ದತ್ತ ಜಯಂತಿ ವೇಳೆ ಗೋರಿಗಳಿಗೆ ಹಾನಿ, ಕಲ್ಲು ತೂರಾಟ, ಹಲ್ಲೆ ನಡೆಸಿದ ಕೆಲವರ ವಿರುದ್ಧ ಕೇಸ್

ಈ ಸುದ್ದಿಯನ್ನು ಶೇರ್ ಮಾಡಿ

Chikkamagaluru--02

ಚಿಕ್ಕಮಗಳೂರು,ಡಿ.4-ನಿನ್ನೆ ನಡೆದ ದತ್ತ ಜಯಂತಿ ವೇಳೆ ಗೋರಿಗಳಿಗೆ ಹಾನಿಯಾಗಿದೆ ಎಂಬ ಕಾರಣಕ್ಕೆ ನಗರಕ್ಕೆ ಬರುತ್ತಿದ್ದ ವಾಹನಗಳ ಮೇಲೆ ಕಲ್ಲು ತೂರಿ ಇಬ್ಬರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆ ಬಸವನಹಳ್ಳಿ ಠಾಣೆಯಲ್ಲಿ ಕೆಲವರ ವಿರುದ್ಧ ಪ್ರಕರಣ ದಾಖಲಾಗಿದೆ. ನಿನ್ನೆ ರಾತ್ರಿ ಮಾರ್ಕೆಟ್ ರಸ್ತೆಯಲ್ಲಿ ಕೆಲವು ವ್ಯಕ್ತಿಗಳಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆಂದು ಮಾಹಿತಿ ಲಭ್ಯವಾಗಿದ್ದು , ಬೂದಿ ಮುಚ್ಚಿದ ಕೆಂಡದಂತಿರುವ ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಅವರ ತಂಡ ಗಸ್ತು ತಿರುಗುತ್ತಿದ್ದು , ಪ್ರಸ್ತುತ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಹಲ್ಲೆಗೊಳಗಾಗಿರುವ ಪ್ರವೀಣ್ ಮತ್ತು ಚಂದನ್ ಜಿಲ್ಲಾಸ್ಪತ್ರೆಯಲ್ಲಿ ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸಿ.ಟಿ.ರವಿ, ನಗರದಲ್ಲಿ ಯಾವುದೇ ಕಾರಣಕ್ಕೂ ಅಶಾಂತಿಗೆ ಅವಕಾಶ ಮಾಡಿಕೊಡದೆ ಶಾಂತಿ ಕದಡಲು ಯತ್ನಿಸುವ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ದತ್ತಪೀಠದಲ್ಲಿ ದತ್ತ ಮಾಲಾಧಾರಿಗಳು ಹಾನಿಗೊಳಪಡಿಸಿದವರನ್ನು ಕುರಿತು ಪ್ರತಿಕ್ರಿಯಿಸಿದ ಅವರು, ಶೇ.99ರಷ್ಟು ದತ್ತ ಜಯಂತಿ ಶಾಂತಿಯುತವಾಗಿ ಆಚರಣೆಯಾಗಿದೆ. ಯಾರೋ ಒಂದಿಬ್ಬರು ನಕಲಿ ಗೋರಿಗೆ ಹಾನಿ ಮಾಡಿದ್ದಾರೆ ವಿನಃ ವಿವಾದಿತ ಸ್ಥಳದಲ್ಲಿರುವ ಯಾವುದೇ ಗೋರಿಗೆ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ನಕಲಿ ಗೋರಿಗೆ ಹಾನಿಯಾಗಿದೆ. ಅಷ್ಟಕ್ಕೂ ಅಲ್ಲಿರುವ ಗೋರಿಗಳ ಸಂಖ್ಯೆಯಷ್ಟು ಜನರೇ ಅಲ್ಲಿ ಹುಟ್ಟಿರಲಿಲ್ಲ. ವಿವಾದ ಸೃಷ್ಟಿಸಲು ಅಲ್ಲಿ ನಕಲಿ ಗೋರಿಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿದರು.  ನಕಲಿ ಗೋರಿಗೆ ಹಾನಿಯಾದ ಕಾರಣಕ್ಕೆ ದತ್ತ ಜಯಂತಿಯಲ್ಲಿ ಭಾಗವಹಿಸಿ ನಗರಕ್ಕೆ ಹಿಂದುರುಗಿತ್ತಿದ್ದ ದತ್ತ ಭಕ್ತರ ಮೇಲೆ ಕಲ್ಲುತೂರಾಟ ನಡೆಸಿರುವುದಲ್ಲದೆ ಬಹಳಷ್ಟು ವಾಹನಗಳನ್ನೂ ಜಖಂಗೊಳಿಸಿದ್ದಾರೆ ಇದು ಖಂಡನೀಯ. ಕೂಡಲೇ ಜಿಲ್ಲಾಡಳಿತ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ನಕಲಿ ಗೋರಿ ಮೇಲೆ ಹಾನಿಯಾಗಿದ್ದಕ್ಕೆ ಅವರು ಈ ರೀತಿ ಮಾಡುವುದಾದರೆ ಹಲವು ದಶಕಗಳಿಂದ ಹಿಂದುಗಳಿಗೆ ಸೇರಿದ ದತ್ತಪೀಠವನ್ನು ಆಕ್ರಮಿಸಿಕೊಂಡಿದ್ದಾರಲ್ಲ ಅವರ ವಿರುದ್ಧ ನಾವು ಯಾವ ಕ್ರಮ ಕೈಗೊಳ್ಳಬೇಕು ಮತ್ತು ನಾವು ಕೂಡ ತಿರುಗಿ ಬಿದ್ದರೆ ಪರಿಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿದರು.  ಇಂದು ನಗರದಲ್ಲಿ ಎಂದಿನಂತೆ ವ್ಯಾಪಾರ, ವಹಿವಾಟು, ವಾಹನ ಸಂಚಾರ ಯಥಾಸ್ಥಿತಿಗೆ ಬಂದಿದ್ದು , ನಗರದಲ್ಲಿ ಗಸ್ತು ತಿರುಗಿ ಸಹಜ ಸ್ಥಿತಿಗೆ ತರುವಲ್ಲಿ ಶ್ರಮಿಸಿದ ಎಸ್‍ಪಿ ಅವರ ಬಗ್ಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

Facebook Comments

Sri Raghav

Admin