ಕೊಲೆಗಡುಕರನ್ನು ಏಕೆ ರಕ್ಷಣೆ ಮಾಡುತ್ತಿದ್ದೀರಾ..? : ಸಿಎಂಗೆ ಈಶ್ವರಪ್ಪ ಪ್ರಶ್ನೆ

ಈ ಸುದ್ದಿಯನ್ನು ಶೇರ್ ಮಾಡಿ

Eshwarappa-And-Siddaramaiah

ಬಾಗಲಕೋಟೆ,ಡಿ.4-ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಲೆಗಡುಕರನ್ನು ಏಕೆ ರಕ್ಷಣೆ ಮಾಡುತ್ತಿದ್ದಾರೆ ಎಂಬುದನ್ನು ಜನತೆಯ ಮುಂದೆ ಬಹಿರಂಗಪಡಿಸಲಿ ಎಂದು ಬಿಜೆಪಿ ಮುಖಂಡ ಹಾಗೂ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿವೈಎಸ್ಪಿ ಎಂ.ಕೆ.ಗಣಪತಿ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಸಚಿವರಾದ ಕೆ.ಜೆ.ಜಾರ್ಜ್ ಮತ್ತು ವಿನಯ್ ಕುಲಕರ್ಣಿ ಕೈವಾಡ ಇರುವುದು ಕಂಡುಬಂದಿದ್ದರೂ ಅವರಿಂದ ರಾಜೀನಾಮೆ ಏಕೆ ಪಡೆಯುತ್ತಿಲ್ಲ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಸಂಪುಟದಲ್ಲಿ ಅನೇಕ ಸಚಿವರು ಒಂದಿಲ್ಲೊಂದು ಕ್ರಿಮಿನಲ್ ಹಿನ್ನೆಲೆಯುಳ್ಳವರು. ರಾಜೀನಾಮೆ ಪಡೆದರೆ ತಮ್ಮ ಕುರ್ಚಿಗೆ ಕಂಟಕ ಬರಬಹುದೆಂಬ ಕಾರಣದಿಂದಲೇ ಮುಖ್ಯಮಂತ್ರಿ ಪ್ರಕರಣಗಳನ್ನು ಮುಚ್ಚಿ ಹಾಕುವ ಹೀನ ಕೃತ್ಯಕ್ಕೆ ಕೈ ಹಾಕಿದ್ದಾರೆ ಎಂದು ದೂರಿದರು. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಬ್ಯಾರಿಕೇಡ್ ಮುರಿದುಕೊಂಡು ಹೋಗುವ ಪರಿಸ್ಥಿತಿಗೆ ತಂದಿದ್ದು ಕಾಂಗ್ರೆಸ್‍ನವರೇ ಎಂದು ಈಶ್ವರಪ್ಪ ಕಿಡಿಕಾರಿದರು. ಹುಣಸೂರಿನಲ್ಲಿ ಹನುಮ ಜಯಂತಿ ಶಾಂತಿಯುತವಾಗಿ ನಡೆಯುತ್ತಿತ್ತು. ಆದರೆ ಹನುಮ ಜಯಂತಿಗೆ ಹೋಗುತ್ತಿದ್ದವರನ್ನು ತಡೆಯಬಾರದಿತ್ತು. ಪ್ರತಾಪ್ ಸಿಂಹ ಒಬ್ಬ ಸಂಸದರಾಗಿದ್ದು ಅವರ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗುವುದನ್ನು ತಡೆಯುವ ಅಧಿಕಾರವನ್ನು ಕಾಂಗ್ರೆಸ್ ಸರ್ಕಾರಕ್ಕೆ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.

ಬ್ಯಾರಿಕೇಡ್ ಸರಿಸಿ ಹೋಗುವ ಸಂದರ್ಭದಲ್ಲಿ ಪ್ರತಾಪಸಿಂಹ ಬ್ಯಾರಿಕೇಡ್ ಮುರಿದುಕೊಂಡು ಹೋಗಿದ್ದಾರೆ ಎಂಬ ಸುದ್ದಿಯನ್ನು ನಾನು ಮಾಧ್ಯಮಗಳಲ್ಲಿ ನೋಡಿ ತಿಳಿದುಕೊಂಡಿದ್ದೇನೆ. ಆದರೆ ಪ್ರತಾಪಸಿಂಹ ಅವರನ್ನು ಈ ಪರಿಸ್ಥಿತಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ. ಪೊಲೀಸರನ್ನು ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.

ಭಿನ್ನಮತ ಸಹಜ:

ಪರಿವರ್ತನಾ ರಥಯಾತ್ರೆ ವೇಳೆ ಅಲ್ಲಲ್ಲಿ ಭಿನ್ನಮತ ಕಂಡುಬಂದಿರುವುದನ್ನು ಒಪ್ಪಿಕೊಂಡಿರುವ ಈಶ್ವರಪ್ಪ , ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಿಕೊಂಡು ಪಕ್ಷ ಮುನ್ನೆಡೆಸುತ್ತೇವೆ ಎಂದು ಹೇಳಿದರು.  ನಮ್ಮಲ್ಲಿ ಆಕಾಂಕ್ಷಿಗಳು ಹೆಚ್ಚಾಗಿರುವುದರಿಂದ ಭಿನ್ನಮತ ಸಹಜ. ಯಾವ ಪಕ್ಷ ಅಧಿಕಾರಕ್ಕೆ ಬರುವ ಮುನ್ಸೂಚನೆ ಇರುತ್ತದೆಯೋ ಅಂತಹ ಕಡೆ ಸಣ್ಣಪುಟ್ಟ ಗೊಂದಲಗಳು ಸರ್ವೇ ಸಾಮಾನ್ಯ. ಮುಖಂಡರು ಇದನ್ನು ಸರಿಪಡಿಸುವ ವಿಶ್ವಾಸವಿದೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಏನೇ ತಿಪ್ಪರಲಾಗ ಹೊಡೆದರೂ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದರು.

Facebook Comments

Sri Raghav

Admin