ಪ್ರತಾಪ್ ಸಿಂಹ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

cogress-pro-1

ಬೆಂಗಳೂರು,ಡಿ.4-ಕಾನೂನು ಉಲ್ಲಂಘನೆ ಮಾಡಿದ ಸಂಸದ ಪ್ರತಾಪ್ ಸಿಂಹ ವಿರುದ್ಧ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹುಣಸೂರಿನಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಹನುಮ ಜಯಂತಿ ಸಂದರ್ಭದಲ್ಲಿ ಹನುಮ ಭಕ್ತರನ್ನು ಎತ್ತಿಕಟ್ಟಿ ಗಲಾಟೆ ನಡೆಯುವಂತೆ ಪುಷ್ಟಿ ನೀಡಿ ಕಾನೂನು ಸುವ್ಯವಸ್ಥೆಗೆ ಸಂಸದ ಪ್ರತಾಪ್ ಸಿಂಹ ಅವರು ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿರುವ ಕಾರ್ಯಕರ್ತರು ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು. ಕವಿಕಾ ಅಧ್ಯಕ್ಷ ಎಸ್.ಮನೋಹರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾರ್ಯಕರ್ತರು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ, ಸಂಸದ ಪ್ರತಾಪ್ ಸಿಂಹ, ಶಾಸಕ ಸಿ.ಟಿ.ರವಿ ವಿರುದ್ಧ ಹರಿಹಾಯ್ದರು.

ಸಮಾಜದಲ್ಲಿ ಕೋಮು ದ್ವೇಷಗಳನ್ನು ಸೃಷ್ಟಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಕಳೆದ 23 ವರ್ಷಗಳಿಂದ ಹುಣಸೂರಿನಲ್ಲಿ ಹನುಮ ಜಯಂತಿ ಶಾಂತಿಯುತವಾಗಿ ನಡೆಯುತ್ತಿತ್ತು. ಆದರೆ ಈ ಬಾರಿ ಉದ್ದೇಶಪೂರ್ವಕವಾಗಿಯೇ ಕಾನೂನು ಉಲ್ಲಂಘಿಸಿ ಸಂಘರ್ಷ ಉಂಟಾಗುವಂತೆ ಬಿಜೆಪಿ ನಾಯಕರು ಮಾಡಿದ್ದಾರೆ. ಅದೇ ರೀತಿ ದತ್ತ ಜಯಂತಿ ಸಂದರ್ಭದಲ್ಲಿ ಗೋರಿಗೆ ಹಾನಿ ಉಂಟು ಮಾಡಿ ಕೋಮುಸಂಘರ್ಷ ಉಂಟು ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕಾನೂನು ಕೈಗೆತ್ತಿಕೊಳ್ಳುವ ಬಿಜೆಪಿ ನಾಯಕರನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮರ್ಥಿಸಿಕೊಳ್ಳುತ್ತಿರುವುದು ದುರದೃಷ್ಟಕರ ಎಂದು ಪ್ರತಿಭಟನಾಕಾರರು ವಿಷಾದಿಸಿದರು. ಈ ಎರಡೂ ಘಟನೆ ಸಂಬಂಧ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಯೋಜನಾ ಮಂಡಳಿ ಸದಸ್ಯ ಜಿ.ಜನಾರ್ಧನ್, ಮುಖಂಡರಾದ ಸಲೀಂ, ಗಿರೀಶ್, ಆನಂದ್, ಶೇಖರ್, ಬಾಬು, ರಾಮಕೃಷ್ಣ ಮುಂತಾದವರು ಭಾಗವಹಿಸಿದ್ದರು.

Facebook Comments

Sri Raghav

Admin