ಫೆ.1ರಂದು ಕೇಂದ್ರ ಬಜೆಟ್, ಜ.30ರಂದು ರಾಷ್ಟ್ರಪತಿ ಭಾಷಣ

ಈ ಸುದ್ದಿಯನ್ನು ಶೇರ್ ಮಾಡಿ

Union-Budget--02

ನವದೆಹಲಿ, ಡಿ.3- ಸರಕು ಸೇವಾ ತೆರಿಗೆ (ಜಿಎಸ್‍ಟಿ) ಜಾರಿಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಫೆ.1ರಂದು ಮಂಡನೆಯಾಗಲಿದೆ. ಹಣಕಾಸು ಖಾತೆ ಹೊಂದಿರುವ ಸಚಿವ ಅರುಣ್ ಜೇಟ್ಲಿ ಅವರು ಲೋಕಸಭೆಯಲ್ಲಿ ಎನ್‍ಡಿಎ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಲಿದ್ದಾರೆ.  ಜ.30ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ಫೆ.1ರಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಲಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೆ ಪೂರ್ಣಗೊಂಡ ತ್ರೈಮಾಸಿಕ ಅವಧಿಯಲ್ಲಿ ದೇಶದ ಜಿಡಿಪಿ ದರ 6.3ಕ್ಕೆ ಏರಿಕೆಯಾಗಿತ್ತು. ಜಿಎಸ್‍ಟಿ ಜಾರಿಯಾದ ನಂತರ ಜಿಡಿಪಿ ದರ ಇಳಿಕೆಯಾಗಿದ್ದು, ಕೇಂದ್ರ ಸರ್ಕಾರ ಜನತೆಯ ಕೆಂಗಣ್ಣಿಗೆ ಗುರಿಯಾಗಿತ್ತು. ನೋಟು ಅಮಾನೀಕರಣ ಹಾಗೂ ಜಿಎಸ್‍ಟಿ ಜಾರಿ ನಂತರ ವ್ಯಾಪಾರ-ವಹಿವಾಟಿನ ಮೇಲೆ ಭಾರೀ ದುಷ್ಪರಿಣಾಮ ಬೀರಿದ್ದೇ ಜಿಡಿಪಿ ದರ ಕುಸಿತಕ್ಕೆ ಕಾರಣ ಎಂದು ಆರ್ಥಿಕ ತಜ್ಞರು ವ್ಯಾಖ್ಯಾನಿಸಿದ್ದರು.

ಆದರೆ, ಕಳೆದ ವಾರ ಬಿಡುಗಡೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ದರ ಇದ್ದಕ್ಕಿದ್ದಂತೆ ಏರಿಕೆಯಾಗಿರುವುದು ಆಡಳಿತಾರೂಢ ಸರ್ಕಾರಕ್ಕೆ ಸಂತಸ ತಂದಿದೆ. ಇದೀಗ ಜ.31ರೊಳಗೆ ದೇಶದ ಆರ್ಥಿಕ ಸಮೀಕ್ಷೆ ನಡೆಯಲಿದ್ದು, ಫೆ.1ರಂದು ಬಜೆಟ್ ಮಂಡಿಸಲು ಜೇಟ್ಲಿ ಸಿದ್ಧತೆ ನಡೆಸಿದ್ದಾರೆಂದು ತಿಳಿದುಬಂದಿದೆ. ಈಗಾಗಲೇ ಹಣಕಾಸು ಇಲಾಖೆ ಅಧಿಕಾರಿಗಳ ಜತೆ ನಿರಂತರವಾಗಿ ಸರಣಿ ಸಭೆ ನಡೆಸುತ್ತಿರುವ ಅವರು, ಸರ್ಕಾರ ಕಳೆದ ವರ್ಷ ಬಜೆಟ್‍ನಲ್ಲಿ ಮಂಡಿಸಿದ್ದ ಯೋಜನೆಗಳ ಅನುಷ್ಠಾನ ಹಾಗೂ ಹೊಸ ಕಾರ್ಯಕ್ರಮಗಳ ಘೋಷಣೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಹಣಕಾಸು ಇಲಾಖೆ ಅಧಿಕಾರಿಗಳ ಜತೆ ನಿರಂತರ ಸಭೆ ನಡೆಸಲು ತೀರ್ಮಾನಿಸಿರುವ ಅವರು ಈ ಬಾರಿ ಇಲಾಖಾವಾರು ಸಚಿವರಿಂದಲೂ ಯೋಜನೆಗಳ ಕುರಿತಂತೆ ವಿವರಣೆ ಪಡೆಯುವರು.

ಎನ್‍ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರತ್ಯೇಕವಾಗಿ ರೈಲ್ವೆ ಬಜೆಟ್ ಮಂಡನೆ ಮಾಡುವ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಿದೆ. ಈ ಬಾರಿಯೂ ವಾರ್ಷಿಕ ಬಜೆಟ್‍ನಲ್ಲೇ ರೈಲ್ವೆ ಬಜೆಟ್ ಮಂಡನೆಯಾಗಲಿದೆ.  ಡಿ.15ರಿಂದ ಜ.5ರ ವರೆಗೆ ಚಳಿಗಾಲದ ಅಧಿವೇಶನ ನಡೆಯಲಿದೆ. ಶಿಷ್ಟಾಚಾರದಂತೆ ನವೆಂಬರ್‍ನಲ್ಲೇ ಚಳಿಗಾಲದ ಅಧಿವೇಶನ ನಡೆಸಬೇಕಿತ್ತು. ಆದರೆ, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಗುಜರಾತ್ ಮತ್ತು ಹಿಮಾಚಲ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಂಡಿದ್ದರಿಂದ ಅಧಿವೇಶನ ನಡೆಸಲು ಸಾಧ್ಯವಾಗಿರಲಿಲ್ಲ. ಇದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಸರ್ಕಾರ ಪ್ರತಿಪಕ್ಷಗಳನ್ನು ಎದುರಿಸಲಾಗದೆ ಅಧಿವೇಶನವನ್ನು ಮುಂದೂಡಿದೆ ಎಂದು ಆರೋಪಿಸಿದ್ದರು.

ಆದರೆ, ಇದಕ್ಕೆ ತಿರುಗೇಟು ನೀಡಿದ್ದ ಸರ್ಕಾರ 1976ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಕೂಡ ನವೆಂಬರ್‍ನಲ್ಲಿ ಅಧಿವೇಶನ ನಡೆಸದೆ ಜನವರಿಯಲ್ಲೇ ಕಲಾಪ ನಡೆಸಿದ್ದರು. ಕೆಲವು ತಾಂತ್ರಿಕ ಕಾರಣಗಳಿಂದ ಅಧಿವೇಶನ ನಡೆಸಲು ಸಾಧ್ಯವಾಗಿರಲಿಲ್ಲ. 15 ರಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಪ್ರತಿಪಕ್ಷಗಳು ಎತ್ತುವ ಎಲ್ಲ ಪ್ರಶ್ನೆಗಳಿಗೂ ಸರ್ಕಾರ ಉತ್ತರ ಕೊಡಲು ಸಿದ್ಧವಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್‍ಕುಮಾರ್ ತಿಳಿಸಿದ್ದಾರೆ.

2017-18ರಲ್ಲಿ ಲೋಕಸಭೆ ಚುನಾವಣೆ ಎದುರಾಗುವುದರಿಂದ ಸರ್ಕಾರಕ್ಕೆ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ಬಾರಿಯೇ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ತೀರ್ಮಾನಿಸಲಾಗಿದೆ.
ಈ ಹಿಂದೆ 2014ರಲ್ಲಿ ಅಂದಿನ ಹಣಕಾಸು ಸಚಿವ ಪಿ.ಚಿದಂಬರಂ ಲೇಖಾನುದಾನ ಮಾತ್ರ ಮಂಡಿಸಿದ್ದರು. ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಸರ್ಕಾರಕ್ಕೆ ಅವಕಾಶವಿರುವುದಿಲ್ಲ. ಬಜೆಟ್‍ನಲ್ಲಿ ಘೋಷಣೆ ಮಾಡಿದ ಕಾರ್ಯಕ್ರಮಗಳು ಅನುಷ್ಠಾನವಾಗಲು ಸಮಯಾವಕಾಶ ಬೇಕಾಗುವುದರ ಜತೆಗೆ ಆರ್ಥಿಕ ವರ್ಷ ಮಾರ್ಚ್ ತಿಂಗಳಲ್ಲಿ ಪೂರ್ಣಗೊಳ್ಳುವುದರಿಂದ ಸರ್ಕಾರ ಎಚ್ಚರಿಕೆ ಹೆಜ್ಜೆ ಇಡುತ್ತದೆ.

Facebook Comments

Sri Raghav

Admin