ಇದೇ 10ರಂದು ಬಿಜೆಪಿ ಕೋರ್ ಕಮಿಟಿ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

BJP--0011

ಬೆಂಗಳೂರು, ಡಿ.5- ರಾಜ್ಯ ಸರ್ಕಾರದ ವಿರುದ್ಧ ಹೋರಾಟ ರೂಪಿಸುವ ಸಂಬಂಧ ಇದೇ 10ರಂದು ಬಿಜೆಪಿ ಕೋರ್ ಕಮಿಟಿ ಸಭೆ ಕರೆದಿದೆ. ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೋರ್ ಕಮಿಟಿ ಸದಸ್ಯರಾದ ಸದಾನಂದಗೌಡ, ಅನಂತಕುಮಾರ್, ಪ್ರಹ್ಲಾದ್ ಜೋಷಿ, ಈಶ್ವರಪ್ಪ, ಜಗದೀಶ್ ಶೆಟ್ಟರ್, ಆರ್.ಅಶೋಕ್, ನಳಿನ್‍ಕುಮಾರ್ ಕಟೀಲ್ ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಪ್ರಮುಖವಾಗಿ ಸಭೆಯಲ್ಲಿ ಎರಡನೆ ಹಂತದ ಪರಿವರ್ತನಾ ರಥಯಾತ್ರೆ ಯಶಸ್ವಿಗೊಳಿಸುವುದು, ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಹನುಮ ಜಯಂತಿ ಆಚರಣೆ ವೇಳೆ ನಡೆದ ಗಲಭೆ ಹಾಗೂ ಸರ್ಕಾರದ ಹಗರಣಗಳನ್ನು ಹೊರತೆಗೆದು ಜನತೆಯ ಮುಂದಿಡುವುದು ಇದರ ಉದ್ದೇಶವಾಗಿದೆ.

ಕಳೆದ ನ.2ರಿಂದ ರಾಜ್ಯಾದ್ಯಂತ ನವ ಕರ್ನಾಟಕ ಪರಿವರ್ತನ ರಥಯಾತ್ರೆ ಕೈಗೊಳ್ಳಲಾಗಿದೆ. ಈಗಾಗಲೇ ಅನೇಕ ಜಿಲ್ಲೆಗಳನ್ನು ಹಾದುಹೋಗಿರುವ ಯಾತ್ರೆ ಜ.25ಕ್ಕೆ ಅಂತ್ಯಗೊಳ್ಳಲಿದೆ. ಉಳಿದಿರುವ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಯಾತ್ರೆ ನಡೆಸಬೇಕೆಂದು ಹೈಕಮಾಂಡ್ ಸೂಚನೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಎರಡನೆ ಹಂತದ ಯಾತ್ರೆ ವೇಳೆ ಕೇಂದ್ರ ಸಚಿವರು ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಸಿ ಯಶಸ್ವಿಗೊಳಿಸುವುದು ಬಿಜೆಪಿಯ ಒಂದಂಶದ ಕಾರ್ಯಕ್ರಮ.

ಇನ್ನು ಸರ್ಕಾರದ ವಿರುದ್ಧ ಕೆಲವು ಭ್ರಷ್ಟಾಚಾರದ ಹಗರಣಗಳನ್ನು ಹೊರತೆಗೆದರೂ ಅದು ನಿರೀಕ್ಷಿತ ಮಟ್ಟದಲ್ಲಿ ಜನರನ್ನು ತಲುಪಲಿಲ್ಲ. ಹೀಗಾಗಿ ಇನ್ನಷ್ಟು ಹಗರಣಗಳನ್ನು ಹೊರತೆಗೆಯುವ ಮೂಲಕ ಕಾಂಗ್ರೆಸ್ ಸರ್ಕಾರ ಕೂಡ ಭ್ರಷ್ಟಾಚಾರಕ್ಕೆ ಹೊರತಾಗಿಲ್ಲ ಎಂಬುದನ್ನು ರುಜುವಾತು ಮಾಡಲು ಬಿಜೆಪಿ ಸಜ್ಜಾಗಿದೆ. ಉಳಿದಂತೆ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಪ್ರತಿಭಟನೆ ನಡೆಸುವುದು, ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ಇನ್ನಷ್ಟು ಮನವರಿಕೆ ಮಾಡಿಕೊಡಲು ಕಾರ್ಯಕರ್ತರ ತಂಡವನ್ನು ಸಿದ್ಧಪಡಿಸುವುದೂ ಸೇರಿದಂತೆ ಮತ್ತಿತರ ಕಾರ್ಯಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.

ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನವೇ ಸ್ಥಳೀಯ ಸರ್ಕಾರದ ವೈಫಲ್ಯಗಳು ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಪಕ್ಷದ ನಿಷ್ಠಾವಂತ ಪಡೆ ಮನೆ ಮನೆಗೆ ತಲುಪಿಸಿದ್ದರಿಂದಲೇ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಯಿತು. ಇದೇ ಮಾದರಿಯನ್ನು ಅನುಸರಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ಕೊಟ್ಟಿದ್ದಾರೆ. ಇನ್ನು ಕಾರ್ಯಕರ್ತರು ವಿರಮಿಸದೆ ಪ್ರತಿನಿತ್ಯ ಪ್ರತಿಭಟನೆ, ಹೋರಾಟ, ಸಂಘಟನೆಯಲ್ಲಿ ತೊಡಗಿಕೊಳ್ಳುವ ಮೂಲಕ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಲು ಸಿದ್ಧರಾಗಬೇಕೆಂದು ಸೂಚಿಸಲಾಗಿದೆ.

ಗುಜರಾತ್ ವಿಧಾನಸಭೆ ಚುನಾವಣೆ ನಂತರ ಅಮಿತ್ ಷಾ ರಾಜ್ಯ ಉಸ್ತುವಾರಿ ಮುರಳೀಧರ್‍ರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್, ಸಹ ಉಸ್ತುವಾರಿ ಪಿಯುಷ್ ಗೋಯಲ್ ಸೇರಿದಂತೆ ಬಿಜೆಪಿಯ ಒಂದು ತಂಡ ರಾಜ್ಯದಲ್ಲೇ ಠಿಕಾಣಿ ಹೂಡಲಿದೆ.

Facebook Comments

Sri Raghav

Admin