ದ್ವಾಮಲಪಲ್ಲಿಗಡ್ಡ ಗ್ರಾಮದಲ್ಲಿ ವಿಚಿತ್ರ ರೋಗಕ್ಕೆ ನೂರಾರು ಕುರಿ-ಮೇಕೆಗಳು ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

goat--02

ಚಿಂತಾಮಣಿ, ಡಿ.4- ತಾಲೂಕಿನ ಭೂಮಿಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದ್ವಾಮಲಪಲ್ಲಿ ಗಡ್ಡ ಗ್ರಾಮದಲ್ಲಿ ಕಳೆದ 20 ದಿನಗಳಿಂದ ಗ್ರಾಮದ ಕುರಿ ಮತ್ತು ಮೇಕೆಗಳಿಗೆ ವಿಚಿತ್ರ ರೋಗ ಕಾಣಿಸಿ ಕೊಂಡು ಸುಮಾರು 120ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು ಗ್ರಾಮಸ್ಥರು ಕಂಗಾಲಾಗಿದ್ದಾರೆ. ಗ್ರಾಮದ ದೊಡ್ಡ ವೆಂಕಟೇಶಪ್ಪ ಎಂಬುವರಿಗೆ ಸೇರಿದ 10 ಮೇಕೆಗಳು, ಶ್ರೀನಿವಾಸಯ್ಯ 1 ಮೇಕೆ 10 ಕುರಿಗಳು, ಶ್ರೀರಾಮಪ್ಪ 10 ಮೇಕೆಗಳು, ನಾರಾಯಣಸ್ವಾಮಿ 10 ಮೇಕೆಗಳು, ವೆಂಕಟೇಶ್.ವಿ. 8 ಮೇಕೆಗಳು, ರಾಮಾಂಜಪ್ಪ 20 ಕುರಿಗಳು ಮತ್ತು 7 ಮೇಕೆಗಳು, ವೆಂಕಟಸ್ವಾಮಿ 10 ಕುರಿಗಳು ಮತ್ತು 4 ಮೇಕೆಗಳು, ಶಿವಪ್ಪ 4 ಮೇಕೆಗಳು, ಮುನಿಶಾಮಿ, 4 ಕುರಿಗಳು ಹಾಗೂ ಮುನಿರಾಜು ಎಂಬುವರಿಗೆ ಸೇರಿದ ಮೂರು ಕುರಿಗಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ರೋಗ ನಿವಾರಣೆ ಕಾಣದೆ ಗ್ರಾಮಸ್ಥರು ತೀವ್ರ ಕಂಗಾಲಾಗಿದ್ದಾರೆ.

ನಿನ್ನೆ ಸಹ 2 ಕುರಿ ಮತ್ತು 6 ಮೇಕೆಗಳು ಸಾವನ್ನಪ್ಪಿದ್ದು ಇನ್ನು ಎರಡು, ಮೂರು ಕುರಿ ಮೇಕೆಗಳು ಸಾವು ಬುದುಕಿನ ನಡುವೆ ಹೋರಾಟ ನಡೆಸುತ್ತಿವೆ. ಕಳೆದ 20 ದಿನಗಳಿಂದ ದಿನಕ್ಕೆ ಒಂದು ಅಥವಾ ಎರಡು ಕುರಿ ಮೇಕೆಗಳು ಸಾವನ್ನಪ್ಪುತ್ತಿದ್ದು ದಿನೇ ದಿನೇ ಸಾವಿನ ಸಂಖ್ಯ ಏರಿಕೆಯಾಗಿತ್ತು.ಈ ಬಗ್ಗೆ ಪಶು ಪಾಲನ ಇಲಾಖೆಯ ವ್ಶೆದ್ಯರಿಗೆ ತಿಳಿಸಿದಾಗ ಅವರು ಗ್ರಾಮಕ್ಕೆ ಬಂದು ಪರಿಶೀಲನೆ ನಡೆಸಿ ಔಷಧಿ ನೀಡಿ ಹೋದರು ಕುರಿ ಮತ್ತು ಮೇಕೆಗಳು ಸಾವು ನಿಂತಿಲ್ಲ ಎಂದು ರಾಮಾಂಜಪ್ಪ ತಮ್ಮ ಅಳಲು ತೋಡಿಕೊಂಡರು.

ಗ್ರಾಮದ ಬಹುತೇಕ ಮಹಿಳೆಯರು ಸ್ತ್ರೀಶಕ್ತಿ ಸಂಘಗಳಲ್ಲಿ ಸಿಗುವ ಸಾಲದ ಹಣವನ್ನು ಹೈನುಗಾರಿಕೆ ಬೆಳೆಸಬೇಕೆಂಬ ಉದ್ದೇಶದಿಂದ ಕುರಿ ಮತ್ತು ಮೇಕೆಗಳ ಮೇಲೆ ಬಂಡವಾಳ ಹಾಕಿದ್ದೇವೆ, ಇದೀಗ ಆ ಕುರಿ ಮತ್ತು ಮೇಕೆಗಳು ರೋಗಕ್ಕೆ ಸಿಲುಕಿ ಸಾವನ್ನಪ್ಪಿದ್ದು ಅದರ ಸಾಲ ತೀರಿಸಲಿಕ್ಕೆ ನಾವು ಹೆಣಗಾಡುವಂತ ಪರಿಸ್ಥಿತಿ ಬಂದಿದೆ ಸರಕಾರ ದಿಂದ ಸಿಗುರವ ಪರಿಹಾರವನ್ನು ದೊರಕಿಸಿಕೊಡುವಂತೆ ವೆಂಕಟಮ್ಮ ಆಗ್ರಹಿಸಿದರು.

ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸತ್ಯನಾರಾಯಣ್ ಮಾತನಾಡಿ, ಕಳೆದ 20 ದಿನಗಳಿಂದ ಚಿಕಿತ್ಸೆ ನೀಡಿದರೂ ನೂರಾರು ಕುರಿ ಮತ್ತು ಮೇಕೆಗಳು ಸಾವನ್ನಪ್ಪಿವೆ, ಇತ್ತೀಚಿಗಿನ ಹವಾಮಾನ ವೈಪ್ಯರೀತ್ಯ ಜೊತೆಗೆ ಗ್ರಾಮ ಮತ್ತು ಕುರಿ ಮತ್ತು ಮೇಕೆಗಳು ಮೇಯಿಸುವ ಸ್ಥಳ ಗಳು ಬಹುತೇಕ ಜೌಗು ಪ್ರದೇಶ ಅಂದರೆ ಹೆಚ್ಚು ತೇವಾಂಶದ ವತಾವರಣ ಇರುವುದರಿಂದ ಪ್ಯಾಶ್ಚುರೆಲ್ಲಾ ಮಲ್ಪೊಸಿಡಾ ಎಂಬ ಬ್ಯಾಕ್ಟೀರಿಯಾದಿಂದ ರೋಗ ಹರಡಿ ಸಾವನ್ನಪ್ಪಿವೆ, ಅಗತ್ಯ ಚಿಕಿತ್ಸೆ ನೀಡಿದ್ದೇವೆ, ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೇವೆ, ರೋಗ ಹರಡದಂತೆ ಎಚ್ಚರಿಕೆ ವಹಿಸಿದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

Facebook Comments

Sri Raghav

Admin