ಪೊಲೀಸರ ಮೇಲೆ ಮಚ್ಚು ಬೀಸಿದ ರೌಡಿಶೀಟರ್ ಪಳನಿಗೆ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

Firing--01

ಬೆಂಗಳೂರು, ಡಿ.3- ಪೊಲೀಸರ ಮೇಲೆಯೇ ಮಚ್ಚಿನಿಂದ ದಾಳಿ ನಡೆಸಲು ಮುಂದಾದ ರೌಡಿ ಚಟುವಟಿಕೆಯಲ್ಲಿ ತೊಡಗಿದ್ದ ಪಳನಿಯನ್ನು ಸೆರೆ ಹಿಡಿಯಲು ಪೊಲೀಸರು ಗುಂಡು ಹಾರಿಸಿದ ಘಟನೆ ಕಳೆದ ರಾತ್ರಿ ನಗರದಲ್ಲಿ ನಡೆದಿದೆ. ಗುಂಡೇಟಿನಿಂದ ಗಾಯಗೊಂಡಿರುವ ಪಳನಿ ಕೊಲೆ, ಅಪಹರಣ, ದರೋಡೆ, ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿ. ರೌಡಿ ಚಟುವಟಿಕೆ ಜತೆಗೆ ಇತ್ತೀಚೆಗೆ ರಿಯಲ್ ಎಸ್ಟೇಟ್ ದಂಧೆಯಲ್ಲೂ ತೊಡಗಿಕೊಂಡಿದ್ದ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

ನಡೆದಿದ್ದೇನು: ಕೊತ್ತನೂರು ದಿಣ್ಣೆಯಲ್ಲಿ ಕಳೆದ ರಾತ್ರಿ 9.30ರ ವೇಳೆ ವೆಂಕಟೇಶ ಪ್ರಸಾದ್ ಮತ್ತು ಆತನ ಸಹೋದರಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದರು. ಈ ವೇಳೆ ಎದುರಾದ ಪಳನಿ ಮತ್ತು ಆತನ ಸಹಚರರು ಇವರ ಮೇಲೆ ಕ್ಷುಲ್ಲಕ ವಿಚಾರದಲ್ಲಿ ಜಗಳ ತೆಗೆದಿದ್ದಾರೆ. ಜಗಳ ನಡೆಯುತ್ತಿದ್ದುದನ್ನು ನೋಡಿ ವೆಂಕಟೇಶ್ ಪ್ರಸಾದ್ ಅವರ ಸಹೋದರಿ ಹಾಗೂ ತಂದೆ ಜಗಳ ಬಿಡಿಸಲು ಬಂದಾಗ ಅವರ ಮೇಲೂ ಕೂಡ ಹಲ್ಲೆ ಮಾಡಿದ್ದಾರೆ.ಇದೇ ವೇಳೆ ವೆಂಕಟೇಶ್ ಪ್ರಸಾದ್ ಅವರ ಕೊರಳಲ್ಲಿದ್ದ ಚಿನ್ನದ ಸರವನ್ನು ದುಷ್ಕರ್ಮಿಗಳು ದೋಚಿ ಕ್ಷಣ ಮಾತ್ರದಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ.

ಕೋಣನಕುಂಟೆ ಪೊಲೀಸರಿಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪಳನಿ ಮತ್ತು ಆತನ ಸಹಚರರ ಪತ್ತೆಗೆ ರಾತ್ರಿಯೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಜಂಬೂ ಸವಾರಿ ದಿಣ್ಣೆ ಬಳಿ ಪಳನಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಇನ್ಸ್‍ಪೆಕ್ಟರ್ ಧರ್ಮೇಂದ್ರ ಮತ್ತವರ ಸಿಬ್ಬಂದಿ ಅಲ್ಲಿಗೆ ತೆರಳಿದ್ದಾರೆ. ಪೊಲೀಸರನ್ನು ನೋಡಿದ ತಕ್ಷಣ ಆತ ಮಚ್ಚಿನಿಂದ ಜೀಪಿಗೆ ಹೊಡೆದಿದ್ದಾನೆ.  ಇದರಿಂದ ವಿಚಲಿತರಾದ ಪೊಲೀಸರು ದುಷ್ಕರ್ಮಿಯ ದಾಳಿಯನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದ್ದಾರೆ. ಆದರೆ ಆತ ಇನ್ಸ್‍ಪೆಕ್ಟರ್ ಮೇಲೆಯೇ ದಾಳಿಗೆ ಮುಂದಾಗಿದ್ದಾನೆ. ಈ ವೇಳೆ ಇನ್ಸ್‍ಪೆಕ್ಟರ್ ಧರ್ಮೇಂದ್ರ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಹೇಳಿದ್ದಾರೆ.

ಆಗ ಆತನನ್ನು ಹಿಡಿಯಲು ಹೋದ ಕಾನ್ಸ್‍ಟೇಬಲ್ ಕಿರಣ್‍ಕುಮಾರ್ ಮೇಲೆ ಮಚ್ಚಿನಿಂದ ದಾಳಿ ನಡೆಸಿದ. ತಕ್ಷಣ ಧರ್ಮೇಂದ್ರ ಮತ್ತೆರಡು ಸುತ್ತು ಗುಂಡು ಹಾರಿಸಿದಾಗ ಒಂದು ಗುಂಡು ಪಳನಿ ಕಾಲಿಗೆ ತಗುಲಿದ್ದು, ಆತ ಕುಸಿದು ಬಿದ್ದಿದ್ದಾನೆ.  ಸಿಬ್ಬಂದಿಗಳು ಆತನನ್ನು ಸುತ್ತುವರೆದು ವಶಕ್ಕೆ ಪಡೆದು ನಂತರ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಚ್ಚೇಟಿನಿಂದ ಪೊಲೀಸ್ ಕಾನ್‍ಸ್ಟೇಬಲ್ ಕಿರಣ್‍ಕುಮಾರ್ ಅವರು ಗಾಯಗೊಂಡಿದ್ದಾರೆ. ಪಳನಿ ಈ ಹಿಂದೆ ಜಯನಗರದ 7ನೆ ಬ್ಲಾಕ್‍ನಲ್ಲಿ ನೆಲೆಸಿದ್ದ ಆದರೆ ಇತ್ತೀಚೆಗೆ ಬನ್ನೇರುಘಟ್ಟದ ಕಲ್ಕೆರೆ ಬಳಿ ತನ್ನ ಅಡ್ಡೆಯನ್ನು ಬದಲಿಸಿಕೊಂಡಿದ್ದಾನೆ. ಇತ್ತೀಚೆಗೆ ಕಾಲೇಜು ವಿದ್ಯಾರ್ಥಿಯೊಬ್ಬನ ಅಪಹರಣ ಪ್ರಕರಣದಲ್ಲೂ ಈತ ಬಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಆತನ ಸಹಚರರು ತಲೆ ಮರೆಸಿಕೊಂಡಿದ್ದು , ಅವರ ಪತ್ತೆಗೆ ಬಲೆ ಬೀಸಲಾಗಿದೆ. ಆರೋಪಿ ಪಳನಿ ಮೇಲೆ ಜೆಪಿ ನಗರ, ಕೋರಮಂಗಲ, ಬನ್ನೇರುಘಟ್ಟ, ಹುಳಿಮಾವು ಮತ್ತಿತರ ಠಾಣೆಗಳಲ್ಲಿ ಅಪರಾಧ ಪ್ರಕರಣಗಳು ಈತನ ಮೇಲಿವೆ.

Facebook Comments

Sri Raghav

Admin