ವಿರಾಟ್ ದ್ವಿಶತಕ : ಭಾರೀ ಮೊತ್ತ ಪೇರಿಸಿದ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

Kohli---02

ನವದೆಹಲಿ, ಡಿ.3- ವಿರಾಟ್ ಕೊಹ್ಲಿಯ ವಿರೋಚಿತ ಆಟ (243 ರನ್) ದ ನೆರವಿನಿಂದ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಅಂತಿಮ ಪಂದ್ಯದಲ್ಲಿ ಭಾರತ ತಂಡವು ಬೃಹತ್ ಮೊತ್ತದತ್ತ ಹೆಜ್ಜೆ ಇಟ್ಟಿದೆ. ಫಿರೋಜ್ ಷಾ ಕೋಟ್ಲಾದಲ್ಲಿ ನಡೆಯುತ್ತಿರುವ ಟೆಸ್ಟ್‍ನ ಮೊದಲ ದಿನದಾಟಕ್ಕೆ ಅಜೇಯರಾಗಿ ಉಳಿದಿದ್ದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಂದು ಲಂಕನ್ನರ ಬೌಲಿಂಗ್ ಅಸ್ತ್ರವನ್ನು ದಿಟ್ಟವಾಗಿ ಎದುರಿಸಿದರು. ಈ ಜೋಡಿಯು ಡ್ರಿಂಕ್ಸ್ ವಿರಾಮದ ವೇಳೆಗೆ 442 ರನ್‍ಗಳ ಗಡಿ ದಾಟಿಸಿತು.

ಈ ನಡುವೆ ವಿರಾಟ್ ಕೊಹ್ಲಿ ತಮ್ಮ 6ನೆ ದ್ವಿಶತಕ ಸಂಭ್ರಮವನ್ನು ಆಚರಿಸಿಕೊಂಡರೆ, ರೋಹಿತ್ ಶರ್ಮಾ ಸುಂದರ ಅರ್ಧಶತಕ ಗಳಿಸುವ ಮೂಲಕ ನಾಯಕನಿಗೆ ಸಾಥ್ ನೀಡಿದರು. ನಾಯಕ ಹಾಗೂ ಉಪನಾಯಕರ ಆಟದ ವೈಭವವು ವೀಕೆಂಡ್ ಮೋಜನ್ನು ಸವಿಯಲು ಮೈದಾನಕ್ಕೆ ಬಂದಿದ್ದ ಕ್ರಿಕೆಟ್ ಪ್ರಿಯರನ್ನು ರಂಜಿಸಿತು. ಈ ಜೋಡಿಯನ್ನು ಬೇರ್ಪಡಿಸಲು ಲಂಕಾ ನಾಯಕ ಲಕ್ಮಲ್ ಬೌಲಿಂಗ್ ಬದಲಾವಣೆ ಮಾಡುತ್ತಲೇ ಬಂದರು. ತಂಡದ ಮೊತ್ತ 500ರ ಗಡಿ ಮುಟ್ಟುತ್ತಿದ್ದಂತೆ ಸಂದಕ್ಕನ್ ಎಸೆತ ಬೌಲಿಂಗ್‍ನಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ರೋಹಿತ್ ಶರ್ಮಾ (65 ರನ್, 7 ಬೌಂಡರಿ, 2 ಸಿಕ್ಸರ್) ವಿಕೆಟ್ ಕೀಪರ್ ಡಿಕ್‍ವೆಲ್ಲಾ ಹಿಡಿದ ಅದ್ಭುತ ಕ್ಯಾಚ್‍ನಿಂದಾಗಿ ಮೈದಾನದಿಂದ ಹೊರ ನಡೆದರು.

ರೋಹಿತ್ ಔಟಾಗುವ ಮುನ್ನ 5 ನೆ ವಿಕೆಟ್‍ಗೆ ನಾಯಕ ವಿರಾಟ್ ಕೊಹ್ಲಿಯೊಂದಿಗೆ 135 ರನ್‍ಗಳ ಉಪಯುಕ್ತ ಜೊತೆಯಾಟವನ್ನು ನೀಡಿದ್ದರು. ರೋಹಿತ್ ಔಟಾಗುತ್ತಿದ್ದಂತೆ ಕಣಕ್ಕಿಳಿದ ಅಶ್ವಿನ್ ಕೇವಲ 4 ರನ್ ಗಳಿಸಿ ಪೆರೇರಾಗೆ ಕ್ಯಾಚಿತ್ತು ಡಗ್‍ಔಟ್‍ನತ್ತ ಹೆಜ್ಜೆ ಹಾಕಿದರು. ಈ ನಡುವೆ ಕ್ರಿಕೆಟ್ ಜೀವನದ ಸರ್ವಶ್ರೇಷ್ಠ ಪ್ರದರ್ಶನ ನೀಡಿದ ಕೊಹ್ಲಿ 25 ಬೌಂಡರಿಗಳಿಂದ 243 ರನ್‍ಗಳನ್ನು ಗಳಿಸಿದ್ದಾಗ ಸಂದಕ್ಕನ್ ಬೌಲಿಂಗ್‍ನಲ್ಲಿ ಎಲ್‍ಬಿಡಬ್ಲ್ಯು ಆದರೆ. ಭಾರತ ರಿವ್ಯೂ ತೆಗೆದುಕೊಂಡರೂ ಕೊಹ್ಲಿ ಪೆವಿಲಿಯನ್‍ನತ್ತ ಬೇಸರದಿಂದ ಹೆಜ್ಜೆ ಹಾಕಿದರು. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ವಿಕೆಟ್ ಕೀಪರ್ ವೃದ್ಧಿಮಾನ್ ಶಾ (4 ರನ್) ಹಾಗೂ ರವೀಂದ್ರ ಜಡೇಜಾ (4 ರನ್ ) ಕ್ರೀಸ್‍ನಲ್ಲಿದ್ದು ಟೀಂ ಇಂಡಿಯಾವು 7 ವಿಕೆಟ್ ನಷ್ಟಕ್ಕೆ 531 ರನ್‍ಗಳನ್ನು ಗಳಿಸಿತ್ತು.

Facebook Comments

Sri Raghav

Admin