‘ನಾನು ಟಾಂಟಾಂ ಹೊಡೆಯೋಲ್ಲ, ಫೆಬ್ರವರಿಯಲ್ಲಿ ಬಿಎಸ್‍ವೈ ಹಗರಣಗಳನ್ನು ಬಯಲು ಮಾಡ್ತೀನಿ’

ಈ ಸುದ್ದಿಯನ್ನು ಶೇರ್ ಮಾಡಿ

patil

ವಿಜಯಪುರ, ಡಿ.5- ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ತೀವ್ರಗೊಳ್ಳುತ್ತಿವೆ.ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರ ಹಗರಣಗಳನ್ನು ಬಯಲು ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೆ ನೀಡಿದ್ದ ಬೆನ್ನಲ್ಲೆ ತಿರುಗೇಟು ನೀಡಿರುವ ಎಂ.ಬಿ.ಪಾಟೀಲ್, ನಾನು ಯಡಿಯೂರಪ್ಪನ ರೀತಿ ಟಾಂ ಟಾಂ ಹೊಡೆಯುವುದಿಲ್ಲ. ಫೆಬ್ರವರಿಯಲ್ಲಿ ಬಿಎಸ್‍ವೈ ಹಗರಣಗಳನ್ನು ಬಯಲಿಗೆಳೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಯಡಿಯೂರಪ್ಪ ಅವರು ವಿಜಯಪುರ ಜಿಲ್ಲೆಯಲ್ಲಿ ನಡೆಸಿದ ಪರಿವರ್ತನಾ ರ್ಯಾಲಿಯುದ್ದಕ್ಕೂ ನನ್ನ ವಿರುದ್ಧ ಹಗರಣಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಅರಿವೆಯಲ್ಲಿ ಹಾವು ಬಿಟ್ಟರು ಎಂದು ವ್ಯಂಗ್ಯವಾಡಿದ್ದಾರೆ.
ಆದರೆ, ನಾನು ಫೆಬ್ರವರಿಯಲ್ಲಿ ಅವರ ಹಗರಣಗಳನ್ನು ಹೊರಹಾಕುತ್ತೇನೆ. ಈ ಬಗ್ಗೆ ನಾನು ಮುಂಚೆಯೇ ಹೇಳಿದ್ದೇನೆ ಎಂದು ತಿಳಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಸಂಪನ್ಮೂಲ ಇಲಾಖೆ ಕಾಮಗಾರಿಗಳ ಬಗ್ಗೆ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಬಂದು ಪರಿಶೀಲನೆ ಮಾಡುತ್ತಾರಂತೆ. ಕಳಪೆ ಕಾಮಗಾರಿಯಾದರೆ ಅದಕ್ಕೆ ಸಂಬಂಧಪಟ್ಟ ಗುತ್ತಿಗೆದಾರರು ಹೊಣೆಯಾಗುತ್ತಾರೆ. ಸಚಿವನಾದ ನನಗೆ ಯಾವ ಸಂಬಂಧವೂ ಇಲ್ಲ. ಯಡಿಯೂರಪ್ಪನಿಗೆ ಈ ಬಗ್ಗೆ ತಿಳುವಳಿಕೆ ಇಲ್ಲ ಎಂದು ಹರಿಹಾಯ್ದಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಅವರು ಇದೇ ತಿಂಗಳ 15ಕ್ಕೆ ಮಹದಾಯಿಯಿಂದ ನೀರು ಹರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಬಹಳ ಸಂತೋಷ. ಅವರನ್ನು ನಾನು ಅಭಿನಂದಿಸುತ್ತೇನೆ. ಆದರೆ, ಇದು ಹೇಗೆ ಸಾಧ್ಯ ಎಂಬುದು ಯಕ್ಷಪ್ರಶ್ನೆಯಾಗಿದೆ. ಅಲ್ಲಿ ಡ್ಯಾಮ್ ಇಲ್ಲ, ಅದು ಹೇಗೆ ನೀರು ಹರಿಸುತ್ತಾರೆ ಎಂಬುದನ್ನು ನೋಡುತ್ತಿದ್ದೇನೆ. ಒಂದು ವೇಳೆ ಅವರು ನೀರು ಹರಿಸಿದ್ದೇ ಆದರೆ ಭಗೀರಥನಿಗಿಂತಲೂ ದೊಡ್ಡವರಾಗುತ್ತಾರೆ ಎಂದು ಎಂ.ಬಿ.ಪಾಟೀಲ್ ಟೀಕಿಸಿದ್ದಾರೆ.
ಡಿ.10ರಂದು ಲಿಂಗಾಯತ ರ್ಯಾಲಿ: ಲಿಂಗಾಯತ ಪ್ರತ್ಯೇಕ ಧರ್ಮ ಸಂಬಂಧ ಡಿ.10ರಂದು ಬೆಳಗ್ಗೆ 11 ಗಂಟೆಗೆ ವಿಜಯಪುರದ ಅಂಬೇಡ್ಕರ್ ಮೈದಾನದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಮಾಜಿ ಸಚಿವ ಬಸವರಾಜ ಹೊರಟ್ಟಿ, ಸಚಿವರಾದ ಬಸವರಾಜ ರಾಯರೆಡ್ಡಿ, ವಿನಯ್ ಕುಲಕರ್ಣಿ, ಶರಣ ಪ್ರಕಾಶ್ ಪಾಟೀಲ್, ಸಂಸದ ಪ್ರಕಾಶ್ ಹುಕ್ಕೇರಿ ಸೇರಿದಂತೆ ವಿವಿಧ ಮುಖಂಡರು ಭಾಗಿಯಾಗಲಿದ್ದಾರೆ. ಬಸವ ಕಲ್ಯಾಣ, ಇಂಗಳೇಶ್ವರ, ಬಸವನ ಬಾಗೇವಾಡಿ, ಕೂಡಲ ಸಂಗಮ, ಬಾಲ್ಕಿಯಿಂದ ಜ್ಯೋತಿಷಿಗಳು ಆಗಮಿಸಲಿದ್ದಾರೆ. ನಾವು ಹಿಂದೂಗಳಲ್ಲ, ನಮ್ಮನ್ನು ಯಾರೋ ಹಿಂದೂಗಳಲ್ಲಿ ಸೇರಿಸಿ ಶೂದ್ರರನ್ನಾಗಿ ಮಾಡಿದ್ದಾರೆ. ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ಬಸವಣ್ಣನಿಗೆ ಮಾನ್ಯತೆ ಸಿಗಬೇಕು. ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು. ನಮ್ಮ ಒಟ್ಟಿಗೆ ಬನ್ನಿ, ಸಂತೋಷ. ಬರದೆ ಇದ್ದರೆ ವೀರಶೈವ ಸ್ವತಂತ್ರ ಧರ್ಮ ಎಂದು ಅನ್ನಿ ಅಭ್ಯಂತರವಿಲ್ಲ. ಬೇಕಿದ್ದರೆ ವೀರಶೈವ ಸ್ವತಂತ್ರ ಧರ್ಮ ಎಂದು ಮೀಸಲಾತಿ ಪಡೆಯಿರಿ. ನಮ್ಮ ಅಭ್ಯಂತರವಿಲ್ಲ. ಆದರೆ, ವೀರಶೈವ ಲಿಂಗಾಯತ ಎಂದು ಹೇಳಬೇಡಿ ಎಂದು ವೀರಶೈವರಲ್ಲಿ ಮನವಿ ಮಾಡಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗುವ ಭರವಸೆ ಇದೆ. ಒಂದು ವೇಳೆ ಮಾನ್ಯತೆ ನೀಡದಿದ್ದರೆ ಅನಿವಾರ್ಯವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದು ಬಸವ ಜಾಗೃತಿ ಸಭೆ. ಈ ಬಾರಿ ಯಾರ ವಿರುದ್ಧವೂ ಸ್ವಾಮೀಜಿಗಳು ಟೀಕೆ ಮಾಡದಂತೆ ಮನವಿ ಮಾಡಿದ್ದೇವೆ ಎಂದರು.
ಬಬಲೇಶ್ವರದಿಂದಲೇ ಸ್ಪರ್ಧೆ: ನಾನು ಬಬಲೇಶ್ವರ ಮತಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. 50 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತೇನೆ. ಯಾರಿಂದಲೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

Facebook Comments

Sri Raghav

Admin