ಅಮರನಾಥ ಯಾತ್ರೆ ಹತ್ಯಾಕಾಂಡದ ಮೂವರು ಎಲ್‍ಇಟಿ ಉಗ್ರರು ಎನ್‍ಕೌಂಟರ್ ನಲ್ಲಿ ಫಿನಿಷ್

ಈ ಸುದ್ದಿಯನ್ನು ಶೇರ್ ಮಾಡಿ

Encounter--01

ಶ್ರೀನಗರ, ಡಿ.5-ಕಳೆದ ವರ್ಷ ಜುಲೈನಲ್ಲಿ ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸಿದ್ದ ಇಬ್ಬರು ಪಾಕಿಸ್ತಾನಿಯರೂ ಸೇರಿದಂತೆ ಲಷ್ಕರ್-ಎ-ತೈಬಾ(ಎಲ್‍ಇಟಿ) ಉಗ್ರಗಾಮಿ ಸಂಘಟನೆಗೆ ಸೇರಿದ ಮೂವರು ಭಯೋತ್ಪಾದಕರು ದಕ್ಷಿಣ ಕಾಶ್ಮೀರದಲ್ಲಿ ಯೋಧರ ಗುಂಡಿಗೆ ಬಲಿಯಾಗಿದ್ದಾರೆ. ಮತ್ತೊಬ್ಬ ಉಗ್ರನನ್ನು ಬಂಧಿಸಲಾಗಿದೆ. ಕಣಿವೆ ರಾಜ್ಯ ಕಾಶ್ಮೀರ ಈಗ ಯೋಧರು ಮತ್ತು ಭಯೋತ್ಪಾದಕರ ರಣರಂಗವಾಗಿ ಮಾರ್ಪಟ್ಟಿದ್ದು, ಗುಂಡಿನ ಕಾಳಗ ದಿನನಿತ್ಯದ ಸುದ್ದಿಯಾಗುತ್ತಿದೆ.

ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯ ಖಾಜಿಗುಂಡ್‍ನಲ್ಲಿ ಶ್ರೀನಗರಕ್ಕೆ ತೆರಳುತ್ತಿದ್ದ ಸೇನಾ ವಾಹನದ ಮೇಲೆ ನಿನ್ನೆ ಅಪರಾಹ್ನ ಉಗ್ರರು ಗುಂಡಿನ ದಾಳಿ ನಡೆಸಿದರು. ಈ ಆಕ್ರಮಣದಲ್ಲಿ ಯೋಧನೊಬ್ಬ ಹುತಾತ್ಮನಾಗಿ ಕೆಲವು ಯೋಧರು ಗಾಯಗೊಂಡರು. ನಂತರ ಯೋಧರು ಈ ಪ್ರದೇಶವನ್ನು ಸುತ್ತುವರಿದು ಉಗ್ರರಿಗಾಗಿ ಬೇಟೆ ಮುಂದುವರಿಸಿದರು. ಶೋಧದ ವೇಳೆ ಉಗ್ರಗಾಮಿಗಳು ಸೈನಿಕರತ್ತ ಗುಂಡು ಹಾರಿಸಿದಾಗ ಆರಂಭಗೊಂಡ ಎನ್‍ಕೌಂಟರ್ ಇಂದು 2ರ ನಸುಕಿನವರೆಗೆ ಮುಂದುವರಿಯಿತು. ಈ ಎನ್‍ಕೌಂಟರ್‍ನಲ್ಲಿ ಮೂವರು ಭಯೋತ್ಪಾದಕರು ಹತರಾದರು.

ಹತ ಉಗ್ರರನ್ನು ಯಾವರ್ ಬಸಿರ್ (ಸ್ಥಳೀಯ ಭಯೋತ್ಪಾದಕ) ಹಾಗೂ ಪಾಕಿಸ್ತಾನದ ಅಬು ಫುರ್ಕನ್ ಮತ್ತು ಅಬು ಮಾವಿಯಾ ಎಂದು ಗುರುತಿಸಲಾಗಿದೆ. ಈ ಮೂವರು ಎಲ್‍ಇಟಿ ಉಗ್ರಗಾಮಿ ಸಂಘಟನೆಗೆ ಸೇರಿದವರಾಗಿದ್ದು, ಅಮರನಾಥ ಯಾತ್ರಿಕರ ಮೇಲೆ ನಡೆದ ದಾಳಿ ಸೇರಿದಂತೆ ವಿವಿಧ ವಿಧ್ವಂಸಕ ಕೃತ್ಯಗಳಲ್ಲಿ ಶಾಮೀಲಾಗಿದ್ದರು. ಇವರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಎನ್‍ಕೌಂಟರ್ ನಂತರ ಪರಾರಿಯಾಗಿದ್ದ ಮತ್ತೊಬ್ಬ ಉಗ್ರಗಾಮಿಯನ್ನು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಆಸ್ಪತ್ರೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಜುಲೈ 10ರಂದು ಅಮರನಾಥ ಯಾತ್ರಿಗಳ ಮೇಲೆ ಇವರು ನಡೆಸಿದ ದಾಳಿಯಲ್ಲಿ ಎಂಟು ಮಂದಿ ಹತರಾಗಿ, 19 ಮಂದಿ ಗಾಯಗೊಂಡಿದ್ದರು.

Facebook Comments

Sri Raghav

Admin