ರೆಸ್ ಗೆದ್ದರೆ ನಿಸ್ಸಂದೇಹವಾಗಿ ಕರ್ನಾಟಕದಲ್ಲೂ ಬಿಜೆಪಿ ಸ್ಥಿತಿ ಅಯೋಮಯವಾಗಲಿದೆ. ಬೇರೆ ಪಕ್ಷದವರು ಬರುವುದಿರಲಿ ಇರುವವರನ್ನೇ ಉಳಿಸಿಕೊಳ್ಳವುದು ಕಮಲ ನಾಯಕರಿಗೆ ಎದುರಾಗುವ ಬಹುದೊಡ್ಡ ಸಮಸ್ಯೆ ಇದಾಗಲಿದೆ.

ಬೇರೆ ಬೇರೆ ಪಕ್ಷಗಳಲ್ಲಿ ಮೂಲೆಗುಂಪಾಗಿರುವ ಅನೇಕರು ಗುಜರಾತ್ ಫಲಿತಾಂಶದ ಬಳಿಕ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಬಹಿರಂಗವಾಗಿ ಇಂಥದೇ ಪಕ್ಷ ಸೇರುತ್ತೇನೆ ಎಂದು ಗಟ್ಟಿ ದನಿಯಲ್ಲಿ ಯಾರೊಬ್ಬರು ಸಿದ್ದರಿಲ್ಲ. ಮನಸಿನಲ್ಲಿ ಮಂಡಕ್ಕಿ ಮೇಯುತ್ತಿರುವ ಇವರು ಗುಜರಾತ್ ಫಲಿತಾಂಶ ಹೊರಬೀಳಲಿ ಎಂದು ಲೆಕ್ಕ ಹಾಕುತ್ತಿದ್ದಾರೆ.  ಉತ್ತರ ಕರ್ನಾಟಕದಲ್ಲಿ ಕೆಲವು ನಾಯಕರು ಬಿಜೆಪಿ ಕಡೆ ಒಲವು ತೋರಿದರಾದರೂ ಗುಜರಾತ್ ಫಲಿತಾಂಶವನ್ನೇ ನೆಚ್ಚಿಕೊಂಡಿದ್ದಾರೆ. ಮೋದಿ ಅಲೆಯಲ್ಲಿ ನಾವು ಕೊಚ್ಚಿ ಹೋಗಬಹುದೆಂಬ ಭೀತಿಯಿಂದಾಗಿ ಇಷ್ಟವಿಲ್ಲದಿದ್ದರೂ ಕಮಲ ಮುಡಿಯುವುದು ಅನಿವಾರ್ಯವಾಗಿದೆ.

ಇನ್ನು ಕಾಂಗ್ರೆಸ್‍ನಲ್ಲಿ ಸ್ಥಾನಮಾನಗಳ ಮೇಲೆ ಕಣ್ಣಿಟ್ಟು ವಂಚಿತರಾಗಿರುವವರು ಕೂಡ ಬಿಜೆಪಿ ಹಾಗೂ ಜೆಡಿಎಸ್‍ನತ್ತ ಮುಖ ಮಾಡಿದ್ದಾರೆ. ಯಾರು, ಎಲ್ಲಿ ಹೋಗಲಿದ್ದಾರೆ ಎಂಬುದು 18ರ ನಂತರವೇ ಸ್ಪಷ್ಟವಾಗಲಿದೆ. ಅಲ್ಲಿಯವರೆಗೂ ರಾಜಕೀಯ ಪಡಸಾಲೆಯಲ್ಲಿ ಅಂತೆಕಂತೆಗಳಿಗೆ ಕೊನೆಯಿಲ್ಲ.

Facebook Comments

Sri Raghav

Admin