ರಾಜ್ಯದ ಕರಾವಳಿಯಲ್ಲಿ ಹೈ ಅಲರ್ಟ್, ಆರ್ಭಟಿಸುತ್ತಿವೆ ದೈತ್ಯ ಅಲೆಗಳು

ಈ ಸುದ್ದಿಯನ್ನು ಶೇರ್ ಮಾಡಿ

Beech--02

ಮಂಗಳೂರು, ಡಿ.3-ಒಖಿ ಚಂಡಮಾರುತದ ಪರಿಣಾಮ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೃಹತ್ ಗಾತ್ರದ ಅಲೆಗಳ ಆರ್ಭಟ ಇಂದು ಕೂಡ ಮುಂದುವರಿದಿದ್ದು, ಕರಾವಳಿ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ರಕ್ಷಣಾ ಸಿಬ್ಬಂದಿ ಸಜ್ಜಾಗಿದ್ದಾರೆ. ನಿನ್ನೆ ರಾತ್ರಿಯಿಂದ ಕರಾವಳಿ ಜಿಲ್ಲೆಗಳಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಜನರು ಸುನಾಮಿ ಅಲೆ ಅಪ್ಪಳಿಸುವ ಆತಂಕಕ್ಕೂ ಒಳಗಾಗಿದ್ದಾರೆ. ಅಲೆಗಳು ಅಪ್ಪಳಿಸದ ಕಾರಣ ಕೆಲವು ಮನೆಗಳಿಗೆ ಹಾನಿಯಾಗಿವೆ.

ಮಂಗಳೂರು, ಉಡುಪಿ, ಉಳ್ಳಾಲ, ಸೋಮೇಶ್ವರ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಪ್ರಕ್ಷುಬ್ಧಗೊಂಡಿದ್ದ ಕಡಲಿನ ಉಬ್ಬರದ ಅರ್ಭಟ ಇಂದು ಬೆಳಗ್ಗೆಯಿಂದಲೂ ಮುಂದುವರಿದಿದೆ. ಆದರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆಲವೆಡೆ ರಕ್ಷಣಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಜಿಲ್ಲಾಡಳಿತಗಳು ಹೈ ಅಲರ್ಟ್ ಘೋಷಿಸಿದ್ದು, ತ್ವರಿತ ಮುಂಜಾಗ್ರತಾ ವ್ಯವಸ್ಥೆ ಮಾಡಲಾಗಿದೆ. ನಿನ್ನೆ ರಾತ್ರಿ ಸುಮಾರು 8 ಗಂಟೆಯಿಂದ ಸಾಗರ ಪ್ರಕ್ಷುಬ್ಧಗೊಂಡು ದೊಡ್ಡ ಗಾತ್ರದ ಅಲೆಗಳು ಕಡಲ ತೀರದ ಪ್ರದೇಶಗಳಿಗೆ ಅಪ್ಪಳಿಸಿತ್ತು. ಆಲೆಗಳ ಭಾರೀ ಆರ್ಭಟದಿಂದ ಉಳ್ಳಾಲ, ಸೋಮೇಶ್ವರ, ಕೈಕೋ, ಕಿಲೆರಿಯಾ, ಉಚ್ಚಿಲ್, ಮುಕ್ಕಚ್ಚೇರಿ, ಸುಭಾಷ್‍ನಗರ, ಮೊಗವೀರಪಟ್ಟಣ, ಚಿತ್ತಾಪುರ ಮೊದಲಾದ ಸಮುದ್ರತೀರ ಪ್ರದೇಶಗಳ ಮನೆಗಳಿಗೆ ಅಪ್ಪಳಿಸಿ ಆತಂಕ ಉಂಟು ಮಾಡಿತ್ತು. ಕೆಲವು ನಿವಾಸಿಗಳು ಸುನಾಮಿ ಅಪ್ಪಳಿಸುವ ವದಂತಿಗಳೂ ಹಬ್ಬಿದ್ದವು. ಕರಾವಳಿ ಪ್ರಾಂತ್ಯದಲ್ಲಿ ಒಂದೆಡೆ ದಟ್ಟ ಕಾರ್ಮೋಡಗಳು ಆವರಿಸಿದ್ದು, ಮತ್ತೊಂದೆಡೆ ಕಡಲು ಮತ್ತಷ್ಟು ಪ್ರಕ್ಷುಬ್ಧಗೊಂಡು ಬೃಹತ್ ಅಲೆಗಳು ಆರ್ಭಟಿಸುತ್ತಿರುವುದರಿಂದ ಜನರು ಕಂಗಾಲಾಗಿದ್ದಾರೆ.

ಸಮುದ್ರದಬ್ಬರ : ಪ್ರವಾಸ ಮೊಟಕುಗೊಳಿಸಿದ ಖಾದರ್ ಎರಡು ದಿನಗಳ ಜಿಲ್ಲಾ ಪ್ರವಾಸದಲ್ಲಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಮ್ಮ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಇಂದು ಬೆಳಗ್ಗೆ ಸ್ವಕ್ಷೇತ್ರಕ್ಕೆ ಹಿಂದಿರುಗಿದ್ದಾರೆ. ಒಖಿ ಚಂಡಮಾರುತ ಪ್ರಭಾವದಿಂದ ಉಳ್ಳಾಲ, ಸೋಮೇಶ್ವರ ಸೇರಿದಂತೆ ಹಲವೆಡೆ ಸಮುದ್ರದ ಅಲೆಗಳು ಬಿರುಸುಗೊಂಡಿವೆ. ಜಿಲ್ಲಾಧಿಕಾರಿ, ತಹಶೀಲ್ದಾರ್, ಗೃಹರಕ್ಷಕ ದಳ, ಪೊಲೀಸ್ ಮೊದಲಾದ ಇಲಾಖೆಗಳ ಉನ್ನತಾಧಿಕಾರಿಗಳೊಂದಿಗೆ ಈಗಾಗಲೇ ಈ ಸಂಬಂಧ ಚರ್ಚಿಸಿದ್ದು, ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸೂಚಿಸಿಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ :
ಕರಾವಳಿ ಜಿಲ್ಲೆಯ ಸಮುದ್ರ ಪ್ರದೇಶಗಳು ಪ್ರಕ್ಷುಬ್ಧಗೊಂಡು ಅಲೆಗಳು ಬಿರುಸಾಗಿರುವುದರಿಂದ ಮುಂದಿನ ಸೂಚನೆ ನೀಡುವ ತನಕ ಮೀನುಗಾರರು ಮತ್ತು ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಬಂದರು ಪ್ರದೇಶಗಳಲ್ಲಿ ಮೀನುಗಾರಿಕೆ ದೋಣಿಗಳು ಲಂಗರು ಹಾಕಿದ್ದ ದೃಶ್ಯಗಳು ಕಂಡುಬಂದವು.

Facebook Comments

Sri Raghav

Admin