ಭಾರತದಲ್ಲಿ ಹೆಚ್ಚಿನದ ಮಾನವ ಕಳ್ಳಸಾಗಣೆ : ಕಳೆದ ವರ್ಷ 8,000ಕ್ಕೂ ಹೆಚ್ಚು ಪ್ರಕರಣ ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

Human--02

ನವದೆಹಲಿ, ಡಿ.3- ಭಾರತದಲ್ಲಿ ಮಾನವ ಕಳ್ಳಸಾಗಣೆ (ಹ್ಯೂಮನ್ ಟ್ರಾಫಿಕಿಂಗ್) ಪ್ರಕರಣಗಳು ಗಂಭೀರ ಪ್ರಮಾಣದಲ್ಲಿ ಹೆಚ್ಚುತ್ತ ಜ್ವಲಂತ ಸಮಸ್ಯೆಯಾಗಿ ಪರಿಣಮಿಸುತ್ತಿವೆ. ಕಳೆದ ವರ್ಷ 8,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಇದು ಪರಿಸ್ಥಿತಿಯ ಆತಂಕಕಾರಿ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಕಳೆದ ವರ್ಷ ದೇಶಾದ್ಯಂತ ಒಟ್ಟು 8,132 ಮಾನವ ಕಳ್ಳಸಾಗಣೆ ಪ್ರಕರಣಗಳು ವರದಿಯಾಗಿದ್ದು, 2015ರಲ್ಲಿ 6,877 ಪ್ರಕರಣಗಳು ದಾಖಲಾಗಿದ್ದವು ಎಂಬ ಆತಂಕಕಾರಿ ಅಂಕಿ-ಅಂಶಗಳನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಮಂಡಳಿಯ(ಎನ್‍ಸಿಆರ್‍ಬಿ) ಬಿಡುಗಡೆ ಮಾಡಿದೆ. ಇದೇ ಅವಧಿಯಲ್ಲಿ 182 ವಿದೇಶಿಯರೂ ಸೇರಿದಂತೆ 23,000 ಸಂತ್ರಸ್ತರನ್ನು ರಕ್ಷಿಸಲಾಗಿದೆ.

ಸಂವಿಧಾನದ ವಿಧಿ-73(1)ರಡಿ ಮಾನವ ಕಳ್ಳ ಸಾಗಣೆ ಅಪರಾಧ ಕೃತ್ಯವಾಗಿದೆ. ಗುಲಾಮಗಿರಿ, ಬಲವಂತದ ದುಡಿಮೆ, ಲೈಂಗಿಕ ಶೋಷಣೆ ಅಥವಾ ವೇಶ್ಯಾವಾಟಿಕೆ, ಬಲವಂತದ ಮದುವೆ, ಭಿಕ್ಷಾಟನೆ, ಜುಲುಮೆಯ ದತ್ತು ಸ್ವೀಕಾರ, ಅಂಗಾಂಗ ಮಾರಾಟ ಮತ್ತು ಅಶ್ಲೀಲ ಚಿತ್ರೀಕರಣಕ್ಕೆ ಸಂತ್ರಸ್ತರನ್ನು ಬಳಸುವುದು ಈ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧ. ಈ ಪ್ರಕರಣಗಳಲ್ಲಿನ ಒಟ್ಟು 15,379 ಸಂತ್ರಸ್ತರಲ್ಲಿ 9,034 ಮಂದಿ (ಶೇ.58) 18 ವರ್ಷಗಳಿಗಿಂತ ಕೆಳಗಿನವರು ಎಂದು 2016ನೇ ವರ್ಷಕ್ಕಾಗಿ ಬಿಡುಗಡೆ ಮಾಡಿದ ಅಪರಾಧ ಪ್ರಕರಣಗಳ ಕುರಿತ ಎನ್‍ಸಿಆರ್‍ಬಿ ಅಂಕಿ-ಅಂಶಗಳಲ್ಲಿ ತಿಳಿಸಲಾಗಿದೆ. ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದೆ. ಅಲ್ಲಿ ಕಳೆದ ವರ್ಷ 3,579 ಪ್ರಕರಣಗಳು ವರದಿಯಾಗಿದೆ. ಕಳೆದ ವರ್ಷ ದಾಖಲಾದ ಪ್ರಕರಣಗಳಲ್ಲಿ ಶೇ.44ರಷ್ಟು ಕೃತ್ಯಗಳು ಈ ರಾಜ್ಯದಲ್ಲಿ ನಡೆದಿವೆ.

ರಾಜಸ್ತಾನ (1.422) ಎರಡನೆ ಸ್ಥಾನದಲ್ಲಿದ್ದರೆ, ಗುಜರಾತ್(548), ಮಹರಾಷ್ಟ್ರ(517) ಮತ್ತು ತಮಿಳುನಾಡು(434) ಮೂರು, ನಾಲ್ಕು ಮತ್ತು ಐದನೆ ಕ್ರಮಾಂಕದಲ್ಲಿದೆ. 2015ರಲ್ಲಿ ಮಾನವ ಕಳ್ಳಸಾಗಣೆಯಲ್ಲಿ ಅಗ್ರಸ್ಥಾನದಲ್ಲಿದ್ದ ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಕಳೆದ ವರ್ಷ ಈ ಅಪರಾಧ ಪ್ರಕರಣಗಳು ಗಣನೀಯವಾಗಿ ಇಳಿಮುಖವಾಗಿದೆ. ಅಲ್ಲಿ 2016ರಲ್ಲಿ 91 ಪ್ರಕರಣಗಳು ಪತ್ತೆಯಾಗಿವೆ.

2016ರಲ್ಲಿ ರಾಜಧಾನಿ ದೆಹಲಿ ಮಾನವ ಕಳ್ಳಸಾಗಣೆ ಪ್ರಕರಣಗಳ ಪಟ್ಟಿಯಲ್ಲಿ 14ನೆ ಸ್ಥಾನದಲ್ಲಿದೆ. ಕಳೆದ ವರ್ಷ ಒಟ್ಟು 23,119 ಸಂತ್ರಸ್ತರನ್ನು ಮಾನವ ಕಳ್ಳಸಾಗಣೆ ದಂಧೆಯಿಂದ ಪಾರು ಮಾಡಲಾಗಿದ್ದು, ಒಂದು ದಿನಕ್ಕೆ ಸರಾಸರಿ 63 ಮಂದಿಯನ್ನು ವಿಮೋಚನೆಗೊಳಿಸಿದಂತಾಗಿದೆ. ರಕ್ಷಿಸಲಾದ ಸಂತ್ರಸ್ತರಲ್ಲಿ 22,992 ಮಂದಿ ಭಾರತೀಯರು, 38 ಸಂತ್ರಸ್ತರು ಶ್ರೀಲಂಕಾ ಮತ್ತು ನೇಪಾಳಿ ಪ್ರಜೆಗಳು. ಬಾಂಗ್ಲಾ ದೇಶದ 33 ಮಂದಿ ಥೈಲ್ಯಾಂಡ್ ಮತ್ತು ಉಜ್ಬೇಕಿಸ್ತಾನ ಸೇರಿದಂತೆ ಇತರ ದೇಶಗಳ 73 ಮಂದಿಯನ್ನು ಬಿಡುಗಡೆಗೊಳಿಸಲಾಗಿದೆ.  ರಕ್ಷಿಸಲಾದ ಸಂತ್ರಸ್ತರಲ್ಲಿ 16,183 ಅಪ್ರಾಪ್ತ ವಯಸ್ಸಿನವರಾಗಿದ್ದಾರೆ.

Facebook Comments

Sri Raghav

Admin