ಪ್ರತಾಪ್‍ಸಿಂಹ ಪದೇ ಪದೇ ಕಾನೂನು ಉಲ್ಲಂಘಿಸಿದರೆ ಸುಮ್ಮನಿರಲ್ಲ : ರಾಮಲಿಂಗಾರೆಡ್ಡಿ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Ramalingareddy--01

ಬೆಂಗಳೂರು, ಡಿ.4-ಬಿಜೆಪಿಯವರಿಗೆ ಕಾನೂನಿನ ತಿಳುವಳಿಕೆ ಇಲ್ಲ. ಸಂಸದ ಪ್ರತಾಪ್‍ಸಿಂಹ ಪದೇ ಪದೇ ಕಾನೂನು ಉಲ್ಲಂಘನೆ ಮಾಡುವುದನ್ನು ಮುಂದುವರೆಸಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಸದರಾಗಿರುವ ಪ್ರತಾಪ್‍ಸಿಂಹ ಅವರಿಗೆ ಕಾನೂನಿನ ಬಗ್ಗೆ ಚೆನ್ನಾಗಿ ತಿಳಿದಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಾನೂನು ಗೊತ್ತಿದೆ. ಆದರೂ ಪದೇ ಪಚಿದೇ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಇದು ಸರಿಯಲ್ಲ. ನಿನ್ನೆ ಹುಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆಗೆ ಅನುಮತಿ ನೀಡಿದ ಮಾರ್ಗದಲ್ಲಿ ಹೋಗಬೇಕಾಗಿತ್ತು. ಮಾರ್ಗ ಬದಲಾವಣೆ ಮಾಡಿದಾಗ ಪೊಲೀಸರು ತಡೆದಿದ್ದಾರೆ. ಪೊಲೀಸರ ಮೇಲೆ ಅಡ್ಡಾದಿಡ್ಡಿ ಕಾರು ಚಲಾಯಿಸಲು ಪ್ರತಾಪ್‍ಸಿಂಹ ಯತ್ನಿಸಿದ್ದಾರೆ. ಯಾರಿಗೂ ಅಂತಹ ಅಪಾಯಗಳಾಗಿಲ್ಲ.

ಪ್ರತಾಪ್‍ಸಿಂಹ ಪದೇ ಪದೇ ಇಂತಹ ಕಾನೂನು ಉಲ್ಲಂಘನೆ ಮಾಡುತ್ತಲೇ ಇದ್ದಾರೆ. ಬಿಜೆಪಿಯವರು ಅವರ ಕಾರ್ಯಕರ್ತರಿಗೆ, ಪ್ರಮುಖ ನಾಯಕರಿಗೆ ಮೊದಲು ಕಾನೂನು ತಿಳುವಳಿಕೆಯ ತರಬೇತಿ ನೀಡಲಿ. ಪ್ರತಾಪ್‍ಸಿಂಹ, ಅನಂತ್‍ಕುಮಾರ್ ಹೆಗ್ಡೆಯಂತವರಿಗೆ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಖುದ್ದು ಕಾನೂನು ತಿಳುವಳಿಕೆಯ ಅಗತ್ಯ ಇದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು. ರಾಮಜಯಂತಿ, ಹನುಮಜಯಂತಿ, ದತ್ತಪೀಠ ಜಯಂತಿ ವಿಷಯದಲ್ಲಿ ಬಿಜೆಪಿಯವರಿಗಿಂತಲೂ ಕಾಂಗ್ರೆಸ್‍ನವರಿಗೆ ಹೆಚ್ಚಿನ ಭಕ್ತಿ ಇದೆ. ಬಿಜೆಪಿಯವರು ಕೇವಲ ರಾಜಕೀಯ ಕಾರಣಕ್ಕಾಗಿ ಇಂತಹ ಜಯಂತಿಗಳನ್ನು ಮಾಡಿ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಚುನಾವಣೆ ವರ್ಷದಲ್ಲಿ ಇದ್ದಕ್ಕಿದ್ದ ಹಾಗೆ ಬಿಜೆಪಿಯವರಿಗೆ ದೇವರ ಬಗ್ಗೆ ಭಕ್ತಿ ಹೆಚ್ಚಾಗುತ್ತದೆ ಎಂದು ರಾಮಲಿಂಗಾರೆಡ್ಡಿ ಲೇವಡಿ ಮಾಡಿದರು.

ಈ ಮೊದಲು ರಾಮಮಂದಿರ ಕಟ್ಟಲು ಎಲ್ಲಾ ಕಡೆ ಇಟ್ಟಿಗೆ ಸಂಗ್ರಹಿಸಿಕೊಂಡು ಹೋದರು. ರಾಮಮಂದಿರವನ್ನೂ ಕಟ್ಟಿಲ್ಲ, ಆ ಇಟ್ಟಿಗೆಗಳು ಏನಾದವು ಎಂಬುದು ಗೊತ್ತಿಲ್ಲ. ರಾಮಮಂದಿರ ಕಟ್ಟಲು ಯಾರು ಅಡ್ಡಿ ಇದ್ದಾರೆ. ಕೇಂದ್ರದಲ್ಲಿ ಮತ್ತು ಉತ್ತರ ಪ್ರದೇಶ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ. ಆದರೂ ರಾಮಮಂದಿರ ಕಟ್ಟದೆ ಮತ್ತಷ್ಟು ವಿವಾದಾತ್ಮಕ ಅಂಶಗಳನ್ನು ಬಿಜೆಪಿ ಹುಡುಕುತ್ತಿದೆ. ಅವರಿಗೆ ಚುನಾವಣೆ ವರ್ಷದಲ್ಲಿ ಗಲಾಟೆ ಆಗಬೇಕು, ಶಾಂತಿ ಕದಡಬೇಕು, ನಾಲ್ಕು ಜನ ಸಾವನ್ನಪ್ಪಬೇಕು. ಅದರಿಂದ ಅವರಿಗೆ ರಾಜಕೀಯ ಲಾಭವಾಗಬೇಕು. ಅಷ್ಟೇ ಅವರ ಉದ್ದೇಶ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಪ್ಪು ಮಾಡಿದ ಬಿಜೆಪಿ ನಾಯಕರನ್ನು ದಂಡಿಸಲು ನಮಗೆ ಯಾವ ಹಿಂಜರಿಕೆಯೂ ಇಲ್ಲ ಎಂದ ರಾಮಲಿಂಗಾರೆಡ್ಡಿ ಅವರು, ಮುಂದೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಬಿಜೆಪಿಯವರು ಕನಸು ಕಾಣುತ್ತಿದ್ದಾರೆ. ಅದು ಸಾಧ್ಯವಿಲ್ಲ ಎಂದರು.

ತುಮಕೂರಿನಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವ ಬಿಜೆಪಿ ನಾಯಕರನ್ನು ಕೂಡಲೇ ಬಂಧಿಸುವಂತೆ ಸೂಚನೆ ನೀಡಿದ್ದೇನೆ. ಹಲ್ಲೆ ಮಾಡಿದವರು ತಲೆ ಮರೆಸಿಕೊಂಡಿದ್ದಾರೆ. ಎಲ್ಲೇ ಇದ್ದರೂ ಹಿಡಿದು ಒಳಗೆ ಹಾಕುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರನ್ನು ಪ್ರತಾಪ್‍ಸಿಂಹ ಗೂಂಡಾ ಎಂದು ಕರೆದಿದ್ದಾರೆ. ಬಿಜೆಪಿ ನಾಯಕರ ಇತಿಹಾಸಗಳನ್ನು ಕೆಣಕಿದರೆ ಯಾರು ಗೂಂಡಾಗಳು, ಯಾರು ಅಲ್ಲ ಎಂಬುದು ಗೊತ್ತಾಗಲಿದೆ. ಶೀಘ್ರವೇ ಈ ಬಗ್ಗೆ ಮಾಹಿತಿಯೊಂದಿಗೆ ಮಾತನಾಡುತ್ತೇನೆ ಎಂದರು. ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಈಗಿರುವ ಪೊಲೀಸ್ ಠಾಣೆಗಳಲ್ಲೇ ಕಚೇರಿ ಆರಂಭಿಸುವುದಾಗಿ ಗೃಹ ಸಚಿವರು ತಿಳಿಸಿದರು. ಪೊಲೀಸ್ ಸಿಬ್ಬಂದಿಗಳ ಕೊರತೆ ನೀಗಿಸಲು 2ಸಾವಿರ ಹುದ್ದೆಗಳ ನೇಮಕಾತಿ ನಡೆದಿದೆ ಎಂದು ಅವರು ಹೇಳಿದರು.

Facebook Comments

Sri Raghav

Admin