ದಲಿತರಿಗೆ ಒಳಮೀಸಲಾತಿ : ಸದ್ಯದಲ್ಲೇ ಹಿರಿಯ ದಲಿತ ನಾಯಕರ ಜೊತೆ ಸಿಎಂ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha-CM--01

ಬೆಂಗಳೂರು, ಡಿ.4- ದಲಿತರಿಗೆ ಒಳಮೀಸಲಾತಿ ಸೌಲಭ್ಯ ಒದಗಿಸುವ ಕುರಿತು ಕೇಂದ್ರಕ್ಕೆ ಶಿಫಾರಸು ಮಾಡುವ ಸಂಬಂಧ ಸಧ್ಯದಲ್ಲೇ ಹಿರಿಯ ದಲಿತ ನಾಯಕರ ಸಭೆ ನಡೆಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ನಿರ್ಧರಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕಿಂತ ಮುಂಚಿತವಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಇಲ್ಲವೇ ಜೆಡಿಎಸ್ ದಲಿತರಿಗೆ ಒಳಮೀಸಲಾತಿ ನೀಡುತ್ತೇವೆ ಎಂಬ ಭರವಸೆ ನೀಡಿದರೆ ಕೈಪಾಳೆಯ ಗಂಡಾಂತರ ಎದುರಿಸುವುದು ನಿಶ್ಚಿತ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಆತಂಕ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಮಹತ್ವದ ಸಭೆ ನಡೆಸಲು ಸಿದ್ಧರಾಮಯ್ಯ ನಿರ್ಧರಿಸಿದ್ದಾರೆ.

ಮೀಸಲಾತಿಯ ಸೌಲಭ್ಯ ಎಡಗೈ ಸಮುದಾಯದವರಿಗೆ ಸಮರ್ಪಕವಾಗಿ ಸಿಗುತ್ತಿಲ್ಲ ಎಂಬ ಕೂಗು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದ್ದು ಇದೇ ಕಾರಣಕ್ಕಾಗಿ ಡಿ.11ರಂದು ಕೂಡಲ ಸಂಗಮದಿಂದ ಬೆಂಗಳೂರಿಗೆ ಎಡಗೈ ಸಮುದಾಯದವರ ಜಾಥಾ ಆಗಮಿಸಲಿದೆ. ನ್ಯಾಯಮೂರ್ತಿ ಸದಾಶಿವ ಆಯೋಗದ ಶಿಫಾರಸಿನ ಪ್ರಕಾರ ದಲಿತರಿಗೆ ಒಳಮೀಸಲಾತಿ ಸೌಲಭ್ಯ ಕಲ್ಪಿಸಿಕೊಡಬೇಕು.ಬಲಗೈ ಸಮುದಾಯಕ್ಕೆ, ಎಡಗೈ ಸಮುದಾಯಕ್ಕೆ, ಲಂಬಾಣಿಗಳಿಗಳಿಗೆ ಮತ್ತಿತರರಿಗೆ ಇಂತಿಷ್ಟು ಪ್ರಮಾಣದ ಮೀಸಲಾತಿಯನ್ನು ನೀಡಬೇಕು ಎಂದು ಹೇಳಲಾಗಿದೆ.

ಆದರೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವ ವಿಷಯದಲ್ಲಿ ಕೈ ಪಾಳೆಯದಲ್ಲೇ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದು, ಇದಕ್ಕೆ ಪ್ರತಿಯಾಗಿ ಸಚಿವ ಆಂಜನೇಯ ಮತ್ತಿತರರು ಒಳಮೀಸಲಾತಿ ಸೌಲಭ್ಯ ನೀಡುವ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ್ದಾರೆ. ರಾಜ್ಯದ ನೂರಾ ನಲವತ್ತೊಂದು ಕ್ಷೇತ್ರಗಳಲ್ಲಿ ದಲಿತ ವರ್ಗದ ಎಡಗೈ ಸಮುದಾಯ ಗಣನೀಯ ಸಂಖ್ಯೆಯಲ್ಲಿದ್ದು ಒಳಮೀಸಲಾತಿ ನೀಡುವಂತೆ ಕಾಂಗ್ರೆಸ್ ಏನಾದರೂ ಕೇಂದ್ರಕ್ಕೆ ಶಿಫಾರಸು ಮಾಡದಿದ್ದರೆ ಕಷ್ಟ ಅನುಭವಿಸಬೇಕಾಗುತ್ತದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಮೂರು ಹೋಳಾಗಿತ್ತು. ಈ ಸಂದರ್ಭದಲ್ಲಿ ಎಡಗೈ ಮತದಾರರೂ ಕಾಂಗ್ರೆಸ್ ಪರ ವಿವಿಧ ಕಾರಣಗಳಿಗಾಗಿ ಮತ ಚಲಾಯಿಸಿದರು. ಹೀಗಾಗಿ ನೂರಾ ಇಪ್ಪತ್ತಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲಲು ನಮಗೆ ಸಾಧ್ಯವಾಯಿತು.

ಆದರೆ ಈಗ ದಲಿತರಿಗೆ ಒಳಮೀಸಲಾತಿ ನೀಡಬೇಕು ಎಂದು ನ್ಯಾಯಮೂರ್ತಿ ಸದಾಶಿವ ಆಯೋಗ ಮಾಡಿದ ಶಿಫಾರಸನ್ನು ಗಂಭೀರವಾಗಿ ಪರಿಗಣಿಸಿ ಈ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕಿದೆ. ಒಂದು ವೇಳೆ ಕೈ ಪಾಳೆಯವೇನಾದರೂ ಶಿಫಾರಸು ಮಾಡದಿದ್ದರೆ ನಾಳೆ ಬಿಜೆಪಿ ಇಲ್ಲವೇ ಜೆಡಿಎಸ್ ಒಳಮೀಸಲಾತಿ ನೀಡುವ ಸಂಬಂಧ ತಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿದರೆ ಎಡಗೈ ಸಮುದಾಯ ದೊಡ್ಡ ಮಟ್ಟದಲ್ಲಿ ಆ ಕಡೆ ವಾಲುತ್ತದೆ.ಪರಿಣಾಮವಾಗಿ ನಮ್ಮಂತವರು ವಿಧಾನಸಭಾ ಚುನಾವಣೆಗೆ ನಿಲ್ಲುವುದೂ ಕಷ್ಟವಾಗಲಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮುಖ್ಯಮಂತ್ರಿಗಳಿಗೆ ವಿವರಿಸಿದ್ದು,ಇದೇ ಕಾರಣಕ್ಕಾಗಿ ಶೀಘ್ರದಲ್ಲೇ ದಲಿತ ನಾಯಕರ ಸಭೆ ಕರೆದು ಅಂತಿಮ ನಿರ್ಧಾರಕ್ಕೆ ಬರಲು ಸಿದ್ಧರಾಮಯ್ಯ ನಿರ್ಧೆರಿಸಿದ್ದಾರೆ. ಕಾಂಗ್ರೆಸ್‍ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ,ಕೆಪಿಸಿಸಿ ಅಧ್ಯಕ್ಷ ಡಾ||ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಸೇರಿದಂತೆ ಹಲ ಪ್ರಮುಖರು ಸಿಎಂ ನಡೆಸಲಿರುವ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.

Facebook Comments

Sri Raghav

Admin