ಮನೆಗೆ ಮಾರಿ, ಈ ಊರಿಗೆ ಉಪಕಾರಿ ವಿಜಯ್ ಮಲ್ಯ..! ಏಕೆ ಗೊತ್ತಾ..?

Vijaya-Malya--03ಟಿವಿನ್(ಇಂಗ್ಲೆಂಡ್), ಡಿ.4- ಒಂದು ಕಾಲದಲ್ಲಿ ಅತ್ಯಂತ ಯಶಸ್ವಿ ಉದ್ಯಮಿಯಾಗಿದ್ದ ವಿಜಯ್ ಮಲ್ಯ ಈಗ ಭಾರತೀಯರಿಗೆ ಬ್ಯಾಂಕ್‍ಗೆ ಕೋಟ್ಯಂತರ ರೂ.ಗಳನ್ನು ವಂಚಿಸಿರುವ ಮೋಸಗಾರ ಮತ್ತು ಸುಸ್ತಿದಾರ…! ಆದರೆ, ಇಂಗ್ಲೆಂಡ್‍ನ ಒಂದು ಸುಂದರ ಗ್ರಾಮದ ಮಂದಿಗೆ ಮಲ್ಯ ಪರೋಪಕಾರಿ ಮತ್ತು ದಯಾಳು..!!. ಇದನ್ನು ಮನೆಗೆ ಮಾರಿ ಊರಿಗೆ ಉಪಕಾರಿ ಎನ್ನುವಂತಾಗಿದೆ.

ಇಂಗ್ಲೆಂಡ್ ರಾಜಧಾನಿ ಲಂಡನ್‍ನಿಂದ ಉತ್ತರ ದಿಕ್ಕಿನಲ್ಲಿ 48 ಕಿ.ಮೀ. ದೂರದಲ್ಲಿರುವ ಟಿವಿನ್ ಎಂಬ ಗ್ರಾಮದಲ್ಲಿ ಪ್ರಸ್ತುತ ಮಲ್ಯ ವಾಸವಾಗಿದ್ದಾರೆ. ಅಲ್ಲಿನ ಗ್ರಾಮಸ್ಥರು ಮಲ್ಯರನ್ನು ಸೂಪರ್‍ಮ್ಯಾನ್ ಮತ್ತು ದೊಡ್ಡ ಆಸ್ತಿ ಎಂದೇ ಪರಿಗಣಿಸಿದ್ದಾರೆ. ಇದಕ್ಕೆ ಕಾರಣಗಳೂ ಇವೆ. ಈ ಗ್ರಾಮದಲ್ಲಿ ಸುಮಾರು 2,000 ಮಂದಿ ಇದ್ದಾರೆ. ಟಿವಿನ್ ಹಳ್ಳಿಯ ಹತ್ತಿರದ ಸುತ್ತಮುತ್ತ ಇರುವ ನಗರಗಳಲ್ಲಿ ಅಗರ್ಭ ಸಿರಿವಂತರು, ಸಹಸ್ರ ಕೋಟ್ಯಾಧಿಪತಿಗಳು ಇದ್ದಾರೆ. ಇವರೆಲ್ಲರ ಮಧ್ಯೆ ತಮ್ಮದೇ ಆದ ವರ್ಚಸ್ಸು ಮತ್ತು ಪರೋಪಕಾರದಿಂದ ಮಲ್ಯ ಗ್ರಾಮಸ್ಥರ ಮನಗೆದ್ದಿದ್ದಾರೆ. ಹಳ್ಳಿಗರಿಗೆ ಅಗತ್ಯವಾದ ಅನೇಕ ಸೌಲಭ್ಯಗಳು ಮತ್ತು ಸವಲತ್ತುಗಳನ್ನು ನೀಡಲು ಉದಾರವಾಗಿ ನೆರವಾಗುತ್ತಿರುವ ಮಲ್ಯ, ಗ್ರಾಮಸ್ಥರ ಭಾವನೆಗಳಿಗೂ ಸ್ಪಂದಿಸುತ್ತಿದ್ದಾರೆ. ಕ್ರಿಸ್ಮಸ್ ಪ್ರಯುಕ್ತ ಟಿವಿನ್ ಗ್ರಾಮಕ್ಕಾಗಿ ದುಬಾರಿ ದೇವವೃಕ್ಷ (ಕ್ರಿಸ್ಮಸ್ ಟ್ರೀ) ಖರೀದಿಸಿ ಕೊಡುಗೆಯಾಗಿ ನೀಡಿರುವ ಮಲ್ಯ ಸ್ಥಳೀಯರ ಮನಗೆದ್ದಿದ್ದಾರೆ. ಮಲ್ಯರ ಬಗ್ಗೆ ಗ್ರಾಮದಲ್ಲಿ ಯಾರೊಬ್ಬರಲ್ಲೂ ಕೊಂಕು ಮಾತಿಲ್ಲ. ಅವರು ಈ ಗ್ರಾಮದ ದೊಡ್ಡ ಆಸ್ತಿ. ಮಲ್ಯ ಅವರಂಥವರು ಹಳ್ಳಿಯಲ್ಲಿರುವ ನಮ್ಮ ಅದೃಷ್ಟ ಎನ್ನುತ್ತಾರೆ ರೋಸ್ ಅಂಡ್ ಕ್ರೌನ್ ಪಬ್‍ನ ಬಾರ್‍ಮನ್ ಹೇಳುತ್ತಾರೆ.

ಈ ಗ್ರಾಮದಲ್ಲಿ ಫಾರ್ಮುಲಾ ಒನ್ ಚಾಂಪಿಯನ್ ಲೆವಿಸ್ ಹ್ಯಾಮಿಲ್ಟನ್ ಅವರ ತಂದೆ ವಾಸವಾಗಿದ್ದರು. ಅವರ ಮನೆಯನ್ನು ಮಲ್ಯ ಖರೀದಿಸಿ ಗ್ರಾಮದ ಘನತೆಯನ್ನು ಹೆಚ್ಚಿಸಿದ್ದಾರೆ. ಅಲ್ಲದೇ ಗ್ರಾಮದ ಸುತ್ತಮುತ್ತಲ ಆಸ್ತಿ-ಪಾಸ್ತಿಯನ್ನು ಕೊಂಡು ಟಿವಿನ್‍ಗೆ ಮೌಲ್ಯವನ್ನು ಮಲ್ಯ ವೃದ್ಧಿಸಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.  ಇಲ್ಲಿನ ಮಂದಿಗೆ ಸೂಪರ್ ಮ್ಯಾನ್ ಆಗಿರುವ ಮಲ್ಯ ಬಗ್ಗೆ ಗ್ರಾಮಸ್ಥರಲ್ಲಿ ಎಷ್ಟರ ಮಟ್ಟಿಗೆ ಗೌರವ ಇದೆ ಎಂದರೆ ಅವರನ್ನು ಇಲ್ಲಿಂದ ಕರೆದೊಯ್ಯಲು ನಾನು ಬಿಡುವುದಿಲ್ಲ ಎನ್ನುತ್ತಿದ್ದಾರೆ.

ದೇಶದ 17 ಭಾರತೀಯ ಬ್ಯಾಂಕ್‍ಗಳಲ್ಲಿ 9,000 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಸಾಲ ಎತ್ತುವಳಿ ಮಾಡಿ ಉದ್ದೇಶಿತ ಸುಸ್ತಿದಾರರಾಗಿ ಲಂಡನ್‍ಗೆ ಪರಾರಿಯಾಗಿರುವ ಮಲ್ಯ ಗಡಿಪಾರು ವಿಚಾರಣೆ ಲಂಡನ್‍ನಲ್ಲಿ ಇಂದಿನಿಂದ ಆರಂಭವಾಗಿದೆ.

Facebook Comments

Sri Raghav

Admin