ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ ಕಾಯ್ದೆಗೆ ಮತ್ತೆ ವಿಘ್ನ..!

ಈ ಸುದ್ದಿಯನ್ನು ಶೇರ್ ಮಾಡಿ

KPMEA--02

ಬೆಂಗಳೂರು, ಡಿ.5- ಖಾಸಗಿ ಆಸ್ಪತ್ರೆಗಳ ಆಟಾಟೋಪಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಇತ್ತೀಚೆಗೆ ಅಧಿವೇಶನದಲ್ಲಿ ಜಾರಿ ಮಾಡಿದ್ದ ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ ಕಾಯ್ದೆ-2017(ಕೆಪಿಎಂಇ)ಗೆ ಮತ್ತೆ ವಿಘ್ನ ಎದುರಾಗಿದೆ. ಸರ್ಕಾರದ ಉದ್ದೇಶಿತ ಈ ಕಾಯ್ದೆಗೆ ರಾಜ್ಯಪಾಲರು ಸಹಿ ಹಾಕದಂತೆ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಒತ್ತಡ ಹಾಕಲು ಮುಂದಾಗಿದೆ. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿಧಾನಮಂಡಲದ ಉಭಯ ಸದನಗಳಲ್ಲಿ ಈ ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕಾರ ಮಾಡಲಾಗಿತ್ತು. ಆದರೆ ಮಸೂದೆಯಲ್ಲಿ ಸಾಕಷ್ಟು ಲೋಪದೋಷಗಳಿರುವುದರಿಂದ ರಾಜ್ಯಪಾಲರು ಸಹಿ ಹಾಕದಂತೆ ಅವರಿಗೆ ಮನವಿ ಮಾಡಲು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಘಟಕ ತೀರ್ಮಾನಿಸಿದೆ.

ಸಂಘದ ಅಧ್ಯಕ್ಷ ರವೀಂದ್ರ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಒಂದು ವೇಳೆ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿದರೆ ನ್ಯಾಯಾಲಯದಲ್ಲಿ ಹೋರಾಟ ಮಾಡಲು ಸಂಘ ಚಿಂತನೆ ನಡೆಸಿದೆ. ಯಾವುದೇ ಕಾರಣಕ್ಕೂ ಸರ್ಕಾರ ಜಾರಿ ಮಾಡಿರುವ ಮಸೂದೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. 2007ರ ಕೆಪಿಎಂಇ ಕಾಯ್ದೆಯನ್ನು ಅನುಷ್ಠಾನ ಮಾಡಬೇಕೆಂದು ನಾವು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದೆವು. ಕಡೆ ಪಕ್ಷ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿಕ್ರಂಜಿತ್‍ಸೇನ್ ಸಮಿತಿಯ ಶಿಫಾರಸುಗಳನ್ನೂ ಅನುಷ್ಟಾನ ಮಾಡಿಲ್ಲ.

ಮಸೂದೆ ವೈದ್ಯರಿಗೂ ಮಾರಕವಾಗಿರುವುದರಿಂದ ಸಹಿ ಹಾಕದಂತೆ ಶೀಘ್ರದಲ್ಲಿ ಯೇ ನಿಯೋಗವೊಂದು ರಾಜ್ಯಪಾಲರನ್ನು ಭೇಟಿ ಮಾಡಲಿದೆ. ಒಂದು ವೇಳೆ ಅವರು ಸಹಿ ಹಾಕಿದರೆ ಹೈಕೋರ್ಟ್‍ನಲ್ಲಿ ಇದನ್ನು ಪ್ರಶ್ನಿಸಲು ಸಿದ್ಧತೆ ನಡೆಸಿರುವುದಾಗಿ ರವೀಂದ್ರ ಹೇಳಿದ್ದಾರೆ. ಕೇವಲ ಖಾಸಗಿ ಆಸ್ಪತ್ರೆಗಳನ್ನು ಮಾತ್ರ ಕೆಪಿಎಂಇ ಕಾಯ್ದೆಗೆ ಒಳಪಡಿಸದೆ ಸರ್ಕಾರಿ ಆಸ್ಪತ್ರೆಗಳನ್ನೂ ಸೇರಿಸಬೇಕು. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಅಧಿವೇಶನದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಕಾಯ್ದೆಗೆ ಒಳಪಡಿಸುವ ಭರವಸೆ ನೀಡಿದ್ದರು. ಆದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಮಾತ್ರ ವಿರೋಧಿಸಿದ್ದರು ಎಂಬ ಕಾರಣಕ್ಕಾಗಿ ಇದನ್ನು ಕೈಬಿಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಐಎಂಎ ಪದಾಧಿಕಾರಿಗಳು ಪ್ರಶ್ನಿಸಿದ್ದಾರೆ.

ಈ ಹಿಂದೆ ಮಸೂದೆಯಲ್ಲಿ ಖಾಸಗಿ ವೈದ್ಯರು ಪ್ರಮಾದ ಎಸಗಿದರೆ ಅವರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಪ್ರಸ್ತಾಪವಿತ್ತು. ನಾವು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಹೊಸ ಕಾಯ್ದೆಯಲ್ಲಿ ತಪ್ಪು ಮಾಡಿದರೆ ವೈದ್ಯರಿಗೆ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಿ ಶಿಕ್ಷೆ ನೀಡುವ ಅಂಶ ಕಾಯ್ದೆಯಲ್ಲಿದೆ.
ಖಾಸಗಿ ವೈದ್ಯರು ಮಾತ್ರ ತಪ್ಪು ಮಾಡುವುದಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲೂ ಕೂಡ ಪ್ರತಿನಿತ್ಯ ಇಂತಹ ಪ್ರಮಾದಗಳು ನಡೆಯುತ್ತಲೇ ಇರುತ್ತವೆ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯ ಸರಿಯಲ್ಲ. ಒಂದು ಕಣ್ಣಿಗೆ ಸುಣ್ಣ. ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚಿದರೆ ನಾವೂ ಕೂಡ ಕಾನೂನು ಮೂಲಕ ಹೋರಾಟ ನಡೆಸುವುದಾಗಿ ಬಿಗಿ ಪಟ್ಟು ಹಿಡಿದಿದ್ದಾರೆ.

ಬೆಳಗಾವಿ ಅಧಿವೇಶನಕ್ಕೂ ಮುನ್ನ ಸರ್ಕಾರ ಈ ಕಾಯ್ದೆಯನ್ನು ಮಂಡನೆ ಮಾಡಲು ಮುಂದಾದಾಗ ರಾಜ್ಯಾದ್ಯಂತ ಭಾರೀ ಕೋಲಾಹಲವೇ ಉಂಟಾಗಿತ್ತು. ಸತತ 4ರಿಂದ 5 ದಿನಗಳ ಕಾಲ ನಿರಂತರವಾಗಿ ವೈದ್ಯರು ಪ್ರತಿಭಟನೆ ನಡೆಸಿದ ಕಾರಣ 66 ಮಂದಿ ಸಾವನ್ನಪ್ಪಿ, ಸಾವಿರಾರು ಮಂದಿ ಚಿಕಿತ್ಸೆ ಇಲ್ಲದೆ ಪರದಾಡುವಂತಾಗಿತ್ತು. ಕೊನೆಗೆ ಸರ್ಕಾರ ಮತ್ತು ಐಎಂಎ ನಡುವೆ ನಡೆದ ಸಂಧಾನ ಯಶಸ್ವಿಯಾಗಿತ್ತು. ವೈದ್ಯರು ಮುಂದಿಟ್ಟಿದ್ದ ಕೆಲವು ಬೇಡಿಕೆಗಳಿಗೆ ಸರ್ಕಾರ ಅಸ್ತು ಎಂದಿತ್ತು. ಆದರೂ ಪುನಃ ವೈದ್ಯಾಧಿಕಾರಿಗಳು ಮಸೂದೆ ವಿರೋಧಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

Facebook Comments

Sri Raghav

Admin