ಸಿದ್ದರಾಮಯ್ಯನವರದ್ದು ರಾವಣನ ಆಡಳಿತ : ಅನಂತ ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

Anant-Kumar--01

ಮೈಸೂರು,ಡಿ.04- ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದಲ್ಲಿ ರಾವಣ ರಾಜ್ಯದ ಆಡಳಿತ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಇಂದಿಲ್ಲಿ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹುಣಸೂರಿನಲ್ಲಿ ಹನುಮ ಜಯಂತಿಗೆ ಅನುಮತಿ ನೀಡಿಲ್ಲ. ಆದರೆ ಈದ್ ಮಿಲಾದ್ ಹಾಗೂ ಟಿಪ್ಪು ಜಯಂತಿ ಮೆರವಣಿಗೆಗಳಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಆಕ್ಷೇಪಿಸಿದರು.

ಹನುಮ ಜಯಂತಿ ಮೆರವಣಿಗೆ ಏಕೆ ಮಾಡಬಾರದು ಎಂದು ಪ್ರಶ್ನಿಸಿದ ಅವರು, ಪುರಾಣದಲ್ಲಿ ಕರ್ನಾಟಕ ಹನುಮನ ನಾಡು ಎಂದೇ ಕರೆಸಿಕೊಂಡಿದೆ. ಆದರೆ ನಮ್ಮ ರಾಜ್ಯದಲ್ಲೆ ಹನುಮ ಜಯಂತಿಗೆ ತೊಂದರೆಯಾಗುತ್ತಿದೆ ಎಂದು ವಿಷಾದಿಸಿದರು. ಇವರ ಇಂತಹ ಕೆಲಸಗಳಿಂದ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುತ್ತಿದೆ. ರಾಜ್ಯದಲ್ಲೆನಾದರೂ ಕೋಮು ಸೌಹಾರ್ದತೆ ದಕ್ಕೆಯಾದರೆ ಅದಕ್ಕೆ ನೇರ ಹೊಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳಿದರು.
ರಾಜ್ಯ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಹಾಕುತ್ತಿದೆ. 19 ಮಂದಿ ಹಿಂದೂ ಯುವಕರ ಕೊಲೆಯಾಗಿದೆ. ಈ ಹತ್ಯೆಗಳ ಹಿಂದೆ ಹಲವು ಸಂಘಟನೆಗಳ ಕೈವಾಡವಿದ್ದರೂ ಸರ್ಕಾರ ಮಾತ್ರ ಕೈಕಟ್ಟಿ ಕುಳಿತಿದೆ. ಸೌಜನ್ಯಕ್ಕಾದರೂ ಕೊಲೆಯಾದವರ ಕುಟುಂಬದವರನ್ನು ಭೇಟಿ ಮಾಡಿ ಸಂತ್ವಾನ ಹೇಳಿಲ್ಲ ಎಂದರು.

ಮುಖ್ಯಮಂತ್ರಿಯವರ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆಗೂ ರಜೆ ಇದೆ ಎಂದು ಟೀಕಿಸಿದ ಅವರು, ಹನುಮ ಜಯಂತಿ ಸಂದರ್ಭದಲ್ಲಿ ಹನುಮ ಭಕ್ತರು ಹಾಗೂ ಸಂಸದ ಪ್ರತಾಪ್ ಸಿಂಹ ಅವರ ಬಂಧನದ ಕುರಿತಂತೆ ಸಭಾಪತಿಗಳಿಗೆ ದೂರು ನೀಡಲಾಗುವುದು. ಈ ಬಗ್ಗೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಿದ್ದೇವೆ. ದೆಹಲಿಯ ಸಂಸತ್ ಅಧಿವೇಶನದಲ್ಲೂ ಈ ವಿಷಯ ಚರ್ಚಿಸಲಾಗುವುದು ಎಂದು ತಿಳಿಸಿದರು. ಸಂಸದ ಪ್ರತಾಪ್ ಸಿಂಹ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರ ಕಣ್ಣಿಗೆ ಕಾಮಲೆ ಯಾಗಿದೆ. ಏನೇ ಆದರೂ ನಾವು ಹನುಮ ಜಯಂತಿಯನ್ನು ಮಾಡೇ ಮಾಡುತ್ತೇವೆ ಎಂದರು.

ಹನುಮ ಜಯಂತಿ ಆಚರಣೆಗಾಗಿ ರೂಪುರೇಷೆಗಳನ್ನು ಸಿದ್ಧಪಡಿಸುತ್ತೇವೆ. ಇದು ನಮ್ಮ ಧಾರ್ಮಿಕ ಹಕ್ಕು, ಇದನ್ನು ಕಸಿಯುವ ಅಧಿಕಾರ ಯಾರಿಗೂ ಇಲ್ಲ ಎಂದು ಹೇಳಿದರು. ಹುಣಸೂರಿನಲ್ಲಿ ಪೊಲೀಸರ ಕರ್ತವ್ಯಕ್ಕೆ ನಾನು ಅಡ್ಡಿ ಮಾಡಿಲ್ಲ. ಬಿಳಿಕೆರೆ ಬಳಿ ಪೊಲೀಸರು ಸಾರ್ವಜನಿಕರ ವಾಹನಗಳನ್ನು ಅನುಮಾನದಿಂದ ತಪಾಸಣೆ ನಡೆಸುತ್ತಿದ್ದರು. ಇದನ್ನು ಪ್ರಶ್ನಿಸಿದ ನಾನು ಅಲ್ಲಿಂದ ಕಾರನ್ನು ಓಡಿಸಿಕೊಂಡು ಹೋದೆ ಆ ವೇಳೆ ಕಾರಿನ ಬ್ಯಾನೇಟ್‍ಗೆ ತಗುಲಿದೆ. ಆದರೆ ನಾನು ಡಿಕ್ಕಿ ಹೊಡೆದಿಲ್ಲ. ಇದನ್ನೇ ದೊಡ್ಡದ್ದು ಮಾಡಿ ನನ್ನ ವಿರುದ್ಧ ಕೇಸು ದಾಖಲಿಸಿದ್ದಾರೆ ಎಂದರು.

Facebook Comments

Sri Raghav

Admin