ದತ್ತಮಾಲ ಅಭಿಯಾನಕ್ಕೆ ತೆರೆ

ಈ ಸುದ್ದಿಯನ್ನು ಶೇರ್ ಮಾಡಿ

Dattamala--01

ಚಿಕ್ಕಮಗಳೂರು, ಡಿ.3- ದತ್ತ ಜಯಂತಿ ಅಂಗವಾಗಿ ವಿಶ್ವಹಿಂದು ಪರಿಷತ್, ಭಜರಂಗ ದಳ ಹಮ್ಮಿಕೊಂಡಿದ್ದ ದತ್ತಮಾಲ ಅಭಿಯಾನ ಇಂದು ದತ್ತ ಪೀಠದಲ್ಲಿ ದತ್ತಾತ್ರೇಯ ಪಾದುಕೆಗಳ ದರ್ಶನದೊಂದಿಗೆ ತೆರೆಕಂಡಿತು.  ನ.23ರಿಂದ ಆರಂಭಗೊಂಡಿದ್ದ ದತ್ತ ಮಾಲ ಅಭಿಮಾಯಾನದಲ್ಲಿ ಸಾವಿರಾರು ಭಕ್ತರು ಹೊನ್ನಮ್ಮನ ಹಳ್ಳಕ್ಕೆ ತೆರಳಿ ಸ್ನಾನ ಮಾಡಿ ಬರಿಗಾಲಿನಲ್ಲಿ ದತ್ತಪೀಠಕ್ಕೆ ತೆರಳಿ ಪೂಜೆ ಸಲ್ಲಿಸಿ, ದತ್ತ ಗುಹೆ ಪ್ರವೇಶಿಸಿ ದತ್ತ ಪಾದುಕೆ ದರ್ಶನ ಮಾಡಿ ತಾವು ತಂದಿದ್ದ ಪಡಿಯನ್ನು ವಿಸರ್ಜಿಸಿದರು.

ವಿವಾದಿತ ಸ್ಥಳದಿಂದ 100 ಮೀಟರ್ ದೂರದಲ್ಲಿ ಜಿಲ್ಲಾಡಳಿತ ನಿರ್ಮಿಸಿದ್ದ ತಾತ್ಕಾಲಿಕ ಶೆಡ್‍ನಲ್ಲಿ ದತ್ತಾತ್ರೇಯ ವಿಗ್ರಹವನ್ನಿಟ್ಟು ಪೂಜಾ ಕೈಂಕರ್ಯವನ್ನು ನೆರವೇರಿಸಿ ದತ್ತ ಹೋಮ, ಗಣ ಹೋಮ ನೇರವೇರಿಸಲಾಯಿತು.  ರಾಜ್ಯದ ಮಂಗಳೂರು, ಉಡುಪಿ, ಬೆಂಗಳೂರು, ಕೋಲಾರ, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ , ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರಾರು ವಾಹನಗಳಲ್ಲಿ ದತ್ತಪೀಠಕ್ಕೆ ಭಕ್ತುರು ಆಗಮಿಸಿದ್ದರು.  ದಾರಿಯುದ್ದಕ್ಕೂ ದತ್ತತ್ರೇಯ ಮಹಾರಾಜ್ ಕೀ ಜೈ, ಅನುಸೂಯ ದೇವಿಕೂ ಜೈ, ಶ್ರೀರಾಮ್‍ಗೆ ಜೈ ಎಂಬಿತ್ಯಾದಿ ಘೋಷಣೆಗಳನ್ನು ಮಾಲಾಧಾರಿಗಳು ಕೂಗಿದರು.

ಚಿಕ್ಕಮಗಳೂರು ನಗರದ ಮಂದಿರ, ಮಸೀದಿ, ಚರ್ಚ್‍ಗಳಿಗೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿ ಇಂದು ಕೂಡ ನಗರದಲ್ಲಿ ಅಂಗಡಿಗಳನ್ನು ತೆರೆಯದಂತೆ ಪೊಲೀಸರು ಮಾಲೀಕರಿಗೆ ತಾಕೀತು ಮಾಡಿದರು. ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲೂ ಸಹ ಹೋಟೆಲ್ ಅಂಗಡಿಗಳು ತೆರೆಯದಂತೆ ಒತ್ತಾಯದಿಂದ ಅಂಗಡಿಗಳನ್ನು ಮುಚ್ಚಿಸಿದ ಪರಿಣಾಮ ಪ್ರಯಾಣಿಕರಿಗೆ ಆಹಾರ ಸಿಗದೆ ಸಾಕಷ್ಟು ಕಷ್ಟ ಅನುಭವಿಸುವಂತಾಯಿತು.

ಕೈಮರ ಚೆಕ್‍ಪೊೀಸ್ಟ್ ಬಳಿ ಪ್ರತಿಯೊಂದು ವಾಹನವನ್ನು ಪೊಲೀಸರು ಪರಿಶೀಲನೆ ಮಾಡಿ ಬಿಡುತ್ತಿದ್ದರು. ಇದೇ ವೇಳೆ ವಿಶ್ವಹಿಂದು ಪರಿಷತ್ ರಾಜ್ಯ ಸಂಚಾಲಕ ಗೋಪಾಲ್ ಮಾತನಾಡಿ, ದತ್ತ ಪೀಠ ಸಮಸ್ಯೆಯನ್ನು ಬಗೆಹರಿಸಲು ಸಿದ್ದರಾಮಯ್ಯನವರ ಸರ್ಕಾರ ಮೂರು ತಿಂಗಳಲ್ಲಿ ಕ್ರಮ ವಹಿಸಬೇಕು, ದತ್ತಪೀಠ ಆಂದೋಲನವು ಕೇವಲ ದತ್ತಪೀಠಕ್ಕೆ ಸೀಮಿತವಲ್ಲ. ದತ್ತಪೀಠವನ್ನು ಹಿಂದುಗಳಿಗೆ ವಹಿಸಬೇಕು ಎಂದರು.

ಭಜರಂಗ ದಳದ ಸಂಚಾಲಕ ಮಂಜು ಮಾತನಾಡಿ, ದತ್ತಪೀಠ ವಿಚಾರವಾಗಿ 1974ರಲ್ಲಿ ಚಿಕ್ಕಮಗಳೂರು ಜಿಲ್ಲಾ ಕೋರ್ಟ್‍ನಲ್ಲಿ ದಾವೆ ಹೂಡುವ ಮೂಲಕ ದತ್ತ ಪೀಠ ಹೋರಾಟ ಪ್ರಾರಂಭವಾಯಿತು. ರಾಜಕೀಯ ಪಕ್ಷಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ವಿವಾದವು ಇಲ್ಲಿಯವರೆಗೂ ಇತ್ಯರ್ಥವಾಗಿಲ್ಲ ಎಂದು ತಿಳಿಸಿದರು.
ಉಡುಪಿ ಕ್ಷತ್ರೀಯ ಪೀಠದ ವಿಶ್ವಾದಿರಾಜ ತೀರ್ಥರು, ಶಂಕರ ದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಸವ ಮಂದಿರದ ಶ್ರೀ ಜಯಬಸವಾನಂದ ಸ್ವಾಮೀಜಿ, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಶಿವಶಂಕರ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ, ನಗರಸಭೆ ಅಧ್ಯಕ್ಷ ಶಿಲ್ಪಾ ರಾಜಶೇಖರ್, ಜಿಪಂ ಅಧ್ಯಕ್ಷೆ ಚೈತ್ರಾಶ್ರೀ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

Facebook Comments

Sri Raghav

Admin