ಬಿಜೆಪಿ ಅಧಿಕಾರಕ್ಕೆ ಬಂದರೆ ಒಂದೇ ತಿಂಗಳಲ್ಲಿ ದತ್ತಪೀಠ ವಿವಾದ ಬಗೆಹರಿಸುತ್ತೇವೆ : ಸಿ.ಟಿ.ರವಿ

ಈ ಸುದ್ದಿಯನ್ನು ಶೇರ್ ಮಾಡಿ

C-T-Ravi--02

ಚಿಕ್ಕಮಗಳೂರು, ಡಿ.2- ಈ ಬಾರಿ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಅಧಿಕಾರಕ್ಕೆ ಬಂದರೆ ನಾವು ಒಂದೇ ತಿಂಗಳಲ್ಲಿ ದತ್ತಪೀಠವನ್ನು ಹಿಂದುಗಳಿಗೂ, ಬಾಬಬುಡನ್‍ಗಿರಿ ದರ್ಗಾವನ್ನು ಮುಸ್ಲಿಂರಿಗೆ ಬಿಟ್ಟುಕೊಟ್ಟು ದತ್ತ ಜಯಂತಿ ಹಾಗೂ ಉರುಸ್ ಯಶಸ್ವಿಯಾಗಿ ಮಾಡುತ್ತೇವೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು. ದತ್ತ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದತ್ತಪೀಠ ವಿವಾಧವನ್ನು ಶೀಘ್ರ ಬಗೆಹರಿಸಿ ಭಕ್ತರಿಗೆ ನ್ಯಾಯ ಒದಗಿಸಿಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಜರಾಯಿ ಸಚಿವರು, ಸಚಿವಸಂಪುಟ ಉಪಸಮಿತಿಯ ಐವರು ಸದಸ್ಯರನ್ನು ಭೇಟಿ ಮಾಡಿ ಮನವಿ ಮಾಡಿದ್ದೆ. ಆದರೆ ಏನೂ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದತ್ತ ಭಕ್ತರಿಗೆ ಮೋಸ, ಅನ್ಯಾಯ ಮಾಡಬೇಡಿ. ಸರ್ಕಾರಿ ದಾಖಲೆಗಳ ಪ್ರಕಾರವೇ ನಿರ್ಣಯ ತೆಗೆದುಕೊಳ್ಳಿ. ಅವೇ ಸತ್ಯ ಹೇಳುತ್ತವೆ. ಅದರಂತೆ ದತ್ತ ಭಕ್ತರಿಗೆ ಒಳಿತು ಮಾಡಿ ಎಂದು ಮನವಿ ಮಾಡಿದರು.  ಹಿಂದೆ ಖುದ್ದು ಮಹಾರಾಜರೇ ದತ್ತಜಯಂತಿಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಈಗ ನಾಡಿನ ಮುಖ್ಯಮಂತ್ರಿಯಾಗಿ ನೀವೇ ದತ್ತ ಜಯಂತಿಯನ್ನು ನಡೆಸಿಕೊಡಬೇಕಿತ್ತು. ಯಾವುದೇ ಅನುಮಾನ ಬಾರದಂತೆ ನಡೆದುಕೊಳ್ಳಿ ಎಂದು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಹಿಂದೂ-ಮುಸ್ಲಿಂರಿಬ್ಬರಿಗೂ ಒಳಿತಾಗುವಂತೆ ಮಾಡುತ್ತೇವೆ. ದತ್ತಪೀಠ ಹಾಗೂ ದರ್ಗಾದಲ್ಲಿ ಎಲ್ಲಾ ಸೌಲಭ್ಯ ಒದಗಿಸಿಕೊಟ್ಟು ಎರಡೂ ಧರ್ಮಿಯರಿಗೂ ಒಳಿತಾಗುವಂತೆ ಮಾಡುತ್ತೇವೆ ಎಂದು ತಿಳಿಸಿದರು. ದತ್ತ ಜಯಂತಿ ಪ್ರಯುಕ್ತ ದೇಶದ ವಿವಿಧೆಡೆಗಳಿಂದ ಸಾವಿರಾರು ಮಂದಿ ದತ್ತಾ ಮಾಲಾಧಾರಿಗಳು ಬಂದಿದ್ದಾರೆ. ಇಲ್ಲಿನ ಜಿಲ್ಲಾಡಳಿತ ಎಲ್ಲಾ ಸೌಲಭ್ಯ ಒದಗಿಸಿಕೊಟ್ಟು ಸಹಕಾರ ನೀಡಿದೆ ಎಂದು ಇದೇ ವೇಳೆ ಸಿ.ಟಿ.ರವಿ ಹೇಳಿದರು. ದೂರದೂರಿನಿಂದ ಹೆಚ್ಚು ಭಕ್ತರು ಬಂದಿದ್ದರಿಂದ ಸ್ವಲ್ಪ ಅಡೆತಡೆಗಳಾಗಿವೆ. ಹೆಚ್ಚು ಬಸ್‍ಗಳನ್ನು ಬಿಟ್ಟಿದ್ದಾರೆ. ಎರಡೂ ಕಡೆ ಬಸ್ ಬಿಟ್ಟಿದ್ದರಿಂದ ಟ್ರಾಫಿಕ್‍ಜಾಮ್ ಆಗಿದೆ. ಇದನ್ನು ಸರಿಪಡಿಸುವಂತೆ ಹಾಗೂ ಒಂದೇ ಕಡೆ ಬಸ್ ಬಿಡುವಂತೆ ಅಧಿಕಾರಿಗಳೊಂದಿಗೆ ಮಾತನಾಡಿ ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದರು.

Facebook Comments

Sri Raghav

Admin