ರಮ್ಯಾ ಕ್ಯಾಂಟೀನ್ ನಲ್ಲಿ ಸಿಗುತ್ತೆ ವೆರೈಟಿ ವೆರೈಟಿ ಐಟೆಮ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

Ramya--01

ಮಂಡ್ಯ, ಡಿ.3- ಅಮ್ಮ ಕ್ಯಾಂಟೀನ್, ಇಂದಿರಾಕ್ಯಾಂಟೀನ್, ಅಪ್ಪಾಜಿ ಕ್ಯಾಂಟೀನ್ ಮಾದರಿಯಲ್ಲಿ ಈಗ ಮಂಡ್ಯಾದಲ್ಲಿ ರಮ್ಯಾ ಕ್ಯಾಂಟೀನ್ ಪ್ರಾರಂಭವಾಗಿದೆ. ಮಾಜಿ ಸಂಸದೆ, ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರ ಹೆಸರಿನಲ್ಲಿ ರಿಯಾಯ್ತಿ ದರದಲ್ಲಿ ಕ್ಯಾಂಟೀನ್ ಪ್ರಾರಂಭವಾಗಿದ್ದು, 10ರೂ.ಗೆ ತರಹೇವಾರಿ ತಿಂಡಿಗಳು ದೊರೆಯುತ್ತಿವೆ. ಇಡ್ಲಿ, ವಡೆ, ದೋಸೆ, ರವೆ ಇಡ್ಲಿ, ಮಸಾಲೆ ವಡೆ, ಕಾಫಿ, ಟೀ, ಮುದ್ದೆ, ಅನ್ನಸಾಂಬಾರ್ ಸೇರಿದಂತೆ ಎಲ್ಲಾ ಐಟಮ್‍ಗಳು ದೊರೆಯುತ್ತಿವೆ. ಪಾರ್ಸಲ್ ವ್ಯವಸ್ಥೆ ಕೂಡ ಮಾಡಲಾಗಿದೆ.

ರಮ್ಯಾ ಅಭಿಮಾನಿಗಳು ಈ ಕ್ಯಾಂಟೀನ್‍ನನ್ನು ಮಂಡ್ಯಾದಲ್ಲಿ ಪ್ರಾರಂಭಿಸಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆತ್ಮಾನಂದ ಚಾಲನೆ ನೀಡಿದರು. ಸರ್ಕಾರ ಈಗಾಗಲೇ ಬೆಂಗಳೂರಿನಲ್ಲಿ ನೂರಾರು ಇಂದಿರಾಕ್ಯಾಂಟೀನ್‍ನಗಳನ್ನು ಪ್ರಾರಂಭಿಸಿ ರಿಯಾಯ್ತಿ ದರದಲ್ಲಿ ಊಟ, ತಿಂಡಿ ನೀಡುತ್ತಿದೆ. ಇದನ್ನು ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ವಿಸ್ತರಿಸಲು ಮುಂದಾಗಿದ್ದು, ಜ.1ರಿಂದ ಎಲ್ಲೆಡೆ ಇಂದಿರಾಕ್ಯಾಂಟೀನ್‍ಗಳು ಪ್ರಾರಂಭವಾಗಲಿವೆ.

ಜೆಡಿಎಸ್‍ವತಿಯಿಂದ ಬೆಂಗಳೂರಿನ ಬಸವನಗುಡಿಯಲ್ಲಿ ಅಪ್ಪಾಜಿ ಕ್ಯಾಂಟೀನ್ ಪ್ರಾರಂಭಿಸಿ ರಿಯಾಯ್ತಿ ದರದಲ್ಲಿ ಊಟ, ತಿಂಡಿ ನೀಡಲಾಗುತ್ತಿದೆ. ಈಗ ಮಂಡ್ಯಾದಲ್ಲಿ ರಮ್ಯಾ ಹೆಸರಿನಲ್ಲಿ ರಿಯಾಯ್ತಿ ಕ್ಯಾಂಟೀನ್ ಪ್ರಾರಂಭವಾಗಿದೆ. ಕಡಿಮೆ ದರದಲ್ಲಿ ಕ್ಯಾಂಟೀನ್ ಪ್ರಾರಂಭಿಸಲು ಪಾವ್ಪೋಟಿ ಹೆಚ್ಚಾಗಿದೆ. ಹೇಗಾದರು ಮಾಡಿ ಕಡಿಮೆ ವೆಚ್ಚದಲ್ಲಿ ಜನರಿಗೆ ಊಟ, ತಿಂಡಿ ಸಿಕ್ಕರೆ ಸಾಕು. ರಮ್ಯಾ ಅವರು ಮಂಡ್ಯ ರಾಜಕಾರಣಕ್ಕೆ ಹಿಂದಿರುಗಲಿದ್ದಾರೆ ಎಂಬ ಸುದ್ದಿ ರಾಜಕಾರಣದಲ್ಲಿ ದಟ್ಟವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಮಂಡ್ಯ ಅಥವಾ ಮೇಲುಕೋಟೆಯಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹೈಕಮಾಂಡ್‍ನಿಂದಾಗಲಿ, ರಾಜ್ಯ ಕಾಂಗ್ರೆಸ್‍ನಿಂದಾಗಲಿ ಈ ಬಗ್ಗೆ ಯಾವುದೇ ಸ್ಪಷ್ಟನೆ ಹೊರ ಬಿದ್ದಿಲ್ಲ. ಆದರೆ, ಸುದ್ದಿಯಂತು ಹರಿದಾಡುತ್ತಿದೆ. ಈ ನಡುವೆ ಅವರ ಅಭಿಮಾನಿಗಳು ಮಂಡ್ಯದಲ್ಲಿ ಕ್ಯಾಂಟೀನ್ ಪ್ರಾರಂಭಿಸಿರುವುದನ್ನು ಗಮನಿಸಿದರೆ ಮಂಡ್ಯ ರಾಜಕೀಯಕ್ಕೆ ಹಿಂದಿರುಗುವುದಕ್ಕೆ ಪುಷ್ಠಿ ನೀಡಿದಂತಾಗುತ್ತದೆ ಎಂದು ವ್ಯಾಖ್ಯಾನಿಸಲಾಗಿದೆ.

Facebook Comments

Sri Raghav

Admin