ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್-ಸಿಎಂ ನಡುವೆ ನಿಲ್ಲದ ಶೀತಲ ಸಮರ

ಈ ಸುದ್ದಿಯನ್ನು ಶೇರ್ ಮಾಡಿ

param

ಬೆಂಗಳೂರು, ಡಿ.5- ಎತ್ತು ಏರಿಗೆ, ಕೋಣ ನೀರಿಗೆ ಎಂಬಂತಾಗಿದೆ ಕೆಪಿಸಿಸಿ ಅಧ್ಯಕ್ಷ  ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆ. ಕೆಪಿಸಿಸಿ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಾಲ್ಗೊಳ್ಳುತ್ತಿಲ್ಲ. ಶಿಷ್ಟಾಚಾರದ ನೆಪದಲ್ಲಿ ಪರಮೇಶ್ವರ್ ಅವರು ಸರ್ಕಾರದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಅದೇ ರೀತಿ ಸರ್ಕಾರದ ಕಾರ್ಯಕ್ರಮವಿದೆ ಎಂದು ನೆಪಹೇಳಿ ಪಕ್ಷದ ಚಟುವಟಿಕೆಗಳಿಂದ ಸಿದ್ದರಾಮಯ್ಯನವರು ದೂರ ಉಳಿಯುತ್ತಿದ್ದಾರೆ.

ಈ ಇಬ್ಬರ ನಡುವಿನ ಶೀತಲ ಸಮರ ಹಾಗೆಯೇ ಮುಂದುವರಿದಿದೆ. ಡಿ.13ರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನ, ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆಪದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇದರಲ್ಲಿ ಪರಮೇಶ್ವರ್ ಅವರು ಪಾಲ್ಗೊಳ್ಳುತ್ತಿಲ್ಲ. ಅದೇ ರೀತಿ ವಿಭಾಗೀಯ ಮಟ್ಟದಲ್ಲಿ ಪಕ್ಷ ಕೈಗೊಂಡಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಳ್ಳುತ್ತಿಲ್ಲ. ಇಂದಿನಿಂದ ಮೂರು ದಿನಗಳ ಕಾಲ ಪಕ್ಷದ ವತಿಯಿಂದ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಸಿಎಂ ಪಾಲ್ಗೊಳ್ಳುತ್ತಿಲ್ಲ. ಸರ್ಕಾರಿ ಕಾರ್ಯಕ್ರಮಗಳ ನೆಪದಲ್ಲಿ ಸಭೆಯಿಂದ ದೂರವೇ ಉಳಿದಿದ್ದಾರೆ. ಹೀಗಾಗಿ ಉತ್ತರ, ದಕ್ಷಿಣ ಧೃವ ಎಂಬಂತಾಗಿದೆ ಎಂದು ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಪಕ್ಷದ ಉಸ್ತುವಾರಿ ವೇಣುಗೋಪಾಲ್ ಹಾಗೂ ಹೈಕಮಾಂಡ್ ವರಿಷ್ಠರು ಇಬ್ಬರೂ ಒಟ್ಟಿಗೆ ಹೋಗಬೇಕು ಎಂಬ ಫರ್ವಾನ್ ಹೊರಡಿಸಿದ್ದಾರೆ. ಇನ್ನೂ ಅಂತಹ ಪರಿಸ್ಥಿತಿ ಬಂದಂತೆ ಇಲ್ಲ. ಚುನಾವಣೆ ವೇಳೆಗೆ ಏನಾಗುತ್ತದೆಯೋ ಕಾದು ನೋಡಬೇಕು.

Facebook Comments

Sri Raghav

Admin