ಗುಂಡು ಹಾರಿಸಿ ದರೋಡೆಕೋರರನ್ನು ಸೆರೆಯಿಡಿದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

crime

ಬೆಂಗಳೂರು, ಡಿ.4- ಬೆಳ್ಳಂಬೆಳಗ್ಗೆ ಪೊಲೀಸರ ಪಿಸ್ತೂಲುಗಳು ಸದ್ದು ಮಾಡಿದ್ದು , ಆರ್‍ಎಂಸಿ ಯಾರ್ಡ್ ಹಾಗೂ ಕಲಬುರ್ಗಿಯಲ್ಲಿ ಫೈರಿಂಗ್ ನಡೆಸಿ ಇಬ್ಬರು ದರೋಡೆಕೋರರನ್ನು ಬಂಧಿಸುವ ಮೂಲಕ ಅಪರಾಧ ಪ್ರಕರಣಗಳಲ್ಲಿ ಬಾಗಿಯಾಗುವವರಿಗೆ ಎಚ್ಚರಿಕೆ ನೀಡಿದ್ದಾರೆ. ಆರ್‍ಎಂಸಿ ಯಾರ್ಡ್ ಪೊಲೀಸರು ಅಶ್ವತ್ಥ್ ಎಂಬ ದರೋಡೆಕೋರನನ್ನು ಬಂಧಿಸಿದರೆ, ಕಲಬುರ್ಗಿಯಲ್ಲಿ ಅರ್ಜುನ್ ಎಂಬ ಕುಖ್ಯಾತ ದರೋಡೆಕೋರನನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆರ್‍ಎಂಸಿ ಯಾರ್ಡ್:

ಮುಂಜಾನೆ ಮರಿಯಪ್ಪನಪಾಳ್ಯದ ವೃತ್ತದಲ್ಲಿ ಅಣ್ಣಿಯಪ್ಪ ಎಂಬುವರು ಬೈಕ್‍ನಲ್ಲಿ ಹೋಗುತ್ತಿದ್ದಾಗ ಇವರನ್ನು ಅಡ್ಡಗಟ್ಟಿ ಬೆದರಿಸಿದ ದರೋಡೆಕೋರ ಮೊಬೈಲ್ ಹಾಗೂ 300ರೂ. ಹಣ ಕಸಿದು ಪರಾರಿಯಾಗುತ್ತಿದ್ದನು. ಸುದ್ದಿ ತಿಳಿದ ಕೂಡಲೇ ರಾಜಗೋಪಾಲನಗರ ಹಾಗೂ ಆರ್‍ಎಂಸಿ ಯಾರ್ಡ್ ಪೊಲೀಸರು ನಾಕಾಬಂದಿ ಮಾಡಿ ಕಾರ್ಯಾಚರಣೆಗೆ ಮುಂದಾದರು. ದರೋಡೆಕೋರ ಆರ್‍ಎಂಸಿಯಾರ್ಡ್‍ನ ಖೋಡೆ ಕನ್ವೆನ್ಷನ್ ಹಾಲ್ ಬಳಿಯ ಕಿರಿದಾದ ರಸ್ತೆಯಲ್ಲಿ ಹೋಗುತ್ತಿರುವ ಬಗ್ಗೆ ಮಾಹಿತಿ ತಿಳಿದು ಕೂಡಲೇ ಆರ್‍ಎಂಸಿಯಾರ್ಡ್ ಠಾಣೆ ಇನ್ಸ್‍ಪೆಕ್ಟರ್ ಮೊಹಮ್ಮದ್ ಮುಕಾರಂ, ಸಬ್‍ಇನ್ಸ್‍ಪೆಕ್ಟರ್ ರಘು ಪ್ರಸಾದ್, ಕಾನ್‍ಸ್ಟೇಬಲ್ ಆಕಾಶ ಅವರಿದ್ದ ಐದು ಮಂದಿಯ ತಂಡ ಕಾರ್ಯಾಚರಣೆ ಕೈಗೊಂಡಿದೆ. ಪೊಲೀಸರು ಬರುತ್ತಿರುವುದನ್ನು ಗಮನಿಸಿದ ದರೋಡೆಕೋರ ಅಶ್ವತ್ಥ್ ಲಾಂಗ್‍ನಿಂದ ಕಾನ್‍ಸ್ಟೇಬಲ್ ಆಕಾಶ್ ಅವರ ಕೈಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಇನ್ಸ್‍ಪೆಕ್ಟರ್ ಮುಕಾರಾಂ ಅವರು ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರೂ ಕೇಳದೆ ಓಡಿಹೋಗುತ್ತಿದ್ದ ಅಶ್ವತ್ಥ್‍ನನ್ನು ಹಿಡಿಯಲು ಹಾರಿಸಿದ ಗುಂಡು ಆತನ ಬಲಗಾಲಿಗೆ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಈ ವೇಳೆ ಇನ್‍ಸ್ಪೆಕ್ಟರ್ ಈತನನ್ನು ಬಂಧಿಸಿ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ದಾಳಿ ಸಂದರ್ಭದಲ್ಲಿ ಗಾಯಗೊಂಡ ಕಾನ್‍ಸ್ಟೇಬಲ್ ಆಕಾಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಸಂದ್ರದ ನಿವಾಸಿಯಾಗಿರುವ ದರೋಡೆಕೋರ ಅಶ್ವತ್ಥ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ರಾಜಗೋಪಾಲನಗರ ಠಾಣಾ ರೌಡಿಪಟ್ಟಿಯಲ್ಲಿದ್ದಾನೆ.

ಕಲಬುರ್ಗಿ ವರದಿ: 

ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ದರೋಡೆಕೋರನನ್ನು ದೇವಲ ಗಾಣಗಾಪುರ ಪೊಲೀಸರು ಫೈರಿಂಗ್ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರ್ಜುನ್ ಬಂಧಿತ ಕುಖ್ಯಾತ ದರೋಡೆಕೋರನಾಗಿದ್ದು, ಈತನಿಂದ ಮೂರು ಕಂಟ್ರಿಮೇಡ್ ಪಿಸ್ತೂಲುಗಳನ್ನು ವಶಪಡಿಸಿಕೊಂಡಿದ್ದಾರೆ. ದರೋಡೆ, ಕೊಲೆ ಸೇರಿದಂತೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಈತ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದನು. ಈತನ ಬಂಧನಕ್ಕೆ ಅಡಿಶಿನಲ್ ಎಎಸ್‍ಪಿ ಲೋಕೇಶ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಇಂದು ಮುಂಜಾನೆ ದರೋಡೆಕೋರ ಅರ್ಜುನ್ ಕಲ್ಬುರ್ಗಿ ಜಿಲ್ಲೆ ಅಫ್ಜಲ್‍ಪುರ ತಾಲ್ಲೂಕಿನ ಗುಬ್ಬೂರಿನಲ್ಲಿ ಈತ ಇರುವ ಬಗ್ಗೆ ಈ ತಂಡಕ್ಕೆ ಮಾಹಿತಿ ಲಭಿಸಿದೆ.

ಮಹಾಗಾಂವ್‍ನ ಪಿಎಸ್‍ಐ ಪ್ರದೀಪ್, ಡಿಸಿಆರ್‍ಬಿ ಎಎಸ್‍ಐ ಶಿವಪ್ಪ ಅವರನ್ನೊಳಗೊಂಡ ತಂಡ ದಾಳಿ ಮಾಡಿದೆ. ಪೊಲೀಸರು ಬರುತ್ತಿರುವುದನ್ನು ಗಮನಿಸಿದ ಈತ ಅವರ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದಾಗ ದರೋಡೆಕೋರನ ಕಾಲಿಗೆ ಆ ಗುಂಡು ತಗುಲಿ ಕುಸಿದು ಬಿದ್ದಿದ್ದಾನೆ. ಈ ವೇಳೆ ಪೊಲೀಸರು ಆತನನ್ನು ಬಂಧಿಸಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆರೋಪಿ ಅರ್ಜುನ್ ಹೊಳೆ ಬೋಸ್ಗಾ ಗ್ರಾಮದ ನಿವಾಸಿಯಾಗಿದ್ದು , ಈತ ಹಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದನು. ದಾಳಿ ವೇಳೆ ಗಾಯಗೊಂಡಿರುವ ಶಿವಪ್ಪ ಹಾಗೂ ಪ್ರದೀಪ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವಲಗಾಣಗಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments