ಕೆಎಸ್‍ಆರ್‍ಟಿಸಿ ವೋಲ್ವೋ- ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ : ಮೂವರ ದುರ್ಮರಣ

ಹಾಸನ, ಡಿ.5-ಬೆಳಗಿನ ಜಾವ ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಪಘಾತದಲ್ಲಿ ಫಾತೀಮಾ(27), ಅಬ್ದುಲ್ ಸಲಾಂ(54) ಸ್ಥಳದಲ್ಲೇ ಮೃತಪಟ್ಟರೆ, ಯಶೋಧಾ(35) ಎಂಬುವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.  ಇಂದು ಬೆಳಗಿನ ಜಾವ 2.30ರಲ್ಲಿ ಕೆಎಸ್‍ಆರ್‍ಟಿಸಿ ಬಸ್ ಉಡುಪಿಯಿಂದ ಬೆಂಗಳೂರು ಕಡೆಗೆ ಹೋಗುತ್ತಿತ್ತು. ದುರ್ಗಾಂಬ ಸ್ಲೀಪರ್ ಕೋಚ್ ಖಾಸಗಿ ಬಸ್ ಬೆಂಗಳೂರಿನಿಂದ ಮಂಗಳೂರಿಗೆ ಕಡೆಗೆ ತೆರಳುತ್ತಿತ್ತು.

ಈ ಎರಡೂ ಬಸ್‍ಗಳು ಅತಿವೇಗವಾಗಿ ಸಂಚರಿಸುತ್ತಿದ್ದಾಗ ಆಲೂರು ತಾಲ್ಲೂಕಿನ ಹೆದ್ದುರ್ಗ ಗ್ರಾಮದ ಬಳಿ ಬರುತ್ತಿದ್ದಂತೆ ಚಾಲಕರ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಒಬ್ಬರು ಹಾಗೂ ದುರ್ಗಾಂಬ ಬಸ್‍ನಲ್ಲಿ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಸಾರಿಗೆ ಬಸ್ ಚಾಲಕ ದಿನಕರ್ ಹಾಗೂ ಖಾಸಗಿ ಬಸ್ ಚಾಲಕ ಇಬ್ಬರೂ ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೆ, ಕೆಎಸ್‍ಆರ್‍ಟಿಸಿ ಬಸ್‍ನಲ್ಲಿದ್ದ ಪ್ರಯಾಣಿಕರು ಹಾಗೂ ದುರ್ಗಾಂಬ ಬಸ್‍ನಲ್ಲಿದ್ದ 5ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಇವರನ್ನು ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮುಂಜಾನೆ ಸಂಭವಿಸಿದ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಸಕಲೇಶಪುರ ಪೊಲೀಸರು ಹಾಗೂ ಹಾಸನ ಆಲೂರು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಸುಗಮ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Facebook Comments

Sri Raghav

Admin