ಪ್ರಯಾಣಿಕರು ಮತ್ತು ಬಿಎಂಟಿಸಿ ಸಿಬ್ಬಂದಿಗಳಿಗಾಗಿ ‘ಇಂದಿರಾ ಕ್ಲೀನಿಕ್’ ಭಾಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

Clinik--01

ಬೆಂಗಳೂರು, ಡಿ.2- ಪ್ರಯಾಣಿಕರು, ಸಾರ್ವಜನಿಕರು ಹಾಗೂ ಬಿಎಂಟಿಸಿ ಸಿಬ್ಬಂದಿಗಳಿಗೆ ತುರ್ತು ಸಂದರ್ಭಗಳಲ್ಲಿ ಉಚಿತವಾಗಿ ಪ್ರಾಥಮಿಕ ಚಿಕಿತ್ಸೆ ನೀಡುವ ಸಲುವಾಗಿ ಇಂದಿರಾ ಟ್ರಾನ್ಸಿಟ್ ಕ್ಲೀನಿಕ್ ಪ್ರಾರಂಭಿಸಲಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಇಂದಿಲ್ಲಿ ತಿಳಿಸಿದರು. ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ತೆರೆಯಲಾಗಿರುವ ಬಿಎಂಟಿಸಿಯ ಮಹತ್ವಾಕಾಂಕ್ಷಿಯ ಯೋಜನೆಯಾದ ಇಂದಿರಾ ಕ್ಲೀನಿಕ್ ಹಾಗೂ ನೂತನ ಬಸ್‍ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರದಾದ್ಯಂತ ಸುಮಾರು 52 ಲಕ್ಷ ಜನರು ಬಿಎಂಟಿಸಿ ಬಸ್‍ಗಳನ್ನು ಬಳಸುತ್ತಿದ್ದು, ಪ್ರತಿ ದಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ 8ಲಕ್ಷಕ್ಕೂ ಹೆಚ್ಚು ಮಂದಿ ಬಂದು ಹೋಗುತ್ತಾರೆ. ಈ ನಿಟ್ಟಿನಲ್ಲಿ ತುರ್ತು ಸಂದರ್ಭಗಳಲ್ಲಿ ಅವರಿಗೆ ಉಚಿತ ಪ್ರಾಥಮಿಕ ಚಿಕಿತ್ಸೆ ಒದಗಿಸಲು ಈ ಕ್ಲೀನಿಕ್ ಕಾರ್ಯ ನಿರ್ವಹಿಸಲಿದೆ. ಇದರಲ್ಲಿ ಒಬ್ಬ ವೈದ್ಯ, ಒಬ್ಬ ನರ್ಸ್, ಒಬ್ಬರು ಫಾರ್ಮಸೀಸ್ ಕೆಲಸ ನಿರ್ವಹಿಸಲಿದ್ದು, ವಾರದ 7 ದಿನಗಳೂ ಕ್ಲೀನಿಕ್ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ತೆರೆದಿರುತ್ತದೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಒಂದು ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗಿದ್ದು, ಸದ್ಯದಲ್ಲೇ ಯಶವಂತಪುರ ಬಸ್ ನಿಲ್ದಾಣದಲ್ಲೂ ಕ್ಲೀನಿಕ್ ತೆರೆಯಲಾಗುವುದು. ಅಲ್ಲದೆ, ಇತರೆ ಬಸ್ ನಿಲ್ದಾಣಗಳಲ್ಲೂ ಕ್ಲೀನಿಕ್ ತೆರೆಯಲಾಗುವುದು ಎಂದು ವಿವರಿಸಿದರು. ಪಿಎಸ್-4 ಮಾದರಿಯ 70 ಪರಿಸರ ಸ್ನೇಹಿ ಬಸ್‍ಗಳಿಗೆ ಚಾಲನೆ ನೀಡಲಾಗಿದ್ದು, ಈ ಬಸ್‍ಗಳಲ್ಲಿ ಎರಡು ತುರ್ತು ನಿರ್ಗಮನ ದ್ವಾರಗಳನ್ನು ಒದಗಿಸಲಾಗಿದೆ. ವಾಹನದ ಹಿಂಭಾಗದಲ್ಲಿ ಈ ದ್ವಾರಗಳಿಂದ್ದು, ಪ್ರಯಾಣಿಕರಿಗೆ ಅದರಲ್ಲೂ ಅಂಗವಿಕಲರು ತಮ್ಮ ಕುರ್ಚಿಯೊಂದಿಗೆ ಬಸ್‍ನಲ್ಲಿ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗಿದೆ. ಎಲೆಕ್ಟ್ರಾನಿಕ್ ವ್ಯವಸ್ಥೆಯಡಿ ಎಂಜಿನ್ ಹಾಗೂ ಬ್ರೇಕ್‍ಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.

ಪರಿಸರ ಮಾಲಿನ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಪ್ರತಿ ತಿಂಗಳು ಲೆಸ್ ಟ್ರಾಫಿಕ್ ಡೇ ಆಚರಿಸಲು ನಿರ್ಧರಿಸಿದ್ದೇವೆ ಎಂದ ಅವರು, ಬಿಡದಿ ದೇವನಹಳ್ಳಿ, ನಾಗದಾಸನಹಳ್ಳಿ, ಕಾವಲುಹೊಸಹಳ್ಳಿಗಳಲ್ಲಿ ಮೂರು ಹೊಸ ಘಟಕಗಳನ್ನು ಪ್ರಾರಂಭಿಸಲಾಗುವುದು. ಚಲ್ಲಘಟ್ಟ, ದಾಸನಪುರಗಳಲ್ಲಿ ಹೊಸ ಕೇಂದ್ರೀಯಾ ಕಾರ್ಯಗಾರ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

3.50 ಕೋಟಿ ರೂ.ಗಳಲ್ಲಿ ಬಸ್ ಘಟಕ, 7.25ಕೋಟಿ ರೂ. ವೆಚ್ಚದಲ್ಲಿ ಐದು ಬಸ್ ಶೆಲ್ಟರ್‍ಗಳು ಹಾಗೂ 16 ಕೋಟಿ ರೂ. ವೆಚ್ಚದಲ್ಲಿ ಮೂರು ಸಿಬ್ಬಂದಿ ವಸತಿ ಸಮುಚ್ಚಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಕೆ.ಆರ್.ರಮೇಶ್‍ಕುಮಾರ್, ಶಾಸಕ ದಿನೇಶ್‍ಗುಂಡೂರಾವ್, ಬಿಎಂಟಿಸಿ ಅಧ್ಯಕ್ಷ ನಾಗರಾಜ್‍ಯಾದವ್, ಉಪಾಧ್ಯಕ್ಷ ಗೊಂವಿದರಾಜ್, ವ್ಯವಸ್ಥಾಪಕ ನಿರ್ದೇಶಕ ಪೊನ್ನುರಾಜ್ ಮತ್ತಿತರರು ಉಪಸ್ಥಿತಿರದ್ದರು.

Facebook Comments

Sri Raghav

Admin