ಅಕ್ರಮಗಳಿಗೆ ಬ್ರೇಕ್ ಹಾಕಲು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಿಗೆ ಸಿಸಿಟಿವಿ ಕಣ್ಗಾವಲು

ಈ ಸುದ್ದಿಯನ್ನು ಶೇರ್ ಮಾಡಿ

CCTV-02

ಬೆಂಗಳೂರು,ಡಿ.4-ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ವಿದ್ಯಾರ್ಥಿ ನಿಲಯಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಗಟ್ಟಲು ಸರ್ಕಾರ ಸಿಸಿಟಿ ಕ್ಯಾಮೆರಾ ಅಳವಡಿಸಲು ಮುಂದಾಗಿದೆ. ರಾಜ್ಯದ ಸುಮಾರು 1,200ಕ್ಕೂ ಹೆಚ್ಚು ವಿದ್ಯಾರ್ಥಿ/ನಿಯರ ನಿಲಯಗಳಲ್ಲಿ ಸದ್ಯದಲ್ಲೇ ಸಿಸಿಟಿ ಕ್ಯಾಮೆರಾ ಬರಲಿದೆ. ಇದರಿಂದ ಈವರೆಗೂ ನಡೆಯುತ್ತಿದ್ದ ರಾಮನ ಲೆಕ್ಕ, ಕೃಷ್ಣನ ಲೆಕ್ಕಕ್ಕೂ ಕಡಿವಾಣ ಬೀಳಲಿದ್ದು , ಪ್ರತಿಯೊಂದು ಚಟುವಟಿಕೆಗಳ ಮೇಲೆ ಕಣ್ಣಿಡಲು ಸಾಧ್ಯವಾಗುತ್ತದೆ.

ಬೆಂಗಳೂರಿನ ಮುಖ್ಯ ಕೇಂದ್ರ ಮುಖ್ಯ ಕಚೇರಿಯಲ್ಲಿ ಕುಳಿತು ರಾಜ್ಯದ ಯಾವುದೇ ಭಾಗಗಳಲ್ಲಿರುವ ವಸತಿ ನಿಲಯಗಳಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ಇಲ್ಲಿಂದಲೇ ವೀಕ್ಷಿಸಬಹುದು. ಜಿಪಿಎಸ್ ಹಾಕುತ್ತಿರುವುದರಿಂದ ಅಕ್ರಮಗಳಿಗೆ ಅವಕಾಶವಿಲ್ಲದಂತಾಗುತ್ತದೆ. ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ವತಿಯಿಂದ ಸುಮಾರು 1200 ವಿದ್ಯಾರ್ಥಿ ನಿಲಯಗಳಿಗೆ ಸಿಸಿಟಿ ಕ್ಯಾಮೆರಾ ಅಳವಡಿಸಲು ಈಗಾಗಲೇ ಸರ್ಕಾರ ಟೆಂಡರ್ ಕರೆದಿದ್ದು , ಸದ್ಯದಲ್ಲೇ ಅಳವಡಿಕೆಯಾಗಲಿವೆ ಎಂದು ತಿಳಿದುಬಂದಿದೆ.

ವಿದ್ಯಾರ್ಥಿ ನಿಲಯದ ಮುಂಭಾಗ, ಅಡುಗೆ ಕೋಣೆ, ಊಟದ ಹಾಲ್, ಆಹಾರ ಸಂಗ್ರಹಣೆ ಕೊಠಡಿ ಸೇರಿದಂತೆ ಒಂದು ಹಾಸ್ಟೆಲ್‍ಗೆ 3-4 ನಾಲ್ಕು ಸಿಸಿಟಿ ಕ್ಯಾಮೆರಾ ಅಳವಡಿಕೆಯಾಗಲಿವೆ. ಕಾರಣವೇನು?: ಕಳೆದ ಅನೇಕ ವರ್ಷಗಳಿಂದ ವಿದ್ಯಾರ್ಥಿ ನಿಲಯಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು, ವಿದ್ಯಾರ್ಥಿಗಳಲ್ಲದೆ ಹೊರಗಿನವರು ತಂಗುವುದು ಹಾಗೂ ಹಾಸ್ಟೆಲ್ ವಾರ್ಡನ್‍ಗಳೇ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಇದಲ್ಲದೆ ಕಳೆದ ಕೆಲ ತಿಂಗಳ ಹಿಂದೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಹುಳಿಯಾರಿನಲ್ಲಿ ವಿದ್ಯಾವರಿಧಿ ಇಂಟರ್‍ನ್ಯಾಷನಲ್ ವಸತಿ ಶಾಲೆಯಲ್ಲಿ ವಿಷ ಮಿಶ್ರಿತ ಆಹಾರ ಸೇವಿಸಿ ಕೆಲ ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು.

ಈ ಘಟನೆ ರಾಜ್ಯದಲ್ಲಿ ಭಾರೀ ಕೋಲಾಹಲವನ್ನೇ ಸೃಷ್ಟಿಸಿತ್ತು. ಅಲ್ಲದೆ ಆಗಾಗ್ಗೆ ವಸತಿ ನಿಲಯಗಳಲ್ಲಿ ಆಹಾರದಲ್ಲಿ ಹಲ್ಲಿ ಸೇರಿದಂತೆ ಮತ್ತಿತರ ಕ್ರಿಮೀಕೀಟಗಳು ಬಿದ್ದಿರುವ ಪ್ರಕರಣಗಳು ವರದಿಯಾಗುತ್ತಲೇ ಇದ್ದು , ಇದರ ಜತೆಗೆ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಲ್ಲದವರು ಬಂದು ತಂಗುತ್ತಿದ್ದರು. ಇದು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಭಾರೀ ಕಿರಿಕಿರಿ ಉಂಟು ಮಾಡುತ್ತಿತ್ತು.

ಮತ್ತೊಂದೆಡೆ ವಿದ್ಯಾರ್ಥಿ ನಿಲಯಗಳಲ್ಲಿ ಉಸ್ತುವಾರಿ ನೋಡಕೊಳ್ಳುತ್ತಿದ್ದ ವಾರ್ಡನ್‍ಗಳ ರಾಮನ ಲೆಕ್ಕ, ಕೃಷ್ಣನ ಲೆಕ್ಕ ನೋಡಿ ಸರ್ಕಾರವೇ ದಂಗುಬಡಿದಿತ್ತು. ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ವಾರ್ಡನ್‍ಗಳ ಮೇಲೆ ದಾಳಿ ನಡೆದ ವೇಳೆ ಕೋಟಿಗಟ್ಟಲೇ ನಗದು, ಅಕ್ರಮ ಆಸ್ತಿ ಪತ್ತೆಯಾಗುತ್ತಿತ್ತು. ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಆಹಾರ ಧಾನ್ಯಗಳನ್ನು ವಾರ್ಡನ್‍ಗಳೂ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದುದ್ದೇ ಹೆಚ್ಚು. ಪ್ರತಿ ವಿದ್ಯಾರ್ಥಿಗೆ ಇಂತಿಷ್ಟು ಪ್ರಮಾಣದಲ್ಲಿ ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡಬೇಕೆಂಬ ನಿಯಮವಿದೆ.

ಅಕ್ಕಿ , ಬೇಳೆ, ಸಕ್ಕರೆ , ಎಣ್ಣೆ , ಮೊಟ್ಟೆ , ತರಕಾರಿ, ಸೋಪು ಸೇರಿದಂತೆ ಪ್ರತಿಯೊಂದರಲ್ಲೂ ವಾರ್ಡನ್‍ಗಳು ಅರ್ಧಂಬರ್ಧ ಖರೀದಿಸಿ ವಿದ್ಯಾರ್ಥಿಗಳಿಗೆ ಸರಿ ಪ್ರಮಾಣದಲ್ಲಿ ಆಹಾರ ನೀಡುತ್ತಿರಲ್ಲಿಲ. ಈ ಎಲ್ಲ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದಲೇ ವಸತಿ ನಿಲಯಗಳಿಗೆ ಸಿಸಿಟಿ ಕ್ಯಾಮೆರಾ ಹಾಕಲು ಇಲಾಖೆ ಮುಂದಾಗಿದೆ.  ಇನ್ನು ಮುಂದೆ ವಾರ್ಡನ್‍ಗಳಾಗಲಿ ಇಲ್ಲವೇ ಯಾರೇ ಆಗಲಿ ವಸತಿ ನಿಲಯಗಳಲ್ಲಿ ಏನೇನು ಮಾಡುತ್ತಾರೆ ಎಂಬುದು ಸಿಸಿಟಿ ಕ್ಯಾಮೆರಾದಲ್ಲಿ ಸೆರೆಯಲಾಗಿದೆ.

Facebook Comments

Sri Raghav

Admin