ಜ.15ರ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದೆ : ಬಿಎಸ್ವೈ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

yadiyurappa--1

ಬಾಗಲಕೋಟೆ,ಡಿ.2-ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಬಿಜೆಪಿ ಸೇರಲು ಕೆಲವರು ಶಾಸಕರು ತುದಿಗಾಲಲ್ಲಿ ನಿಂತಿದ್ದಾರೆ ಅಂಥವರ ಹೆಸರನ್ನು ಜನವರಿ 15ರ ನಂತರ ಬಹಿರಂಗ ಪಡಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಪಕ್ಷಗಳ ಕೆಲ ಮುಖಂಡರು ಪಕ್ಷ ಸೇರಲು ನನ್ನ ಜೊತೆ ಮಾತುಕತೆ ನಡೆಸಿದ್ದಾರೆ. ಕೆಲವು ತಾಂತ್ರಿಕ ಕಾರಣಗಳಿಂದ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿಲ್ಲ. ಜ.15ರ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ಅವರು ಭವಿಷ್ಯ ನುಡಿದರು.

ಯಾರು ಯಾರು ಪಕ್ಷಕ್ಕೆ ಬರಲಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಮೆಚ್ಚಿ ಅನೇಕರು ಪಕ್ಷಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಕೆಲವು ದಿನಗಳವರೆಗೂ ಕಾದು ನೋಡಿ ಎಂದು ಸೂಚ್ಯವಾಗಿ ಹೇಳಿದರು. ನಮ್ಮ ಪಕ್ಷಕ್ಕೆ ಬಂದವರೆಲ್ಲರಿಗೂ ಟಿಕೆಟ್ ನೀಡುವ ಖಾತರಿಯನ್ನು ಕೊಡುವುದಿಲ್ಲ. ಪಕ್ಷದ ನಾಯಕತ್ವ ಹಾಗೂ ಸಿದ್ದಾಂತಗಳನ್ನು ಒಪ್ಪಿಕೊಂಡು ಯಾರೇ ಬಂದರೂ ಅಂಥವರಿಗೆ ಮುಕ್ತ ಸ್ವಾಗತ ನೀಡಲಾಗುವುದು. ನಾಯಕತ್ವಕ್ಕಾಗಿಯೇ ಪಕ್ಷ ಸೇರ್ಪಡೆಯಾಗುವವರಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಎಂ.ಬಿ.ಪಾಟೀಲ್ ಭ್ರಷ್ಟಾಚಾರಿ: ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಒಬ್ಬ ಭ್ರಷ್ಟಾಚಾರಿ. ನೀರಾವರಿ ಇಲಾಖೆಯಲ್ಲಿ ಕೊಳ್ಳೆ ಹೊಡೆಯುತ್ತಿರುವ ಅವರು ನನ್ನ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಿದರೂ ಅದನ್ನು ಕಾನೂನಾತ್ಮಕವಾಗಿಯೇ ಎದುರಿಸುತ್ತೇನೆಂದು ಹೇಳಿದರು. ನೀರಾವರಿ ಇಲಾಖೆಯ ಅನೇಕ ಯೋಜನೆಗಳಲ್ಲಿ ಕಮಿಷನ್ ಏಜೆಂಟ್‍ನಂತೆ ಪಾಟೀಲ್ ಕೆಲಸ ಮಾಡುತ್ತಿದ್ದಾರೆ. ತುಂಡು ಗುತ್ತಿಗೆ ಕಾಮಗಾರಿ, ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಅನೇಕ ಕಾಮಗಾರಿಗಳಲ್ಲಿ ಮುಖ್ಯಮಂತ್ರಿಗಳ ಕಮೀಷನ್ ಏಜೆಂಟ್‍ನಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ನನ್ನ ವಿರುದ್ದ ಎಂ.ಬಿ.ಪಾಟೀಲ್ ಮಾನನಷ್ಟ ಮೊಕದ್ದಮೆ ಹೂಡಿದರೆ ಅದರನ್ನು ಎದುರಿಸಲು ಸಿದ್ದನಿದ್ದೇನೆ. ಇಂಥ ಪಾಟೀಲ್‍ಗಳನ್ನು ನಾನು ಸಾಕಷ್ಟು ನೋಡಿದ್ದೇನೆ. ಇವರ ಗೊಡ್ಡು ಬೆದರಿಕೆಗಳಿಗೆ ಯಡಿಯೂರಪ್ಪ ಜಗ್ಗುವ ಅಸಾಮಿಯಲ್ಲ ಎಂದು ಗುಡುಗಿದರು. ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ಸಂಪೂರ್ಣವಾಗಿ ವಿಫಲವಾಗಿದೆ. ಕಮಿಷನ್ ಬರುವ ಕಾಮಗಾರಿಗಳನ್ನು ತ್ವರಿತವಾಗಿ ಮಾಡಿ ಹಣ ಲೂಟಿ ಮಾಡುವ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇಂಥ ಭ್ರಷ್ಟರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಹರಿಹಾಯ್ದರು.

Facebook Comments

Sri Raghav

Admin