ಬೇಲೆಕೇರಿ ಅದಿರು ರಫ್ತು ಪ್ರಕರಣದ ಎಸ್‍ಐಟಿ ತನಿಖೆಗೆ ಸರ್ಕಾರದ ಹಿಂದೇಟು

ಈ ಸುದ್ದಿಯನ್ನು ಶೇರ್ ಮಾಡಿ

Mining--02

ಬೆಂಗಳೂರು,ಡಿ.4-ನವಮಂಗಳೂರು ಹಾಗೂ ಬೇಲೆಕೇರಿ ಬಂದರಿನಿಂದ ಕಾನೂನು ಬಾಹಿರವಾಗಿ ವಿದೇಶಕ್ಕೆ ಬೆಲೆ ಬಾಳವ ಅದಿರನ್ನು ರಫ್ತು ಮಾಡಿದ ಪ್ರಕರಣವನ್ನು ವಿಶೇಷ ತನಿಖಾ ತಂಡ(ಎಸ್‍ಐಟಿ) ವಹಿಸಲು ಸರ್ಕಾರ ಹಿಂದೇಟು ಹಾಕಿರುವುದು ಬೆಳಕಿಗೆ ಬಂದಿದೆ. ಮಾಜಿ ಸಚಿವ ಜನಾರ್ಧನ ರೆಡ್ಡಿ , ಉದ್ಯಮಿ ಅದಾನಿ ಸೇರಿದಂತೆ ಘಟಾನುಘಟಿ ಗಳೇ ಶಾಮೀಲಾಗಿರುವ ಈ ಪ್ರಕರಣವನ್ನು ಎಸ್‍ಐಟಿ ಮೂಲಕ ತನಿಖೆ ನಡೆಸುವಂತೆ ಕಾನೂನು ಇಲಾಖೆ ಮೂಲಕ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

ಆದರೆ ಕಾನೂನು ಇಲಾಖೆಯ ಶಿಫಾರಸ್ಸಿನಂತೆ ಎಸ್‍ಐಟಿಗೆ ವಹಿಸದಂತೆ ಸರ್ಕಾರದಲ್ಲಿರುವ ಪ್ರಭಾವಿ ಸಚಿವರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಿದ್ದಾರೆ. 11ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಅಕ್ರಮ ಅದಿರು ರಫ್ತನ್ನು ಎಸ್‍ಐಟಿಗೆ ವಹಿಸುತ್ತದೆ ಎಂಬ ನಿರೀಕ್ಷೆ ಇತ್ತು. ಇದೀಗ ಪ್ರಭಾವಿಸ ಸಚಿವರೇ ಇದಕ್ಕೆ ಅಡ್ಡಿಯಾಗಿರುವುದರಿಂದ ಸರ್ಕಾರ ಕೂಡ ಏನು ಮಾಡಬೇಕೆಂದು ದಿಕ್ಕು ತೋಚದೆ ಕೈಕಟ್ಟಿ ಕುಳಿತಿದೆ.

ಕಾರಣವೇನು: ನವಮಂಗಳೂರು ಹಾಗೂ ಬೇಲೆಕೇರಿ ಬಂದರಿನಿಂದ ಬಿಜೆಪಿ ಅವಧಿಯಲ್ಲಿ ಬಳ್ಳಾರಿಯ ಜನಾರ್ಧನ ರೆಡ್ಡಿ , ಮಾಜಿ ಸಚಿವ ಆನಂದ್ ಸಿಂಗ್, ಶಾಸಕರಾದ ಸುರೇಶ್ ಬಾಬು, ನಾಗೇಶ್, ಅದಾನಿ ಸಮೂಹ ಸಂಸ್ಥೆ ಸೇರಿದಂತೆ ಮತ್ತಿತರ ಗಣಿ ಮಾಲೀಕರು ಸರ್ಕಾರಕ್ಕೆ ವಂಚಿಸಿ ಸುಮಾರು 25 ಸಾವಿರ ಕೋಟಿ ರೂ. ಬೆಲೆ ಬಾಳುವ ಅದಿರನ್ನು ವಿದೇಶಕ್ಕೆ ರಫ್ತು ಮಾಡಿದ್ದರು ಎಂಬುದು ಲೋಕಾಯುಕ್ತ ತನಿಖೆಯಲ್ಲಿ ಬಹಿರಂಗಗೊಂಡಿತು.
ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಆದರೆ ಸಾಕ್ಷಾಧಾರಗಳ ಕೊರತೆ ಹಿನ್ನೆಲೆಯಲ್ಲಿ ತನಿಖೆ ಸಾಧ್ಯವಿಲ್ಲ ಎಂದು ಪ್ರಕರಣವನ್ನು ಪುನಃ ಸರ್ಕಾರಕ್ಕೆ ಸಿಬಿಐ ಹಿಂದಿರುಗಿಸಿತ್ತು.

ಬಳಿಕ ರಾಜ್ಯ ಸರ್ಕಾರ ತನಿಖೆ ನಡೆಸುವ ಸಂಬಂಧ ಕಾನೂನು ಇಲಾಖೆಯ ಅಭಿಪ್ರಾಯವನ್ನು ಪಡೆದಿತ್ತು. ಎಸ್‍ಐಟಿ ಮೂಲಕ ತನಿಖೆ ನಡೆಸುವುದು ಸೂಕ್ತ ಎಂಬ ಸಲಹೆಯನ್ನು ಕಾನೂನು ಇಲಾಖೆ ನೀಡಿತ್ತು. ಅಡ್ಡಾದ ಅದಾನಿ: ವಿದೇಶಕ್ಕೆ ಕಾನೂನು ಬಾಹಿರವಾಗಿ ಅದಿರು ರಫ್ತು ಮಾಡಿದ ಪ್ರಕರಣದಲ್ಲಿ ಮುಖ್ಯವಾಗಿ ಅದಾನಿ ಕೂಡ ಸೇರಿದ್ದಾರೆ. ಮೂಲತಃ ಕಲ್ಲಿದ್ದಲು ಉದ್ಯಮಿಯಾಗಿರುವ ಇವರು ಕರ್ನಾಟಕಕ್ಕೆ 200ರಿಂದ 300 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಮಾಡುತ್ತಿದ್ದಾರೆ.

ಒಂದೆಡೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಬೇಡಿಕೆಗೆ ತಕ್ಕಂತೆ ಕಲ್ಲಿದ್ದಲು ಪೂರೈಕೆ ಮಾಡದೆ ಇರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ. ಇದೀಗ ಅದಿರು ರಫ್ತು ಪ್ರಕರಣವನ್ನು ಎಸ್‍ಐಟಿಗೆ ವಹಿಸಿದರೆ ಅದಾನಿ ರಾಜ್ಯಕ್ಕೆ ನೀಡುತ್ತಿರುವ ವಿದ್ಯುತ್ತನ್ನು ಬಂದ್ ಮಾಡುವುದರಲ್ಲಿ ಅನುಮಾನವೇ ಇಲ್ಲ. ಇದರಿಂದ ಬೆದರಿರುವ ರಾಜ್ಯ ಸರ್ಕಾರ ಅದಿರು ರಫ್ತು ಪ್ರಕರಣವನ್ನು ಎಸ್‍ಐಟಿಗೆ ವಹಿಸಬೇಕೆ ಇಲ್ಲವೇ ಸಿಐಡಿ ಮೂಲಕ ತನಿಖೆ ನಡೆಸಬೇಕೆ ಎಂಬ ಜಿಜ್ಞಾಸೆಯಲ್ಲಿ ತೊಡಗಿದೆ. ಪ್ರಕರಣವನ್ನು ಹಾಗೆ ಬಿಟ್ಟರೆ ಜನತೆಯ ಕೆಂಗೆಣ್ಣಿಗೆ ಗುರಿಯಾಗಬೇಕಾಗುತ್ತದೆ. ತನಿಖೆ ನಡೆಸಲು ಮುಂದಾದರೆ ಅದಾನಿ ವಿದ್ಯುತ್ ನೀಡುವುದಿಲ್ಲ. ಹೀಗಾಗಿ ಸರ್ಕಾರ ಸದ್ಯಕ್ಕಂತೂ ವೈಯ್ದಾಟದಲ್ಲಿ ಸಿಲುಕಿರುವುದು ಸುಳ್ಳಲ್ಲ

Facebook Comments

Sri Raghav

Admin