ರಗಡ್ ಚಿತ್ರಕ್ಕೆ ಕ್ಲಾಪ್ ಮಾಡಿದ ಚಾಲೆಂಜಿಂಗ್ ಸ್ಟಾರ್

ಈ ಸುದ್ದಿಯನ್ನು ಶೇರ್ ಮಾಡಿ

Ragged

ಕ್ರ್ಯಾಕ್ ಸಿನಿಮಾದ ನಂತರ ನಟ ವಿನೋದ್ ಪ್ರಭಾಕರ್ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರ ರಗಡ್ ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ಕಳೆದ ವಾರ ನೆರವೇರಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಸಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಚಿತ್ರಕ್ಕೆ ಅರುಣ್ ಕುಮಾರ್ ನಿರ್ಮಾಪಕರಾಗಿ ಬಂಡವಾಳ ಹೂಡುತ್ತಿದ್ದಾರೆ. ಮಹೇಶ್‍ಗೌಡ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಜಿಪುಣ ನನ್ನ ಗಂಡ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗುವ ಮೂಲಕ ಚಿತ್ರರಂಗ ಪ್ರವೇಶಿಸಿದ ಮಹೇಶ್‍ಗೌಡ ಸುಮಾರು 30ಕ್ಕೂ ಹೆಚ್ಚು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ, ಸಹನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ರಗಡ್ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಅಭಿಮನ್ ರಾಯ್ ಈ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಉಳಿದಂತೆ ಚಿತ್ರಕ್ಕೆ ಡ್ಯಾನಿ ಸಾಹಸ ನಿರ್ದೇಶನ, ಮೋಹನ್ ಬಿ.ಕೆರೆ ಕಲಾ ನಿರ್ದೇಶನ, ಮೋಹನ್ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ರಗಡ್ ಚಿತ್ರಕ್ಕೆ ನೀನೆ ಮಲಗಿಸಿರುವ ಗೋರಿಯೊಳಗೆ ನಾನಿನ್ನೂ ಜೀವಂತವಾಗಿದ್ದೇನೆ ಎಂದು ಟ್ಯಾಗ್ ಲೈನ್ ನೀಡಿರುವ ನಿರ್ದೇಶಕರು ಚಿತ್ರವನ್ನು ಹೇಗೆ ತೆರೆಮೇಲೆ ತರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಟೈಸನ್ ಸಿನಿಮಾದ ನಂತದ ಜನ ನನ್ನನ್ನು ಪೊಲೀಸ್ ಆಫೀಸರ್ ಪಾತ್ರದಲ್ಲೇ ಹೆಚ್ಚಾಗಿ ಗುರುತಿಸೋಕೆ ಶುರು ಮಾಡಿದ್ರು. ಆದಾದ ನಂತರ ನನಗೂ ಅಂಥದ್ದೇ ಪಾತ್ರಗಳು ಹುಡುಕಿಕೊಂಡು ಬಂದವು. ಆದ್ರೆ ರಗಡ್ ಸಿನಿಮಾದ ಪಾತ್ರ ನನ್ನ ಹಿಂದಿನ ಎಲ್ಲಾ ಸಿನಿಮಾಗಳಿಗಿಂತಲೂ ವಿಭಿನ್ನವಾಗಿರುವಂಥ ಪಾತ್ರ.

ಒರಟನಾದ್ರೂ, ಪ್ರೀತಿಯ ವಿಷಯ ಬಂದಾಗ ಅತ್ಯಂತ ಮೃದು ಮನಸ್ಸಿನ ಹುಡುಗನಾಗಿ ಈ ಸಿನಿಮಾದಲ್ಲಿ ಕಾಣುತ್ತೇನೆ. ಅದಕ್ಕಿಂತ ಹೆಚ್ಚಾಗಿ ಈಗಲೇ ಚಿತ್ರದ ಪಾತ್ರದ ಬಗ್ಗೆ ಹೆಚ್ಚೇನನ್ನೂ ಹೇಳಲಾರೆ ಎಂದು ನಾಯಕನಟ ವಿನೋದ್ ಪ್ರಭಾಕರ್ ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ನಿರ್ದೇಶಕ ಶ್ರೀಮಹೇಶ್ ಗೌಡ ಮಾತನಾಡಿ ಹಲವು ವರ್ಷಗಳ ಚಿತ್ರ ರಂಗದ ಅನುಭವಗಳನ್ನು ಸೇರಿಸಿ, ಇಂದಿನ ಪ್ರೇಕ್ಷಕರು ಬಯಸುವ ರೀತಿಯಲ್ಲಿ ಇಂಥದ್ದೊಂದು ಸಿನಿಮಾ ಮಾಡುತ್ತಿದ್ದೇನೆ. ಇದೊಂದು ಕಂಪ್ಲೀಟ್ ಎಂಟರ್‍ಟೈನ್ಮೆಂಟ್ ಸಿನಿಮಾ. ಇದರಲ್ಲಿ ಪ್ರೇಕ್ಷಕರು ಬಯಸುವ ಎಲ್ಲಾ ಎಲಿಮೆಂಟ್ಸ್ ಇದೆ. ಈ ಸಿನಿಮಾದ ಮೂಲಕ ವಿನೋದ್ ಪ್ರಭಾಕರ್ ಮತ್ತೊಂದು ಹೊಸ ಲುಕ್‍ನಲ್ಲಿ ಅಭಿಮಾನಿಗಳಿಗೆ ಇಷ್ಟವಾಗ್ತಾರೆ ಎಂದು ಹೇಳಿದರು. ನಿರ್ಮಾಪಕ ಅರುಣ್ ಕುಮಾರ್ ಮಾತನಾಡಿ ಸುಮಾರು ಮೂರು ವರ್ಷಗಳಿಂದ ಒಂದೊಳ್ಳೆ ಸಿನಿಮಾ ಮಾಡ್ಬೇಕು ಅಂತ ಹಲವು ನಿರ್ದೇಶಕರಿಂದ ತುಂಬಾ ಕಥೆಗಳನ್ನು ಕೇಳಿದ್ದೆ. ಆದ್ರೆ ನನಗೆ ಯಾವ ಕಥೆಯೂ ಅಷ್ಟಾಗಿ ಹಿಡಿಸಲಿಲ್ಲ. ರಗಡ್ ಕಥೆ ಕೇಳುತ್ತಿದ್ದಂತೆ ತುಂಬಾ ಇಷ್ಟವಾಯ್ತು. ಜನಕ್ಕೂ ಇಷ್ಟವಾಗುತ್ತೆ ಅನ್ನುವ ನಂಬಿಕೆಯಲ್ಲಿ ಈ ಸಿನಿಮಾ ಮಾಡುತ್ತಿದ್ದೇವೆ. ಇಡೀ ಸಿನಿಮಾದಲ್ಲಿ ಲವ್, ಆ್ಯಕ್ಷನ್, ಸೆಂಟಿಮೆಂಟ್ ಎಲ್ಲವೂ ಇದೆ ಎಂಬುದಾಗಿ ಹೇಳಿಕೊಂಡರು.

Facebook Comments